Site icon Vistara News

ಇದು ಕೇವಲ ಹೋರಿಯಲ್ಲ; ಸದ್ದುಗದ್ದಲ, ಕುಣಿತ ಭಜನೆಗಳ ನಡುವೆ ಖುಷಿಯಲ್ಲಿ ನಡೆಯೋ ಸಂಯಮದ ಬಸವಣ್ಣ!

Gadaga mundargi basavanna

#image_title

ಗದಗ: ಸಾಮಾನ್ಯವಾಗಿ ಹೋರಿ ಅಂದಾಕ್ಷಣ ಬೆದರೋದು ಸಹಜ. ಕಾರಣ, ಅದರ ಹಾಯುವ, ತಿವಿಯುವ ಗುಣ. ಆದರೆ ದೇವರ‌ ಪವಾಡ‌‌ವೋ ಅಥವಾ ಸಹವಾಸದ ಫಲವೋ ಎಂಬಂತೆ ಇಲ್ಲೊಂದು ಹೋರಿ ಭಜನಾ ಪದಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕೋದನ್ನು ನೋಡಿದ್ರೆ ಯಾರಾದರೂ ಅಚ್ಚರಿ ಪಡಲೇಬೇಕು.

ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ 153ನೇ ಜಾತ್ರಾ ಮಹೋತ್ಸವ ಈಗ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಥದ ಎದುರಿನಲ್ಲಿ ಸಾಗುವ ಕಲಾತಂಡಗಳ ಮೆರವಣಿಗೆಯಲ್ಲಿ ಕುಮಾರೇಶ್ವರ ಭಜನಾ ತಂಡ ಭಾಗವಹಿಸಿತ್ತು.

ಸುಮಾರು 12 ಜನರನ್ನೊಳಗೊಂಡ ಭಜನಾ ಸಂಘದವರು ಭಕ್ತಿಗೀತೆಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ‌ ಸುತ್ತು ಭಜನೆಗೆ ಕುಣಿಯುತ್ತಿದ್ದರೆ ಹೋರಿಯೊಂದು ಮಧ್ಯದಲ್ಲಿ ಸಾವಧಾನವಾಗಿ ಹೆಜ್ಜೆ ಹಾಕುತ್ತಿತ್ತು. ಧ್ವನಿವರ್ಧಕ ಹಾಗೂ ವಾದ್ಯಗಳ ಶಬ್ದಕ್ಕೆ ಬೆದರದೇ ಸಮಾಧಾನದಿಂದ ಸಾವಧಾನದ ಹೆಜ್ಜೆ ಹಾಕಿದ್ದು ಜಾತ್ರೆಯಲ್ಲಿ ನೇತೃತ್ವ ವಹಿಸಿದ್ದ ಹಲವಾರು‌ ಮಠಾಧೀಶರ ಮತ್ತು ನೆರೆದ ಸಹಸ್ರಾರು ಭಕ್ತರ ಗಮನ ಸೆಳೆಯಿತು.

ಬಾಗಲಕೋಟೆ ಜಿಲ್ಲೆಯ ಶಿವಯೋಗಮಂದಿರ ಪಕ್ಕದ ನಂದಿಕೇಶ್ವರ ಗ್ರಾಮದ ಕುಮಾರೇಶ್ವರ ಭಜನಾ‌ ಸಂಘ ಇದಾಗಿದ್ದು, ಈಗಾಗಲೇ ನಾಡಿನುದ್ದಗಲಕ್ಕೂ ಹಲವಾರು ಕಾರ್ಯಕ್ರಮಗಳನ್ನ ನೀಡುತ್ತಾ‌ ಬಂದಿದೆ.

ಇನ್ನು ಹೋರಿಯ‌ ಸಾವಧಾನದ ವಿಶೇಷತೆಗೆ ಹಾನಗಲ್ಲ ಗುರು ಕುಮಾರ ಮಹಾಸ್ವಾಮಿಗಳ ಆಶಿರ್ವಾದವೇ ಮುಖ್ಯ ಕಾರಣವಂತೆ. ಸದ್ಯ ಈ ಪರಂಪರೆಯ ನಾಲ್ಕನೇ ಹೋರಿ ಇದಾಗಿದ್ದು, ಕರುವಾಗಿದ್ದಾಗ, ಕುಮಾರೇಶ್ವರನ ಗದ್ದುಗೆ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಭಜನಾ ಸಂಘದ ಜೊತೆಗೆ ಬಿಡುತ್ತಾರಂತೆ. ನಂತರ ಸಂಘದ ಜನರ ಸಾಮಿಪ್ಯ,‌ ಬಾಂಧವ್ಯದೊಂದಿಗೆ ಹೋರಿ ಮುಗ್ಧತೆಯ ಬಸವಣ್ಣನಾಗಿ ಭಜನಾ ತಂಡದಲ್ಲಿ ಹೆಜ್ಜೆ ಹಾಕುತ್ತಾ‌ ಬಂದಿರುವುದು ಸಂಪ್ರದಾಯದಲ್ಲಿದೆ.

ಉತ್ತರ‌ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಪರಂಪರೆಯ ಜಾತ್ರೆಯಂದೇ ಖ್ಯಾತಿ ಪಡೆದಿರುವ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠದ ಜಾತ್ರೆಯಲ್ಲಿ ಈ ಭಜನಾ ತಂಡ ಹಾಗೂ ಬಸವಣ್ಣನ ಸ್ವರೂಪವಾದ ಹೋರಿ, ಜಾತ್ರಾ ಮಹೋತ್ಸವದ ರಥೋತ್ಸವ ಮೆರವಣಿಗೆಯಲ್ಲಿ ಮುಖ್ಯ ಆಕರ್ಷಣೆಯಾಗಿದೆ. ಅಸಂಖ್ಯಾತ ಭಕ್ತರು ವಿಶಿಷ್ಟ ಕಲಾ ತಂಡಕ್ಕೆ ಶಹಬ್ಬಾಸ್ ಕೊಟ್ಟರೆ, ಸಾವಧಾನದ ಬಸವಣ್ಣನಿಗೆ ಭಕ್ತಿಯ ನಮನಗಳನ್ನು ಸಲ್ಲಿಸಿದ್ದು ಸುಳ್ಳಲ್ಲ.

ಇದನ್ನೂ ಓದಿ : Motivational story : ನಾವು ಮಾಡಿದ ಕೆಲಸದ ಫಲ ನಮಗೇ ಸಿಗುತ್ತಲ್ವಾ?

Exit mobile version