ಮಂಗಳೂರು/ಉಡುಪಿ : ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ದಾಳಿಗೆ ಒಳಗಾಗಿರುವ ಇಸ್ರೇಲ್‌ನಲ್ಲಿ (Israel Palestine war) ಸಾವಿರಾರು ಕರಾವಳಿಗರು (people from Coastal) ಸಿಕ್ಕಿ ಹಾಕಿಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ತಾವು ಬಂಕರ್ ಸೇರಿದಂತೆ ಸುರಕ್ಷಿತ ಜಾಗಗಳಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆದರೆ, ಕೆಲವರ ಸಂಪರ್ಕ ಸಾಧ್ಯವಾಗಿಲ್ಲ. ಸಾವಿರಾರು ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದ್ದು, ಸಾವಿರಾರು ಜನರ ಕೊಲೆಯಾಗಿದೆ, ಕೆಲವರು ಒತ್ತೆ ಸೆರೆಯಾಗಿದ್ದಾರೆ.
ಕರಾವಳಿಯ ಸಾವಿರಾರು ಮಂದಿ ಇಸ್ರೇಲ್‌ನಲ್ಲಿದ್ದಾರೆ. ಹೆಚ್ಚಿನವರು ಪ್ರಮುಖವಾಗಿ ನರ್ಸಿಂಗ್, ಹೋಮ್ ನರ್ಸಿಂಗ್ ಉದ್ಯೋಗದಲ್ಲಿದ್ದಾರೆ. ಇಸ್ರೇಲ್‌ನಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿ ಅವಲೋಕಿಸಿ ಕರಾವಳಿಯ ಕುಟುಂಬಗಳು ಕಂಗಾಲಾಗಿವೆ.
ಮಂಗಳೂರು ಹೊರವಲಯದ ದಾಬಸ್ ಕಟ್ಟೆಯ ಪ್ರವೀಣ ಪಿಂಟೋ ಅವರು ಕಳೆದ 16 ವರ್ಷಗಳಿಂದ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ನೆಲೆಸಿದ್ದಾರೆ.
ಅವರು ಪ್ರಸಕ್ತ ಬಂಕರ್‌ನಲ್ಲಿ ಸುರಕ್ಷಿತವಾಗಿರುವುದಾಗಿ ಫೋಟೋ ಕಳುಹಿಸಿದ್ದಾರೆ. ಅವರ ಪತ್ನಿ ನೀತಾ ಸಲ್ದಾನ ಕೂಡಾ ಇತ್ತೀಚಿನವರೆಗೆ ಅಲ್ಲೇ ಇದ್ದರು. ರಜೆ ನಿಮಿತ್ತ ಊರಿಗೆ ಬಂದಿದ್ದರು ತಮ್ಮ ಮನೆಯಲ್ಲಿದ್ದಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ಪತಿಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿರುವುದಾಗಿ ಅವರು ಹೇಳಿದರು.
ನೀತಾ ಸಲ್ದಾನ ಅವರು ನೀಡಿರುವ ಮಾಹಿತಿ ಇಲ್ಲಿದೆ ನೋಡಿ
ಉಡುಪಿಯ ಸರಳೇಬೆಟ್ಟುವಿನ ಕುಟುಂಬ ಸುರಕ್ಷಿತ
ಉಡುಪಿಯ ಸರಳಬೆಟ್ಟುವಿನ ಕುಟುಂಬ ರಾಜೇಶ್ ಸಾಲಿಯಾನ್ ಅವರ ಕುಟುಂಬ ಇಸ್ರೇಲ್‌ನಲ್ಲಿದ್ದು ಈಗ ಸುರಕ್ಷಿತವಾಗಿದೆ ಎಂದು ಅವರ ಸಹೋದರ ಗಣೇಶ್ ಸಾಲಿಯಾನ್ ತಿಳಿಸಿದ್ದಾರೆ.
ರಾಜೇಶ್ ಮತ್ತು ಕುಟುಂಬ ಬಾಂಬ್, ರಾಕೆಟ್, ಶೆಲ್ ದಾಳಿ ನಡೆದ ಜಾಗದಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿದೆಯಾದರೂ ಯುದ್ಧದ ಸ್ಥಿತಿಯಿಂದ ಊರಿನಲ್ಲಿದ್ದವರಿಗೆ ಭಯ ಆರಂಭವಾಗಿದೆ.
ರಾಜೇಶ್ ಅವರು ಪತ್ನಿ ಆಶಾ, ಮಗ ಅಶ್ಲೇಷ್ ಕಳೆದ ಹತ್ತು ವರ್ಷಗಳಿಂದ ಇಸ್ರೇಲ್‌ನಲ್ಲಿದ್ದಾರೆ. ತಮ್ಮನ ಕುಟುಂಬ ಸೇಫರ್ ಝೋನ್‌ನಲ್ಲಿದೆ. ಯಾವಾಗ ಯಾರು ದಾಳಿ ಮಾಡ್ತಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇಸ್ರೇಲ್ ಯುದ್ಧದ ಘಟನೆ ನಡೆದ ಸಮಯದಿಂದ ನಮಗೆ ಆತಂಕವಾಗಿದೆ. ಜಿಲ್ಲಾಡಳಿತಕ್ಕೆ ತಮ್ಮನ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಗಣೇಶ್ ಸಾಲಿಯಾನ್ ತಿಳಿಸಿದರು.
ಇಸ್ರೇಲಿನಲ್ಲಿ ಸಿಲುಕಿರುವ ಕರಾವಳಿಯ ಪ್ರಮೀಳಾ ಡಿ ಸೋಜಾ ಹಾಗೂ ವಿಕ್ಟರ್ ಡಿ ಸೋಜಾ ಅಲ್ಲಿನ ಪರಿಸ್ಥಿತಿ ವಿವರಿಸಿದ್ದಾರೆ ಕೇಳಿ
ಸರ್ಕಾರದ ನಿರ್ದೇಶನದಂತೆ ಕ್ರಮ ಎಂದ ಉಡುಪಿ ಜಿಲ್ಲಾಧಿಕಾರಿ
ʻʻ ಉಡುಪಿ ಜಿಲ್ಲೆಯಿಂದ ಹೋಂ ನರ್ಸ್, ನರ್ಸ್‌ಗಳಾಗಿ ಹಲವಾರು ಮಂದಿ ಇಸ್ರೇಲ್ ನಲ್ಲಿದ್ದಾರೆ. ನಮ್ಮವರಿಗೆ ಸಮಸ್ಯೆಯಾದ ಬಗ್ಗೆ ಮಾಹಿತಿ ಬಂದಿಲ್ಲ. ಉಡುಪಿ ಜಿಲ್ಲಾಡಳಿತಕ್ಕೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸರಕಾರ ಅಥವಾ ರಾಯಭಾರಿ ಕಚೇರಿಯಿಂದ ಇವರಿಗೆ ಯಾವುದೇ ಉಡುಪಿಗೆ ಮಾಹಿತಿಗಳು ಬಂದಿಲ್ಲ. ಸರ್ಕಾರದ ನಿರ್ದೇಶನದಂತೆ ಉಡುಪಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆʼʼ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ.
ʻʻಇಸ್ರೇಲ್ ನಲ್ಲಿ ಸಂಕಷ್ಟದಲ್ಲಿ ಇದ್ದರೆ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಬಹುದು. ಕುಟುಂಬದವರು ಜಿಲ್ಲಾಡಳಿತಕ್ಕೆ ಅಲ್ಲಿನ ಪರಿಸ್ಥಿತಿಯನ್ನು ತಿಳಿಸಬಹುದು. ಉಡುಪಿ ಜಿಲ್ಲಾಡಳಿತ ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತದೆ. ಇಸ್ರೇಲ್ ನಲ್ಲಿ ಎಷ್ಟು ಜನ ಇದ್ದಾರೆ ಅಥವಾ ಸುತ್ತಮುತ್ತಲ ದೇಶದಲ್ಲಿದ್ದಾರ ಎಂಬ ಬಗ್ಗೆ ಖಚಿತ ಮಾಹಿತಿ ನಮ್ಮಲಿಲ್ಲ. ಉಡುಪಿ ಜಿಲ್ಲಾಡಳಿತದ ಬಳಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ ಇದೆ. ಈವರೆಗೆ ಉಡುಪಿ ಜಿಲ್ಲೆಯಿಂದ ಯಾವುದೇ ಕುಟುಂಬ ನಮ್ಮನ್ನು ಸಂಪರ್ಕ ಮಾಡಿಲ್ಲʼʼ ಎಂದು ಉಡುಪಿ ಡಿ.ಸಿ ಡಾ. ವಿದ್ಯಾ ಕುಮಾರಿ ಹೇಳಿದ್ದಾರೆ.
ಸಂಕಷ್ಟದಲ್ಲಿ ಇರುವವರು, ಕುಟುಂಬಿಕರ ಸಂಪರ್ಕಕ್ಕೆ ಈ ಮಾಹಿತಿ
ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ ಸುರಕ್ಷತಾ ಆಶ್ರಯಗಳ (ಬಾಂಬ್ ಶೆಲ್ಟರ್) ಹತ್ತಿರ ಇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಇಸ್ರೇಲ್ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರುವಂತೆ, ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಹೆಚ್ಚಿನ ಜಾಗರೂಕತೆಯನ್ನು ವಹಿಸುತ್ತಾ, ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ. ಸುರಕ್ಷತಾ ಆಶ್ರಯಗಳ (ಬಾಂಬ್ ಶೆಲ್ಟರ್) ಹತ್ತಿರ ಇರಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಹೆಚ್ಚಿನ ಮಾಹಿತಿಗಾಗಿ, ಇಸ್ರೇಲ್ ಹೋಮ್ ಫ್ರಂಟ್ ಕಮಾಂಡ್ ವೆಬ್ಸೈಟ್ ಅಥವಾ ಕರಪತ್ರವನ್ನು ವೀಕ್ಷಿಸಿ ಎಂದು ತಿಳಿಸಿದ್ದಾರೆ. ಜೊತೆಗೆ https://www.indembassyisrael.gov.in ಸಂಪರ್ಕಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
ಇಸ್ರೇಲ್‌ನಲ್ಲಿರುವ ಭಾರತದ ನಾಗರಿಕರಿಗೆ ಮತ್ತು ಕನ್ನಡಿಗರಿಗೆ ತುರ್ತು ಸಹಾಯದ ಅಗತ್ಯವಿರುವ ಸಂದರ್ಭಗಳಲ್ಲಿ, ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು (080222340676, 08022253707) ಹಾಗೂ ಕೇಂದ್ರ ಸಹಾಯವಾಣಿ ಸಂಖ್ಯೆ (+97235226748) ಸಂಪರ್ಕಿಸುವಂತೆಯೂ ತಿಳಿಸಿದ್ದಾರೆ.