ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್‌ನಲ್ಲೇ ಇದ್ದರು. ಯಾವ ಆಫೀಸು, ಕ್ವಾರ್ಟರ್ಸ್ ತೆಗೆದುಕೊಂಡಿರಲಿಲ್ಲ. ಎರಡು ಮೂರು ರೂಮ್‌ಗಳನ್ನು ತೆಗೆದುಕೊಂಡು ಅಲ್ಲೇ ಇರುತ್ತಿದ್ದರು. ನಾನು ಅನೇಕ ಬಾರಿ ಹೋಗಿ ಅಲ್ಲಿಯೇ ಭೇಟಿಯಾಗಿದ್ದೇನೆ. ಅದು ಒಬ್ಬ ಸಿಎಂ ಅಲ್ಲಿದ್ದರು ಎಂಬುವುದು ಬಿಟ್ಟರೆ ಬೇರೇನೂ ಗೌಪ್ಯ ವಿಚಾರವಲ್ಲ. ಆದರೆ, ಮುಖ್ಯಮಂತ್ರಿಯಾಗಿ (Karnataka Politics) ಅಲ್ಲಿ ಇದ್ದಿದ್ದಕ್ಕೆ ಹಲವು ಪ್ರಶ್ನೆಗಳು ಹುಟ್ಟುತ್ತವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ತಾಜ್ ವೆಸ್ಟೆಂಡ್ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಆದವರು ಜನರ ಕೈಗೆ ಸಿಗಬೇಕು, ಶಾಸಕರ ಕೈಗೆ ಸಿಗುವಂತಹ ಜಾಗದಲ್ಲಿ ಇರಬೇಕು. ಅದಕ್ಕೆ ತಾನೇ ಸರ್ಕಾರದಿಂದ ಅಫಿಷಿಯಲ್ ಕ್ವಾರ್ಟರ್ಸ್ ಕೊಡುವುದು. ಅಲ್ಲಿ ಇರಬೇಕು ಇಲ್ಲವೇ ಮನೆಯಲ್ಲಿ ಇರಬೇಕು ಎಂಬ ನಿರೀಕ್ಷೆ ಜನರಲ್ಲಿ, ಶಾಸಕರಲ್ಲಿ ಇರುತ್ತದೆ. ಸಿಎಂ ಆಗಿದ್ದವರು ನಾನು ಜನರಿಗೆ ಸಿಗುವ ಜಾಗದಲ್ಲಿ ಇರಬೇಕು ಎನ್ನೋದನ್ನು ತಿಳಿದುಕೊಳ್ಳಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಕಾವೇರಿ ನಿವಾಸ ಬಿಟ್ಟು ಕೊಡಲಿಲ್ಲ ಎನ್ನುವುದು ಸರಿಯಲ್ಲ. ಅದನ್ನು ಬಿಟ್ಟು ಬೇರೆ ನಿವಾಸಗಳು ಇದ್ದವು, ಸಿಎಂ ಇದೆ ನಿವಾಸ ಅಂತ ನಿಗದಿ ಏನು ಆಗಿಲ್ಲ. ಯಾವುದು ಏನೇ ಇರಲಿ, ವೈಯಕ್ತಿಕ ನಿಂದನೆಗಳು ನಿಲ್ಲಬೇಕು ಅಷ್ಟೇ ಎಂದು ಹೇಳುವ ಮೂಲಕ ನಾವು ವೆಸ್ಟೆಂಡ್ ಹೋಟೆಲ್‌ನಲ್ಲಿ ಕುಳಿತು ಸರ್ಕಾರ ನಡಸುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಬರಗಾಲ ಇದೆ, ಸಿಎಂ, ಡಿಸಿಎಂ ಮ್ಯಾಚ್ ನೋಡುತ್ತಾ ಮಜಾ ಮಾಡ್ತಾ ಇದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ರಾಜ್ಯದ ಆಡಳಿತ ಹೇಗೆ ನಡೆಸಬೇಕು, ಯಾವ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು. ರಾಜ್ಯದ ಜನರಲ್ಲಿ ಯಾವ ರೀತಿ ವಿಶ್ವಾಸ ಮೂಡಿಸಬೇಕು ಎನ್ನುವುದು ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ.. ಬಹಳ ಕಷ್ಟದಿಂದ ಹಣ ಕ್ರೂಢೀಕರಣ ಮಾಡಿ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಮಾತಿಗೆ ತಪ್ಪಿದರೂ ಹೀಗೆ ಹಾಗೆ ಅಂತ ಜನರು ಯಾರು ಕೂಡ ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ. ವಿರೋಧ ಪಕ್ಷಗಳು ಮಾತ್ರ ಪ್ರತಿ ದಿನ ಟೀಕೆ ಮಾಡುತ್ತಿವೆ ಎಂದು ಟೀಕಿಸಿದರು.
ಸಿಎಂ ಅರ್ಧ ಗಂಟೆ ಕ್ರಿಕೆಟ್ ನೋಡಿದ್ದಕ್ಕೆ ಟೀಕಿಸಬಾರದು
ಟೀಕೆ ಮಾಡುವುದು ವಿರೋಧ ಪಕ್ಷಗಳ ಹಕ್ಕು. ಯಾವ ಯಾವ ವಿಚಾರಕ್ಕೆ ಟೀಕೆ ಮಾಡಬೇಕು, ಯಾವ ವಿಚಾರಕ್ಕೆ ಸಲಹೆ ಕೊಡಬೇಕು ಎಂಬುವುದು ಕುಮಾರಸ್ವಾಮಿಗೆ ಗೊತ್ತಿರಬೇಕು. ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡುವುದು ಸರಿಯಲ್ಲ. ಕ್ರಿಕೆಟ್ ಅಸೋಸಿಯೇಷನ್ ಅವರು ಸಿಎಂಗೆ ಆಹ್ವಾನ ನೀಡುತ್ತಾರೆ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರಿಗೂ ಆಹ್ವಾನ ನೀಡಿದ್ದರು, ಡಿಸಿಎಂ ಆಗಿದ್ದಾಗ ನನಗೂ ಕರೆದಿದ್ದರು. ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಏನು ಮಾಡಬೇಕು, ಏನು ಮಾಡಬಾರದು ಎನ್ನುವುದು ಅವರಿಗೆ ಗೊತ್ತಿದೆ. ಎಲ್ಲಾ ಕೆಲಸ ಬಿಟ್ಟು ಬರೀ ಕ್ರಿಕೆಟ್ ನೋಡ್ತಾ ಇದ್ದರೆ ನೀವು ಹೇಳುವುದು ಸರಿ. ಏನೋ ಅರ್ಧ ಗಂಟೆ ಕ್ರಿಕೆಟ್ ನೋಡಿದ್ದಕ್ಕೆ ನೀವು ಹೀಗೆ ಟೀಕೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಿಎಂ ಕ್ರೀಡೆಗೆ ಪ್ರೊತ್ಸಾಹ ನೀಡಬಾರದಾ? ಒಬ್ಬ ಮುಖ್ಯಮಂತ್ರಿಗಳು ಕ್ರಿಕೆಟ್ ನೋಡುತ್ತಾರೆ ಎಂದರೆ ಎಷ್ಟು ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಏಷ್ಯನ್ ಗೇಮ್ಸ್‌ಗೆ ಹೋಗಿದ್ದವರಿಗೆ ಮೊನ್ನೆಯಷ್ಟೇ ಸಿಎಂ ನಗದು ಬಹುಮಾನ ನೀಡಿ ಸನ್ಮಾನ ಮಾಡಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಇದು ಕೂಡ ಒಂದು ಭಾಗವಾಗಿದೆ. ಅವರದ್ದೇ ಸರ್ಕಾರ ಬರುತ್ತೆ ಅಂತ ಅವರು ಅಂದುಕೊಂಡಿದ್ದರು, ಇಲ್ಲ ಸಮ್ಮಿಶ್ರ ಸರ್ಕಾರವಾದರೂ ಬರುತ್ತೆ ಅಂತ ಅವರು ಅಂದುಕೊಂಡಿದ್ದರು. ಯಾವುದು ಆಗಿಲ್ಲ, ಅದಕ್ಕೆ ಬೇಸರದಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಸಂಬಂಧ ಈಗಾಗಲೇ 6 ಜನರನ್ನು ಬಂಧಿಸಲಾಗಿದೆ. ಎಲ್ಲರೂ ಕೂಡ ಚಿಕ್ಕ ವಯ್ಸುಸ್ಸಿನವರಾಗಿದ್ದಾರೆ. ಕೊಲೆ ಮಾಡಿಸಿದ್ದಾರೆ, ಯಾವ ಕಾರಣಕ್ಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ನಾನು ಸ್ಥಳಕ್ಕೆ ಹೋದ ವೇಳೆ ನನಗೆ ಅಲ್ಲಿ ಸಿಕ್ಕ ಮಾಹಿತಿ ಪ್ರಕಾರ, ವೈಯಕ್ತಿಕ ದ್ವೇಷ, ವೈಷಮ್ಯ ಎಂದು ಜನ ಸಂಶಯ ಪಡುತ್ತಿದ್ದರು. ಜಮೀನು ವಿಚಾರ, ಹಣಕಾಸಿನ ವಿಚಾರ, ಇಲ್ಲ ವೈಯಕ್ತಿತ ವಿಚಾರಕ್ಕೆ ಆಗಿರುವ ಕೊಲೆಯೇ? ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ನಿಖೆಯ ನಂತರ ಗೊತ್ತಾಗಲಿದೆ ಎಂದು ತಿಳಿಸಿದರು.