ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಇನ್ನು ಯಾವತ್ತೂ ತಲೆ ಎತ್ತದಂತೆ ಅಂತಿಮ ಮೊಳೆ ಹೊಡೆಯುವ ಚುನಾವಣೆ ಇದಾಗಲಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದರು. ಬಿಜೆಪಿ ರಥಯಾತ್ರೆಯ (BJP Rathayatre) ಕುರಿತು ಮಾಹಿತಿ ಹಂಚಿಕೊಳ್ಳಲು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಮೂರು ತಿಂಗಳಿನಿಂದ ನಡೆದ ಸರ್ವೇಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ನಾವು ಬಹುಮತ ದಾಟಿ ಅತಿ ಹೆಚ್ಚು ಸ್ಥಾನಗಳೊಂದಿಗೆ ವಿಧಾನಸಭೆಯಲ್ಲಿ ಅಧಿಕಾರ ಪಡೆಯಲಿದ್ದೇವೆ ಎಂದು ಅಶೋಕ್ ತಿಳಿಸಿದರು. ಹಳೆ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಶ್ವಮೇಧ ಆರಂಭವಾಗಿದೆ. ರಾಜ್ಯದಾದ್ಯಂತ ಬಿಜೆಪಿ ಹವಾ ಇದೆ. ನಮ್ಮಲ್ಲಿ ನಾಯಕತ್ವ ಇದೆ. ಅವರಲ್ಲಿ (ಕಾಂಗ್ರೆಸ್) ಗುಂಪುಗಾರಿಕೆ ಇದೆ ಎಂದು ಆರೋಪಿಸಿದರು ಅಶೋಕ್.
ಕೆಂಪೇಗೌಡರು ಕಟ್ಟಿಸಿದ ಆವಟಿಯ ಚನ್ನಕೇಶವ ದೇವಾಲಯದಲ್ಲಿ ಇದೇ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೂಜೆ ಬಳಿಕ 4ನೇ ರಥ ಉದ್ಘಾಟನೆ ಆಗಲಿದೆ. ಬಳಿಕ ದೇವನಹಳ್ಳಿ ಶಾಲಾ ಮೈದಾನದಲ್ಲಿ 4ನೇ ರಥ ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಸಭೆ ಇದ್ದು, 30-40 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ವಿವರ ನೀಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವ ಮತ್ತು ತಿಳಿಯಪಡಿಸುವ ಉದ್ದೇಶದಿಂದ ವಿಜಯ ಸಂಕಲ್ಪ ಯಾತ್ರೆ ನಾಲ್ಕು ರಥಗಳ ಮೂಲಕ ನಡೆಯಲಿದೆ. ನನ್ನ ನೇತೃತ್ವದ ತಂಡವು ಮಾ. 3ರಂದು ಸಂಚಾರ ಆರಂಭಿಸಲಿದೆ. ಸಚಿವರಾದ ಅಶ್ವತ್ಥನಾರಾಯಣ್, ಗೋಪಾಲಯ್ಯ, ಸೋಮಶೇಖರ್, ಡಾ.ಸುಧಾಕರ್, ಇನ್ನೂ ಹಲವಾರು ಎಂಎಲ್‍ಸಿಗಳು, ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಇವರೆಲ್ಲರೂ ನಮ್ಮ ತಂಡದಲ್ಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ನಮ್ಮ ತಂಡ 17 ಸಾರ್ವಜನಿಕ ಸಭೆಗಳನ್ನು ಮಾಡಲಿದೆ. 7 ಮೋರ್ಚಾಗಳ ಸಭೆಯೂ ನಡೆಯಲಿದೆ. ದಿನಾಂಕಗಳನ್ನು ನಿರ್ಧರಿಸಲಾಗಿದೆ. ಎಲ್ಲ ಕಡೆ ರೋಡ್ ಶೋ, ಸಾರ್ವಜನಿಕ ಸಭೆ ಇರುತ್ತದೆ. ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಭಾಗದಲ್ಲಿ ನಮ್ಮ ರಥದ ಮೂಲಕ ಸಂಚರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಕೊನೆಯಲ್ಲಿ ದಾವಣಗೆರೆಯಲ್ಲಿ 25ರಂದು ನರೇಂದ್ರ ಮೋದಿಜಿ ಅವರು ರಥಗಳ ಸಂಚಾರದ ಸಮಾರೋಪ ನಡೆಯಲಿದೆ. ಬೃಹತ್ ರ್ಯಾಲಿ ಮೂಲಕ ಮೋದಿಜಿ ಅವರು ಪಾಂಚಜನ್ಯದ ಶಂಖನಾದ ಮಾಡಲಿದ್ದಾರೆ ಎಂದರು.
ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣಗೌಡ, ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : Karnataka Politics : ಕಾಂಗ್ರೆಸ್ ಮೋದಿ ಸಾವಿನ ಜಪ ಮಾಡ್ತಿದೆ ಎನ್ನುವುದು ದೊಡ್ಡ ಸುಳ್ಳು, ಹಾಗೆ ಹೇಳಿದವರ ಹೆಸರು ಹೇಳಿ: ಸಿದ್ದು ಸವಾಲು