ಬೆಂಗಳೂರು: ಹಿಂದೊಮ್ಮೆ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ನರ್ಸ್ ರೂಪದಲ್ಲಿ ಬಂದ ಕಳ್ಳಿಯೊಬ್ಬಳು (Thief Case) ಶಿಶು ಕಳವು ಮಾಡಿದ್ದಳು. ಈಗ ಇದೇ ರೀತಿ ಡಾಕ್ಟರ್ ವೇಷ ತೊಟ್ಟ ಮಹಿಳೆಯೊಬ್ಬಳು ರೋಗಿಗಳ ಬಂಗಾರವನ್ನು ಕದ್ದು ಪರಾರಿ ಆಗಿರುವ ಘಟನೆ ಅಶೋಕ ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ನಡೆದಿದೆ.
ರಮೇಶ್ ಎಂಬಾತ ಅನಾರೋಗ್ಯ ಹಿನ್ನೆಲೆ ತಮ್ಮ ತಾಯಿ ಸರಸಮ್ಮರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದ್ದರು. ಕಳೆದ ಶನಿವಾರ ಮಧ್ಯಾಹ್ನದ ಹೊತ್ತಿಗೆ ಡಾಕ್ಟರ್ ವೇಷಧಾರಿಯೊಬ್ಬಳು ವಾರ್ಡ್ ಒಳಗೆ ಹೋಗಿದ್ದಾಳೆ. ಈ ವೇಳೆ ನಿಮ್ಮ ತಾಯಿಗೆ ಚಿಕಿತ್ಸೆ ನೀಡಬೇಕು, ಹೊರ ಹೋಗಿ ಎಂದು ರಮೇಶ್‌ರನ್ನು ಹೊರ ಕಳಿಸಿದ್ದಾಳೆ.
ಇದನ್ನೂ ಓದಿ | Puneeth Rajkumar : 23 ಅಡಿ ಎತ್ತರದ ಪುನೀತ್ ರಾಜಕುಮಾರ್ ಪ್ರತಿಮೆ ನಿದಿಗೆಯಲ್ಲಿ ಸಿದ್ಧ; ಜ.21ಕ್ಕೆ ಬಳ್ಳಾರಿಯಲ್ಲಿ ಅನಾವರಣ
ಬಳಿಕ ಚಿಕಿತ್ಸೆ ನೆಪದಲ್ಲಿ ಈ ನಕಲಿ ಡಾಕ್ಟರ್ ಸರಸಮ್ಮನ ಕೈನಲ್ಲಿದ್ದ ಉಂಗುರ ಮತ್ತು ಕುತ್ತಿಗೆಯಲ್ಲಿದ್ದ 41 ಗ್ರಾಂ ಸರ ಬಿಚ್ಚಿಸಿದ್ದಾಳೆ. ನಂತರ ಬಂಗಾರ ದೋಚಿ ಮೆಲ್ಲಗೆ ಎಸ್ಕೇಪ್ ಆಗಿರುವ ದೃಶ್ಯವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇವಲ ರಮೇಶ್ ಅವರ ತಾಯಿಯಲ್ಲದೆ ಬೇರೆ ವಾರ್ಡ್‌ನಲ್ಲಿಯೂ ಕೈ ಚಳಕ ತೋರಿರುವುದು ತಿಳಿದು ಬಂದಿದೆ.
ಸಿಸಿಟಿವಿ ಫೂಟೇಜ್ ಗಮನಿಸಿದಾಗ ಪ್ರೊಫೆಶನಲ್ ಡಾಕ್ಟರ್ ರೀತಿಯೇ ವಾರ್ಡ್‌ಗೆ ಎಂಟ್ರಿ ಕೊಟ್ಟಿದ್ದಾಳೆ. ತಾನು ತೊಟ್ಟಿದ್ದ ಕ್ರೀಮ್ ಕಲರ್ ಚೂಡಿದಾರ್‌ಗೆ ಬಿಳಿ ಬಣ್ಣದ ಎಪ್ರಾನ್ ಹಾಕಿದ್ದಳು. ಮುಖದ ಚಹರೆ ತಿಳಿಯಬಾರದೆಂದು ಮಾಸ್ಕ್ ಧರಿಸಿ ಆಸ್ಪತ್ರೆಯ ವಾರ್ಡ್‌ಗೆ ಆಗಮಿಸಿದ್ದಳು.
ಯಾರಿಗೂ ಅನುಮಾನ ಬಾರದಂತೆ ನಡೆನುಡಿ ಇದ್ದಿದ್ದರಿಂದ ನಿಜವಾದ ವೈದ್ಯೆ ಆಗಿರಬೇಕೆಂದು ನಂಬಿದ್ದೇ ಎಡವಟ್ಟಿಗೆ ಕಾರಣವಾಗಿದೆ. ಆಸ್ಪತ್ರೆಯವರ ವೈಫಲ್ಯ ಎದ್ದು ಕಾಣುತ್ತಿದ್ದು, ಈ ಬಗ್ಗೆ ನಿಗಾವಹಿಸಬೇಕೆಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಡಾಕ್ಟರ್‌ಗೆ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗ: ನ್ಯಾಯಾಂಗ ಬಂಧನ ಮುಂದುವರಿಕೆ