ಬಾಗಲಕೋಟೆ: ಕೆರೂರು ಗುಂಪು ಘರ್ಷಣೆ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ, ಕೆರೂರು ಗುಂಪು ಘರ್ಷಣೆ ಖಂಡಿಸಿ ಜಮಖಂಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆನಂದ ಇಂಗಳಗಾವಿಗೆ ಜೀವ ಬೆದರಿಕೆ ಕರೆ ಬಂದಿದೆ.
ಬಾಗಲಕೋಟೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆನಂದ ಇಂಗಳಗಾವಿಗೆ ಅನಾಮಧೇಯ ವ್ಯಕ್ತಿಯಿಂದ ಮಂಗಳವಾರ ರಾತ್ರಿ 2.25ಕ್ಕೆ ಬೆದರಿಕೆ ಕರೆ ಬಂದಿದೆ. ಪ್ರತಿಭಟನೆ ಮುಗಿಸಿ ಮನೆಗೆ ಹೋದ ಬಳಿಕ ಮಂಗಳವಾರ ರಾತ್ರಿ ಹಿಂದೂ ಸಂಘಟನೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಬೀಳಗಿ ತಾಲೂಕಿನ ಗಲಗಲಿಯಲ್ಲಿ ಆನಂದ ಇಂಗಳಗಾವಿ ಮನೆ ಇದ್ದು, ಸದ್ಯ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಅವರಿಗೆ ದೂರು ಸಲ್ಲಿಸಿದ್ದಾರೆ. ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವೆಬ್‌ಕಾಲ್ ಮೂಲಕ ಕೇವಲ ಎಂಟು ಸಂಖ್ಯೆಯ ನಂಬರ್‌ನಿಂದ ಕರೆ ಬಂದಿದೆ.
ಇದನ್ನೂ ಓದಿ | Bagalkote | ಕೆರೂರು ಗುಂಪು ಘರ್ಷಣೆ: ಬಾಗಲಕೋಟೆ ನಗರ ಸ್ತಬ್ಧ
ಗುಳೇದ ಗುಡ್ಡ ಪಟ್ಟಣ ಬಂದ್
ಕೆರೂರು ಪಟ್ಟಣದಲ್ಲಿ ನಡೆದ ಗಲಭೆ ಖಂಡಿಸಿ ಬುಧವಾರ ಗುಳೇದಗುಡ್ಡ ಪಟ್ಟಣ ಬಂದ್‌ಗೆ ಕರೆ ನೀಡಲಾಗಿತ್ತು. ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ ಬಳಿಕ ತಹಶಿಲ್ದಾರ ಪಿ.ಎಫ್. ಬೊಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು. ರಬಕವಿ-ಬನಹಟ್ಟಿ ಪಟ್ಟಣದಲ್ಲೂ ಬೈಕ್ ರ‍್ಯಾಲಿ ನಡೆಸಲಾಯಿತು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಯಿತು.
ಹಿಂದೂಗಳಷ್ಟೇ ಅಲ್ಲ 6 ಕೋಟಿ ಜನರ ರಕ್ಷಣೆಯೇ ನಮ್ಮ ಆದ್ಯತೆ
ಹಿಂದೂ ಹೆಸರು ಹೇಳಿಕೊಂಡು ಬಂದ ಬಿಜೆಪಿ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಭು ಚೌಹಾನ್, ನಮ್ಮ ಸರ್ಕಾರ ಹಿಂದೂಗಳಿಗಷ್ಟೇ ಅಲ್ಲ ಕರ್ನಾಟಕದ 6 ಕೋಟಿ ಜನರ ರಕ್ಷಣೆಯನ್ನು ಮಾಡುತ್ತದೆ. ಎಲ್ಲರಿಗೂ ರಕ್ಷಣೆ ಮಾಡಬೇಕೆಂಬುದು ನಮ್ಮ ಸರ್ಕಾರದ ಆದ್ಯತೆ ಎಂದರು.
ಕೆರೂರು ಘಟನೆ ಸಂಬಂಧ ಮಾತನಾಡಿದ ಅವರು, ಸರ್ಕಾರ ಎಲ್ಲವನ್ನೂ ಪರಿಶೀಲನೆ ಮಾಡುತ್ತಿದೆ. ಹೆಚ್ಚು ಕಡಿಮೆ ಆಗಬಹುದು. ಆದರೆ ಸರ್ಕಾರ ಎಲ್ಲವನ್ನು ಸರಿಪಡಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ | ಕೆರೂರು ಗಲಭೆ | ಹಿಂದುಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಬೈಕ್ ರ‍್ಯಾಲಿ