ಹಾವೇರಿ: ಈ ಬಾರಿ ವಿಧಾನಸಭಾ ಚುನಾವಣೆಯೇ (Karnataka Election 2023) ನನ್ನ ಕೊನೆಯ ಸ್ಪರ್ಧೆಯಾಗಿದೆ. ಈ ಚುನಾವಣೆ ಆದ ಮೇಲೆ ಮತ್ತೆ ಸ್ಪರ್ಧೆ ಮಾಡಬಾರದು ಎಂದು ನಿರ್ಧಾರ ಮಾಡಿದ್ದೇನೆ ಎಂದು ಹಿರೇಕೆರೂರು ಶಾಸಕ, ಸಚಿವ ಬಿ.ಸಿ. ಪಾಟೀಲ್ (BC Patil) ಹೇಳಿದರು.
ಹಿರೇಕೆರೂರಿನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಹಣೆಬರಹ ಬರೆಯುವವರು ನೀವು. ನಾವು ಐದು ವರ್ಷಕ್ಕೆ ಒಮ್ಮೆ ಪರೀಕ್ಷೆ ಬರೆಯುವವರು. ನಾನು ಮಾಡಿದ ಸಾಧನೆಗಳನ್ನು ಪ್ರಿಂಟ್ ಮಾಡಿ ಮನೆಗೆ ಮುಟ್ಟಿಸಿದ್ದೇನೆ. 2018ರಲ್ಲಿ ಬಹಳ ಕಷ್ಟದಿಂದ ಗೆದ್ದು ಬಂದಿದ್ದೆ. ಗ್ರಾಮ ಪಂಚಾಯಿತಿ ಸದಸ್ಯ ಸಹ ರಾಜೀನಾಮೆ ಕೊಡಲ್ಲ. ಆದರೆ, ಕಾಂಗ್ರೆಸ್‌ನವರ ಜತೆಗೆ ಇದ್ದರೆ ನಮ್ಮ ತಾಲೂಕು ಉದ್ದಾರ ಮಾಡಲು ಆಗದು ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಿಮ್ಮ ಆಶೀರ್ವಾದದಿಂದ ಗೆದ್ದು ಬಂದೆ ಎಂದು ಹೇಳಿದರು.
ನನ್ನ ಕ್ಷೇತ್ರಕ್ಕೆ 1300 ಕೋಟಿ ರೂಪಾಯಿಯನ್ನು ತಾಲೂಕಿಗೆ ತಂದಿದ್ದೇನೆ. ಸರ್ವಜ್ಞ ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದೆ. ತಾಲೂಕಿನ ಎಲ್ಲ ಕೆರೆಗಳು ತುಂಬುತ್ತವೆ. ಮುಂದೆಂದೂ ತಾಲೂಕಿನಲ್ಲಿ ಬರಗಾಲ ಬರಲು ಸಾಧ್ಯವಿಲ್ಲ. ನನ್ನನ್ನು ಶಾಸಕನನ್ನಾಗಿ ಮಾಡಿದರೆ ದುರ್ಗಾದೇವಿ ಕರೆಯನ್ನು ತುಂಬಿಸುವುದಾಗಿ ಹೇಳಿದ್ದೆ. ಆದರೆ, ಶಾಸಕನಾದ ಮೇಲೆ 250 ಕೆರೆಗಳನ್ನು ತುಂಬಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Narendra Modi: ಏಪ್ರಿಲ್ 9ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ 33ನೇ ಪ್ರವಾಸ: ಈ ವರ್ಷವೇ 8ನೇ ಭೇಟಿ
ಕೋವಿಡ್‌ನಲ್ಲಿ ಬಹಳಷ್ಟು ಕಷ್ಟ ಬಂತು. ನಮ್ಮ ತಾಲೂಕಿನಲ್ಲಿ ಕೋವಿಡ್‌ನಿಂದ 126 ಜನರು ಮೃತಪಟ್ಟರು. ಪ್ರತಿ ಕುಟುಂಬಕ್ಕೆ 50 ಸಾವಿರ ರೂಪಾಯಿ ಕೊಟ್ಟೆ. ತಾಲೂಕಿಗೆ 3150 ಆಕಳು ವಿತರಣೆ ಮಾಡಿದ್ದೇನೆ. ನಾನು ಜಾತಿ ವ್ಯವಸ್ಥೆ ಮೀರಿ ನಿಂತವನು. ಎಲ್ಲ ಸಮಾಜಕ್ಕೆ ಸಮುದಾಯ ಭವನವನ್ನು ಕಟ್ಟಿಸಿದ್ದೇನೆ. ವಾಲ್ಮೀಕಿ ಜನಾಂಗದ ಮೀಸಲಾತಿಯನ್ನು ಹೆಚ್ಚು ಮಾಡಿದ್ದೇವೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ಹಾಗೆ ಒಳ ಮೀಸಲಾತಿಯನ್ನು ಕೊಟ್ಟಿದ್ದೇವೆ. ಲಂಬಾಣಿ ಜನಾಂಗಕ್ಕೆ ತಪ್ಪು ಸಂದೇಶವನ್ನು ಕೊಡುತ್ತಿದ್ದಾರೆ. ನಾವು ಇಷ್ಟೆಲ್ಲ ಹೇಳುತ್ತಿದ್ದೇವೆ. ನಾನು ಬುಕ್‌ಲೆಟ್ ಕೊಟ್ಟಿದ್ದೇನೆ. ನಾವು ಮಾತನಾಡುವುದಕ್ಕಿಂತ ನಾವು ಮಾಡಿದ ಕೆಲಸ ಮಾತನಾಡಬೇಕು. ಅವರು ಮಾಡಿದ ಸಾಧನೆ ಬಗ್ಗೆ ಒಂದು ಹಾಳೆ ಪ್ರಿಂಟ್ ಮಾಡಿಸಿ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು.
ನನ್ನ ಜೀವನದಲ್ಲಿ ತಿರುವ ಕೊಟ್ಟ ಚಿತ್ರ ಕೌರವ. ಈ ಸಿನಿಮಾದಲ್ಲಿ ಟೀಚರಮ್ಮನಾಗಿ ನಟಿಸಿದವರು ಪ್ರೇಮಾ. ಅವರನ್ನು ತೋರಿಸಲು ಇವತ್ತು ಕರೆದುಕೊಂಡು ಬಂದಿದ್ದೇನೆ. ಅಲ್ಲದೆ, ನಮ್ಮ ಚುನಾವಣೆಯ ಮೊದಲ ಸಮಾವೇಶ ತಾಯಂದಿರ ಸಮಾವೇಶವಾಗಿದ್ದು, ನಿಮ್ಮಿಂದಲೇ ಪ್ರಾರಂಭ ಮಾಡುತ್ತಿದ್ದೇನೆ ಎಂದು ಬಿ.ಸಿ. ಪಾಟೀಲ್ ಹೇಳಿದರು.
ವಂಶ ರಾಜಕಾರಣದ ಬಗ್ಗೆ ಶ್ರುತಿ ಟೀಕೆ
ರಾಜ್ಯದಲ್ಲಿ ಪ್ರಮುಖವಾಗಿ ಮೂರು ಪಕ್ಷಗಳಿವೆ. ಯಾವುದೇ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ಧಿ ಆಗಬೇಕಾದರೆ ಜೆಡಿಎಸ್‌ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದವರ ವಂಶ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಿ, ನಿಮ್ಮ ವಂಶದ ಜತೆಗೆ ದೇಶದ ಅಭಿವೃದ್ಧಿ ಆಗಬೇಕಾದರೆ ಬಿಜೆಪಿಗೆ ಮತ ಹಾಕಿ ಎಂದು ಚಿತ್ರ ನಟಿ ಶ್ರುತಿ ಕರೆ ನೀಡಿದರು.
ಹಿರೇಕೆರೂರಿನಲ್ಲಿ ಬಿ.ಸಿ. ಪಾಟೀಲ್ ಖಂಡಿತಾ ಗೆಲ್ತಾರೆ: ಪ್ರೇಮಾ
ನನಗೆ ಇವತ್ತು ಡೇಟ್ ಇರಲಿಲ್ಲ. ಬಿ.ಸಿ. ಪಾಟೀಲ್ ಸರ್ ಅಭಿಮಾನಕ್ಕೆ ಬಂದೆ. ರಾಜಕೀಯ ಪ್ರಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಕೌರವ ಆದ್ಮೇಲೆ ಬಿ.ಸಿ. ಪಾಟೀಲ್ ಅವರನ್ನು ಮೀಟ್ ಆಗಿರಲಿಲ್ಲ. ಚಲುವೆ ಆದ ಮೇಲೆ ನಾನು ಅವರ ಜತೆ ನಟಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ಕರೆದಿದ್ದರಿಂದ ಭೇಟಿಯಾಗಲು ಬಂದೆ. ಇದೇ ಮೊದಲ ಬಾರಿ ನಾನು ಹಿರೇಕೆರೂರಿಗೆ ಬಂದಿದ್ದೇನೆ. ನನಗೆ ಮಹಿಳೆಯರು ತುಂಬಾ ಫ್ಯಾನ್ಸ್ ಇದ್ದು, ಖಂಡಿತಾ ಮಹಿಳೆಯರು ಪಾಟೀಲ್ ಪರ ಮತ ನೀಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Bengaluru Karaga 2023: ಬೆಂಗಳೂರು ಕರಗ ಮಹೋತ್ಸವದಲ್ಲಿ ಅಗ್ನಿ ಅವಘಡ: ಕರ್ಪೂರ ಸೇವೆ ವೇಳೆ ಹೊತ್ತಿ ಉರಿದ ವಾಹನಗಳು
ಸೆಲ್ಫಿಗೆ ಮುಗಿಬಿದ್ದ ಜನ
ಸಮಾವೇಶದಲ್ಲಿ ನಟಿಯರಾದ ಶ್ರುತಿ, ಪ್ರೇಮಾ ಭಾಗವಹಿಸಿದ್ದರು. ಈ ವೇಳೆ ಇವರಿಬ್ಬರ ಜತೆ ಮಹಿಳಾ ಕಾರ್ಯಕರ್ತರು ಸೇರಿದಂತೆ ಜನರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.