ಶಿವಮೊಗ್ಗ: ಧ್ವಜ ಬದಲಾಯಿಸುತ್ತೇವೆ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದವರೇ ಈಗ ಹರ್ ಘರ್ ತಿರಂಗ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ಧ್ವಜ ಹಾಗೂ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಅರ್ಹತೆಯೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಮಹಾತ್ಮ ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷ ಹೋರಾಟದಿಂದ ಎಂದು ಹೇಳಿದ ಅವರು, ಕಾಶ್ಮೀರಿ ಫೈಲ್ ಚಿತ್ರವನ್ನು ಉಚಿತವಾಗಿ ತೋರಿಸಿದ ಬಿಜೆಪಿಯವರು ರಾಷ್ಟ್ರಧ್ವಜಕ್ಕೆ ಹಣ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಧ್ವಜದ ಬಗ್ಗೆ ಮಾತನಾಡಲು ಕೂಡ ಬಿಜೆಪಿಯವರಿಗೆ ಯೋಗ್ಯತೆ ಇಲ್ಲ. ಆರ್.ಎಸ್.ಎಸ್. ದೇಶದ ತಿರಂಗಾ ಧ್ವಜ ಹಾರಿಸಲ್ಲ ಎಂದಿದ್ದರು. ಅವರು ದೇಶದ ಬಾವುಟ ಒಪ್ಪಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ಕಾಂಗ್ರೆಸ್. ಆದರೆ, ಈಗ ದೇಶಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಹೇಳುವ ಮೂಲಕ ಬಿಜೆಪಿಯವರು, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | ಬಿಜೆಪಿ-ಜೆಡಿಎಸ್‌ನ 20-25 ಶಾಸಕರು ಸದ್ಯವೇ ಕಾಂಗ್ರೆಸ್‌ಗೆ: ವಕ್ತಾರ ಲಕ್ಷ್ಮಣ್ ಸ್ಫೋಟಕ ಹೇಳಿಕೆ
ಬಿಹಾರದಿಂದ ಬದಲಾವಣೆ ಆರಂಭ
ಸಂವಿಧಾನ ಬದಲಿಸುವವರನ್ನೇ ಮತದಾರ ಬದಲಾಯಿಸ್ತಾನೆ ಎಂದು ಅಂಬೇಡ್ಕರ್ ಹೇಳಿದ್ದರು. ಆ ಸಮಯ ಬಂದಿದ್ದು, ಸ್ವತಃ ಬಿಜೆಪಿ ನಾಯಕರಿಗೆ ಅದು ಅರ್ಥ ಆಗಿದೆ. ಅವರ ಹೇಳಿಕೆಗಳೇ ಬಿಜೆಪಿಗೆ ಈಗ ತಿರುಗುಬಾಣವಾಗುತ್ತಿದೆ. ಬಿಹಾರದಿಂದ ಬದಲಾವಣೆ ಆರಂಭವಾಗಿದೆ. ಅಮೃತ ಮಹೋತ್ಸವ ಸಂದರ್ಭದಲ್ಲಿ ಅಂತಹ ಬದಲಾವಣೆ ಕಾಣುತ್ತಿದೆ ಎಂದರು.
ಆ.೧೧ರ ಬೆಳಗ್ಗೆ ಸೊರಬದಲ್ಲಿ ಪಾದಯಾತ್ರೆ
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸ್ವಾತಂತ್ರ್ಯ ಅಮೃತ ಮಹೋತ್ಸವ ಮಾಡಲು ನಿಜವಾದ ಹಕ್ಕು ಕಾಂಗ್ರೆಸ್‌ಗೆ ಇದೆ. ಕಾಂಗ್ರೆಸ್‌ನವರೇ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 75 ಕಿ.ಮೀ. ಪಾದಯಾತ್ರೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಸೊರಬ ವಿಧಾನಸಭೆ ಕ್ಷೇತ್ರದಲ್ಲಿ ಗುರುವಾರ (ಆ.೧೧) ಬೆಳಗ್ಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ರಾಜ್ಯ ಮಟ್ಟದ ಜತೆಗೆ ಜಿಲ್ಲಾ ಮಟ್ಟದ ಪ್ರತ್ಯೇಕ ಪ್ರಣಾಳಿಕೆ ರೂಪಿಸಲು ನಿರ್ಣಯಿಸಲಾಗಿದೆ. ಹೀಗಾಗಿ ಮುಂದಿನ ಚುನಾವಣೆಗಾಗಿ ಜಿಲ್ಲಾ ಮಟ್ಟದಲ್ಲೂ ಪ್ರಣಾಳಿಕೆ ಇರಲಿದೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಹಲವಾರು ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆ ಯೋಜನೆಗಳೆಲ್ಲ ಶೇ.90 ರಷ್ಟು ಯಶಸ್ವಿಯಾಗಿತ್ತು. ಅವುಗಳನ್ನೆಲ್ಲ ಬಿಜೆಪಿ ಸರ್ಕಾರ ಗಾಳಿಗೆ ತೂರಿದೆ. ಯಶಸ್ವಿ ಯೋಜನೆಗಳೆಲ್ಲ ಪುನಃ ಜಾರಿಗೆ ಬರಲಿವೆ. ಪ್ರಣಾಳಿಕೆ ಸಿದ್ಧತೆ ಸಂಬಂಧ ಚಿಂತನ ಮಂಥನ ನಡೀತಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸದಸ್ಯರೂ ಆಗಿರುವ ಮಧು ಬಂಗಾರಪ್ಪ ಹೇಳಿದರು.
ಕಾಂಗ್ರೆಸ್‌ಗೆ ಸ್ಫೂರ್ತಿಯಾದ ಸಿದ್ದರಾಮೋತ್ಸವ
ಸಿದ್ದರಾಮೋತ್ಸವ ಕಾರ್ಯಕ್ರಮ ಕಾಂಗ್ರೆಸ್‌ಗೆ ಸ್ಫೂರ್ತಿ ನೀಡಿದೆ. ಆದರೆ, ಚುನಾವಣೆ ಗೆಲ್ಲಲು ಸಾಕಷ್ಟು ಯೋಜನೆ ಕಸರತ್ತು ಮಾಡಬೇಕಿದೆ. ಈಗಾಗಲೇ ಈ ಬಗ್ಗೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ನಮ್ಮ ಮುಖಂಡರ ಜತೆ ಪ್ರತಿದಿನ ಚರ್ಚಿಸುತ್ತಿದ್ದಾರೆ. ಚುನಾವಣೆ ಗೆಲ್ಲಲು ನಾವು ತಂತ್ರ ಹೂಡುತ್ತಿದ್ದೇವೆ. ಸಿದ್ದರಾಮೋತ್ಸವ ನಮಗೆ ಬಲ ನೀಡಿದೆ ಎಂದರು.
ಮೂರು ತಿಂಗಳ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಅರಣ್ಯದಲ್ಲಿ ಮನೆ ಕಟ್ಟಿಕೊಂಡವರಿಗೆ ನೋಟಿಸ್ ನೀಡುವುದಿಲ್ಲ ಎಂದಿದ್ದರು. ಆದರೆ ರೈತರಿಗೆ ಭೂಗಳ್ಳರು ಎಂದು ನೋಟಿಸ್ ನೀಡಲಾಗುತ್ತಿದೆ. ಅಲ್ಲದೆ ಸ್ನೇಟ್ ಹಿಡಿಸಲಾಗುತ್ತಿದೆ. ಬಿಜೆಪಿಯವರಿಗೆ ರೈತರನ್ನು ಕಂಡರೆ ಸಿಟ್ಟು ಇದ್ದಂತೆ ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ | ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿ ಪ್ರತಿಷ್ಠಾಪನೆ ಕಸರತ್ತು ನಡೆದಿದೆ: ಕಾಂಗ್ರೆಸ್
ಬಗೆಹರಿದಿಲ್ಲ ಬಗರ್‌ಹುಕುಂ ಸಮಸ್ಯೆ
ಬಿಜೆಪಿ ಸ್ವಾರ್ಥದ ರಾಜಕಾರಣ ನಡೆಸುತ್ತಿದೆ. ಕಾಂಗ್ರೆಸ್ ಮಾಡಿದ್ದ ದೇಶದ ಆಸ್ತಿಯನ್ನೆಲ್ಲ ಖಾಸಗಿಯವರಿಗೆ ವಹಿಸಿಕೊಟ್ಟಿರುವುದೇ ಅವರ ಸಾಧನೆ. ಬಗರ್ ಹುಕುಂ ಅರ್ಜಿದಾರರಿಗೆ ಇವರಿಗೆ ಈವರೆಗೂ ಹಕ್ಕು ಪತ್ರ ನೀಡಲು ಆಗಿಲ್ಲ. ಮಲೆನಾಡಿನಲ್ಲಿ ಬಗರ್ ಹುಕುಂದಾರರಿಗೆ ಸರ್ಕಾರ ತೊಂದರೆ ಕೊಟ್ಟಿದೆ. 75 ವರ್ಷದ ದಾಖಲೆಯನ್ನು ಸರ್ಕಾರ ಕೇಳುತ್ತದೆ. ಮಲೆನಾಡಿನ ಬಗರ್ ಹುಕುಂ ಸಾಗುವಳಿದಾರರಿಗೆ ಡಬಲ್ ಇಂಜಿನ್ ಸರ್ಕಾರ ತೊಂದರೆ ನೀಡುತ್ತಿದೆ. ಮನೆ ಕೊಡಲು ಕಾಂಗ್ರೆಸ್ ಇದೆ, ಮನೆಗೆ ಹಕ್ಕುಪತ್ರ ನೀಡಲು ಕಾಂಗ್ರೆಸ್ ಇದೆ. ಆದರೆ, ಮನೆ ಉರುಳಿಸಲು ಬಿಜೆಪಿ ಸರ್ಕಾರವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬಗರ್ ಹುಕುಂದಾರರಿಗೆ ನ್ಯಾಯ ಕೊಡಿಸಲಾಗುವುದು. ಈ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ನಡೆಸಿದ್ದೇವೆ ಎಂದರು.
ಕಳಪೆ ಕಾಮಗಾರಿ
ಕಾಮಗಾರಿಗಳಲ್ಲಿ ಅಕ್ರಮಗಳು ನಡೆದು ಹಾಳಾಗಿ ಹೋಗುತ್ತಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ರಸ್ತೆ ಇನ್ನೂ ಬಾಳಿಕೆ ಬಂದಿದೆ. ಆದರೆ, ಇತ್ತೀಚೆಗೆ ನಿರ್ಮಾಣ ಮಾಡಿರುವ ರಸ್ತೆಗಳು ಕಾಮಗಾರಿ ಮುಗಿಯುವುದರೊಳಗೆ ಹಾಳಾಗಿ ಹೋಗುತ್ತಿದೆ. ಟೆರೇಸ್ ಮೇಲೆ ಹಾಕುವ ಹಪ್ಪಳ ಎದ್ದು ಬಂದಹಾಗೆ ಬರುತ್ತಿದೆ. ರಸ್ತೆಗಳು ಬಾಳಿಕೆ ಬರುತ್ತಿಲ್ಲ ಎಂದು ಮಧು ಬಂಗಾರಪ್ಪ ಆರೋಪಿಸಿದರು.
ನೆಹರು ಈ ದೇಶವನ್ನು ಮೂರು ಭಾಗ ಮಾಡಿದವರು, ಅವರ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕ್ರಮ ರೂಪಿಸಲಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ಆ ಸಂದರ್ಭದಲ್ಲಿ ಏನೇನಾಗಿದೆ ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಮೋದಿ ಬಗ್ಗೆ ಮಾತನಾಡಿದರೆ, ಐಟಿ, ಇ.ಡಿ., ಪೊಲೀಸರು ಸರ್ಜಿಕಲ್ ಸ್ಟ್ರೈಕ್ ಮಾಡಿಬಿಡುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮತ್ತಿತರರು ಇದ್ದರು.
ಇದನ್ನೂ ಓದಿ | RSS ಎನ್ನುವುದು ಮೇಲ್ಜಾತಿಯವರ ಅಸೋಸಿಯೇಷನ್: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ