ಬೆಂಗಳೂರು: ಈ ಸರ್ಕಾರ ನನ್ನ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿದೆ. ಇದಕ್ಕೆಲ್ಲ ಜಗ್ಗುವವ ನಾನಲ್ಲ. ಇದನ್ನೆಲ್ಲ ಎದುರಿಸುವ ಶಕ್ತಿ ನನಗಿದೆ. ಯಾವುದೇ ತನಿಖೆ ನಡೆಸಲಿ, ಅದಕ್ಕೆ ನಾನು ತಯಾರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿನರ್ವ ಮಿಲ್‌ನ 24 ಎಕರೆ ಕರಾಬ್ ಭೂಮಿಯನ್ನು ನುಂಗಿ ನೀರು ಕುಡಿದಿರುವ ಲುಲು ಮಾಲ್ ಬಗ್ಗೆಯೂ ಈ ಸರ್ಕಾರ ತನಿಖೆ ನಡೆಸಲಿ. ಎಂದು ಅವರು ಸವಾಲು ಹಾಕಿದರಲ್ಲದೆ; ಶೀಘ್ರವೇ ಈ ಲುಲು ಮಾಲಿನ ಅಕ್ರಮವನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ ಎಂದು ಹೇಳಿದರು.
ಜಂತಕಲ್ ಮೈನಿಂಗ್ ಇರಬಹುದು ಅಥವಾ ಬಿಡದಿಯ ನನ್ನ ಜಮೀನು ಇರಬಹುದು, ಯಾವುದರ ಬಗ್ಗೆಯೇ ಆಗಲಿ, ತನಿಖೆ ಮಾಡಿಸಲಿ. ಆದಷ್ಟು ಬೇಗ ಇದನ್ನು ಮಾಡಿಸಲಿ ಎಂದು ನಾನೂ ಕಾಯುತ್ತಿದ್ದೇನೆ ಎಂದ ಅವರು, ಹೆದರಿಸಿದರೆ ಕುಮಾರಸ್ವಾಮಿ ಹೆದರಿಕೊಳ್ಳುತ್ತಾನೆ, ಹೆದರಿಸಿ ಅವರ ಬಾಯಿ ಮುಚ್ಚಿಸಬಹುದು ಎಂದು ಯಾರಾದರೂ ನಂಬಿದ್ದರೆ ಅವರ ಮೂರ್ಖತನವಷ್ಟೇ ಎಂದು ಸರ್ಕಾರಕ್ಕೆ ತಿರುಗೇಟು ಕೊಟ್ಟರು.
ಇದನ್ನೂ ಓದಿ | Opposition Leader : ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ; ಬಿಎಸ್‌ವೈ ಮೇಲುಗೈ
ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆ ಜಾಗ ತನಿಖೆ ಮಾಡಿಸುವ ಹಾಗಿದ್ದರೆ ತನಿಖೆ ಮಾಡಿಸಿ ಎಂದು ಸಚಿವ ಚಲುವರಾಯಸ್ವಾಮಿಗೆ ಸವಾಲ್ ಹಾಕಿದ ಮಾಜಿ ಮುಖ್ಯಮಂತ್ರಿಗಳು, ಬಿಡದಿ ತೋಟದ ಮನೆ ಜಮೀನು ಒತ್ತುವರಿ ಆಗಿದೆ. ಈ ಬಗ್ಗೆ ತನಿಖೆ ಮಾಡಿಸಬೇಕು ಎಂಬ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು ಅವರಲ್ಲಿ ಮನವಿ ಮಾಡುತ್ತೇನೆ, ಆದಷ್ಟು ಬೇಗ ತನಿಖೆ ಮಾಡಿಸಲಿ. ನನ್ನ ಒಟ್ಟಾರೆ ಭೂಮಿಯಲ್ಲಿ ಮೂರ್ನಾಲ್ಕು ಎಕರೆ ಕಡಿಮೆ ಬರುತ್ತಿದೆ. ಅವರು ಹುಡುಕಿಸಿ ಕೊಡಲಿ ಎಂದು ಅವರು ಟಾಂಗ್ ಕೊಟ್ಟರು.
ಗುರುವಾರ ಸಂಪುಟ ಸಭೆ ಆದ ಮೇಲೆ ಯಾರು ಯಾರು ಇನ್ನೊಂದು ಸಭೆ ಮಾಡಿದರು ಎಂದು ನನಗೆ ಗೊತ್ತಿದೆ. ಅದನ್ನು ನನಗಾಗಿ, ನನ್ನನ್ನು ಕಟ್ಟಿ ಹಾಕಲು ಮಾಡಿದ ಸಂಪುಟ ಸಭೆ. ಆ ಇನ್ನರ್ ಮೀಟಿಂಗ್‌ನಲ್ಲಿ ಏನು ಆಯಿತು ಎನ್ನುವುದು ನನಗೆ ಗೊತ್ತಿದೆ. ಬಿಡದಿದು ಭೂಮಿಯ ಬಗ್ಗೆ ತನಿಖೆ ಆಗಬೇಕು ಎಂದು ಅಲ್ಲಿ ಸಚಿವರೊಬ್ಬರು ಹೇಳಿದ್ದಾರೆ. 38 ವರ್ಷ ಆಯ್ತು ಅ ಜಾಗವನ್ನು ನಾನು ಖರೀದಿ ಮಾಡಿ. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಈ ಬಗ್ಗೆ ಎಷ್ಟು ತನಿಖೆ ಆಗಿದೆ ಎನ್ನುವುದರ ಬಗ್ಗೆ ಗ್ರಂಥವನ್ನೇ ಬರೆಯಬಹುದು ಎಂದರು.
ಲೋಕಾಯುಕ್ತ, ಸಿಐಡಿ ಸೇರಿ ಬಿಜೆಪಿ ಸರ್ಕಾರ ಇದ್ದಾಗಲೂ ತನಿಖೆ ಮಾಡಲಾಯಿತು. ಆಗೆಲ್ಲಾ ಏನೂ ಆಗಲಿಲ್ಲ. ಸಿದ್ದಪ್ಪ ಎನ್ನುವ ಅಧಿಕಾರಿಯಿಂದ ನನ್ನ ವಿರುದ್ಧ ರಿಪೋರ್ಟ್ ಬರೆಸಿದರು. ಅದರ ಮೇಲೆ ಹಿರೇಮಠ ಅವರು ಹೈಕೋರ್ಟ್‌ಗೆ ಹೋದರು. ಹೈಕೋರ್ಟ್ ತೀರ್ಪು ಕೂಡ ಬಂದಿದೆ. ಈಗ ಚಲುವರಾಯಸ್ವಾಮಿ ತನಿಖೆ ಮಾತು ಹೇಳಿದ್ದಾರೆ. ನಾನು ಕೈ ಮುಗಿದು ಕೇಳುತ್ತೇನೆ, ತನಿಖೆ ಮಾಡಿಸಲಿ ಎಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಕರಾಬ್ ಜಮೀನು ಲುಲು ಮಾಲ್ ಪಾಲು
ನನ್ನ ಭೂಮಿಯ ಬಗ್ಗೆ ಇಷ್ಟೆಲ್ಲ ಮಾತನಾಡುವ ಇವರು 24 ಎಕರೆ ಕರಾಬ್ ಜಮೀನು ನುಂಗಿ ಹಾಕಿರುವ ಲುಲು ಮಾಲ್ ಬಗ್ಗೆ ಮೌನ ವಹಿಸುತ್ತಾರೆ, ಏಕೆ? ಅವರಿಗೊಂದು, ನನಗೊಂದು ಕಾನೂನು ಇದೆಯೇ? ಎನ್ನುವ ಮೂಲಕ ಲುಲು ಮಾಲ್ ಕುರಿತ ಹೊಸ ಬಾಂಬ್ ಸಿಡಿಸಿದರು.
ಲುಲು ಮಾಲ್ ಇರುವ 24 ಎಕರೆ ಜಾಗ ಕರಾಬ್ ಭೂಮಿ. 1934ರಲ್ಲಿ ಮಿನರ್ವ ಮಿಲ್‌ಗೆ ಆ ಜಾಗವನ್ನು ನೀಡಲಾಗಿತ್ತು. ಆ ದಾಖಲೆ ಹೇಗೆ ಸುಟ್ಟು ಹಾಕಿದರು ಎನ್ನುವುದು ನನಗೆ ಗೊತ್ತಿದೆ. ಲುಲು ಮಾಲ್ ಕರಾಬ್ ಲ್ಯಾಂಡ್. ಅದು ಸತ್ಯ. ಅದನ್ನು ಅಕ್ರಮವಾಗಿ ಖರೀದಿ ಮಾಡಿ ಮಾಲ್ ಕಟ್ಟಿದ್ದಾರೆ. ಇದೆಲ್ಲವನ್ನೂ ಮುಂದೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಅವರು ತಿಳಿಸಿದರು
ಜಂತಕಲ್ ಮೈನಿಂಗ್ ತನಿಖೆ ಬೇಗ ಮಾಡಿಸಿ
ಜಂತಕಲ್ ಮೈನಿಂಗ್ ಪ್ರಕರಣದ ಮರು ತನಿಖೆ ಮಾಡೋದಾದರೆ ಮಾಡಲಿ. ಆದಷ್ಟು ಬೇಗ ತನಿಖೆ ಮಾಡಿ. ಇದು 13 ವರ್ಷದ ಹಿಂದಿನ ಪ್ರಕರಣ. ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಕೊಳ್ಳಲು ಈಗ ನನ್ನ ವಿಷಯ ಕೆದಕುತ್ತಿದ್ದಾರೆ. ಕೆದಕಲಿ, ನಾನೇನು ಹೆದರಿ ಓಡಿ ಹೋಗುವುದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಎಸಿಬಿ ರಚನೆ ಮಾಡಿದ್ದರು. ಎಷ್ಟು ಪ್ರಕರಣ ತನಿಖೆ ಮಾಡಿ ಮುಗಿಸಿದ್ದಾರೆ ಇವರು? ಆ ಪೈಕಿ ರಿಡೂ ಪ್ರಕರಣ ಎಲ್ಲಿಗೆ ಬಂತು? ಕೆಂಪಣ್ಣ ವರದಿ ಏನಾಯಿತು? ಎಂದ ಅವರು, ನನಗೆ 14 ತಿಂಗಳು ಕಾಂಗ್ರೆಸ್ ಬೆಂಬಲ ನೀಡಿತ್ತು. ಆಗ ನನ್ನ ಕೇಸ್ ಅನ್ನು ನಾನು ಮುಚ್ಚಿ ಹಾಕಿದೆನೇ? ಕೆಲ ಸತ್ಯಗಳನ್ನು ಇಲ್ಲಿ ಹೇಳುವುದಕ್ಕೆ ಆಗೊದಿಲ್ಲ. ಈ ವ್ಯವಸ್ಥೆ ಹೇಗಿದೆ ಅಂತ ಹೇಳಲು ಬೇಸರ ಆಗುತ್ತದೆ. ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಇವತ್ತೇನಾದರೂ ಇದ್ದಿದ್ದರೆ ಅವರಿಗೂ ಮಸಿ ಬಳಿಯುತ್ತಿದ್ದರು. ಪ್ರಾಮಾಣಿಕವಾಗಿ ಇರಲು ಈ ಸಮಾಜ ಬಿಡುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಹುಬ್ಲೋಟ್ ವಾಚ್ ಪ್ರಕರಣ ಪ್ರಸ್ತಾಪ ಮಾಡಿದಾಗ ನನ್ನನ್ನು ಬಂಧನ ಮಾಡುವುದಕ್ಕೆ ಹಿಂದಿನ ಇದೇ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು. ಪೊಲೀಸ್ ಅಧಿಕಾರಿಗಳಾದ ಚರಣ್ ರೆಡ್ಡಿ, ಕೆಂಪಯ್ಯ ನನಗೆ ನೊಟೀಸ್ ನೀಡಿದ್ದರು. ಕುಮಾರಸ್ವಾಮಿಯನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಗುರುವಾರ ಸಭೆ ಮಾಡಿ ಚರ್ಚೆ ಮಾಡಿದ್ದರು. ನಾನು ನಿರೀಕ್ಷಣಾ ಜಾಮೀನು ಪಡೆಯಲ್ಲ ಎಂದು ವಕೀಲರಿಗೆ ಹೇಳಿದ್ದೆ. ನನ್ನ ವಕೀಲರು, “ಹುಡುಗಾಟ ಆಡಬೇಡಿ” ಎಂದು ಹೇಳಿದ್ದರು. ಬಂಧನ ಮಾಡಿದರೆ ಕುಮಾರಸ್ವಾಮಿಯನ್ನು ಬಂಧಿಸಿದರು ಎಂದಾಗುತ್ತದೆ, ಏನಕ್ಕೂ ಬಂಧಿಸಿದರು, ಅದರ ಒಳ ಹುನ್ನಾರ ಏನು ಎಂಬುದು ಯಾರೂ ಹೇಳುವುದಿಲ್ಲ. ವರ್ಚಸ್ಸಿಗೆ ಧಕ್ಕೆ ತರುತ್ತಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ಪಡೆದೆ ಎಂದು ಎಚ್‌ಡಿಕೆ ಹೇಳಿದರು.
ಇದನ್ನೂ ಓದಿ | CM Ibrahim: ಪಕ್ಷ ವಿರೋಧಿ ಚಟುವಟಿಕೆ; ಜೆಡಿಎಸ್‌ನಿಂದ ಸಿ.ಎಂ. ಇಬ್ರಾಹಿಂ ಅಮಾನತು
ಈಗಲೂ ನಾನು ಸವಾಲು ಹಾಕುತ್ತೇನೆ, ನನ್ನನ್ನು ಬಂಧನ ಮಾಡಲಿ ನೋಡೋಣ. ಏನೇನು ಇದೆ ಈ ಕೇಸಿನಲ್ಲಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಜಂತಕಲ್ ಕೇಸನ್ನು ಆದಷ್ಟು ಬೇಗ ತನಿಖೆ ಮಾಡಿ ಸತ್ಯವನ್ನು ಜನರಿಗೆ ತಿಳಿಸಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿತರಿದ್ದರು.