ಚಿಂತಾಮಣಿ: ಭಾರತದ ರಾಷ್ಟ್ರ ಧ್ವಜವನ್ನು ತೀವ್ರವಾಗಿ ವಿರೋಧಿಸಿದ್ದ, ಅದನ್ನು ಟೀಕಿಸಿದ್ದವರೇ ಈಗ ಘರ್ ಘರ್ ತಿರಂಗಾ ಎನ್ನುತ್ತಾ ನಾಟಕ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಆರೆಸ್ಸೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕಾಂಗ್ರೆಸ್ ಶನಿವಾರ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಇದರ ಭಾಗವಾಗಿ ಪ್ರಧಾನ ಕಾರ್ಯಕ್ರಮ ಚಿಂತಾಮಣಿಯಲ್ಲಿ ನಡೆಯಿತು. ಕೈವಾರದಿಂದ ಚಿಂತಾಮಣಿವರೆಗೆ ಬೃಹತ್ ಬೈಕ್ ಯಾತ್ರೆ ನಡೆದು ಚಿಂತಾಮಣಿಯಲ್ಲಿ ಮುಕ್ತಾಯಗೊಂಡಿತು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಟೀಕೆಗಳ ಸುರಿಮಳೆಗೈದರು.
ʻʻಬಿಜೆಪಿಯವರು ಡೋಂಗಿಗಳು, ಬಿಜೆಪಿ ಮತ್ತು ಆರೆಸ್ಸೆಸ್‌ನಲ್ಲಿರುವ ಯಾರೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿಲ್ಲ. ಯಾರೂ ಹೋರಾಟ ನಡೆಸಿಲ್ಲ. ಯಾರೇ ಒಬ್ಬರು ಹೋರಾಡಿದ್ದರೆ ತೋರಿಸಲಿ ನೋಡೋಣʼ ಎಂದ ಸಿದ್ದರಾಮಯ್ಯ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರು, ಹೋರಾಡಿದವರು ಕಾಂಗ್ರೆಸ್ಸಿಗರು ಎಂದರು. ʻದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ಯಾರು? ಪ್ರಜಾಪ್ರಭುತ್ವ ಕೊಟ್ಟಿದ್ಯಾರು, ಸಂವಿಧಾನ ಕೊಟ್ಟಿದ್ಯಾರು?ʼ ಎಂಬ ಪ್ರಶ್ನೆಗಳನ್ನು ಕೇಳುತ್ತಾ, ಎಲ್ಲವನ್ನು ಮಾಡಿದ್ದು ಕಾಂಗ್ರೆಸ್ ಎಂಬ ಉತ್ತರವನ್ನು ಪಡೆದರು.
ʻʻರಾಷ್ಟ ಧ್ವಜ, ರಾಷ್ಟ್ರ ಗೀತೆ ಇವೆಲ್ಲವನ್ನು ಮಾಡಿದ್ದು ಕಾಂಗ್ರೆಸ್ ಹೊರೆತು ಬಿಜೆಪಿಯವರಲ್ಲ. ಈಗ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸುವ ಕೆಲಸವನ್ನು ಕೂಡಾ ಕಾಂಗ್ರೆಸೇ ಮಾಡಬೇಕಾಗಿದೆ. ಹೀಗಾಗಿ ಜನರು ಕಾಂಗ್ರೆಸ್ ಕೈ ಬಲಪಡಿಸಬೇಕಾಗಿದೆʼʼ ಎಂದರು ಸಿದ್ದರಾಮಯ್ಯ.
ನಾಡಿದ್ದು ಬೆಂಗಳೂರಿಗೆ ಬನ್ನಿ
ಆಗಸ್ಟ್ ೧೫ರಂದು ಬೆಂಗಳೂರಿನಲ್ಲಿ ದೊಡ್ಡ ಮೆರವಣಿಗೆ, ಸಮಾವೇಶ ನಡೆಯಲಿದ್ದು ನೀವೆಲ್ಲರೂ ಬನ್ನಿ. ೧೦ ಲಕ್ಷ ತಿರಂಗಾಗಗಳು ಅಂದು ಹಾರಾಡಲಿʼʼ ಎಂದು ಸ್ವಾಗತಿಸಿದರು. ಚಿಂತಾಮಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ. ಎಂ.ಸಿ. ಸುಧಾಕರ್ ಅವರನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ವಿನಂತಿಸಿದರು. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ| Amritha mahothsava: ಕೈವಾರದಿಂದ ಚಿಂತಾಮಣಿಗೆ ಕಾಂಗ್ರೆಸ್ ಬೈಕ್ ರ‍್ಯಾಲಿ, 10000ಕ್ಕೂ ಅಧಿಕ ಮಂದಿ ಭಾಗಿ