ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ (Lok Sabha Election 2024) ಸಾವಿರಾರು ಮತದಾರರ ಹೆಸರು ನಾಪತ್ತೆಯಾಗಿದೆ. ಯಾವುದೇ ನೋಟಿಸ್ ಇಲ್ಲದೇ ಮತದಾರರ ಪಟ್ಟಿಯಿಂದ ಹೆಸರು (Voter List) ಡಿಲೀಟ್ ಆಗಿದ್ದು, ಅಕ್ರಮವಾಗಿ ಹೊಸ ಮತದಾರರ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ನಿಯೋಗದಿಂದ ದೂರು ನೀಡಲಾಗಿದೆ.
ದೂರು ಸಲ್ಲಿಕೆ ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಗಮನಕ್ಕೆ ಬಾರದೆ ವೋಟರ್ ಲಿಸ್ಟ್‌ನಿಂದ ಹೆಸರು ತೆರವು ಮಾಡಲಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹಲವು ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲ ಎಂಬ ದೂರು ಬಂದಿತ್ತು. ಸುಮಾರು 25 ಸಾವಿರ ಜನರ ಹೆಸರು ಪಟ್ಟಿಯಿಂದ ಡಿಲಿಟ್ ಆಗಿತ್ತು. ಈ ಬಾರಿ ಆ ರೀತಿ ಆಗಬಾರದು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಜನವರಿ 26ರ ನಂತರ ಯಾರದಾದರೂ ಹೆಸರು ಡಿಲೀಟ್ ಆಗಿದ್ದರೆ, ಮಾರ್ಚ್ 25ರವರೆಗೂ ಸೇರ್ಪಡೆಗೆ ಅವಕಾಶವಿದೆ. ಮತದಾರರು ಆನ್‌ಲೈನ್‌ನಲ್ಲಿ ಹೋಗಿ ವೋಟರ್ ನಂಬರ್ ಹಾಕಿ ಪರಿಶೀಲನೆ ಮಾಡಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ಸೇರ್ಪಡೆಗೆ ಅವಕಾಶ ಇದೆ. ಹೆಸರು ಸೇರ್ಪಡೆಗೆ ಮೂರು ದಿನದ ಕಾಲಾವಕಾಶ ಇದೆ ಎಂದು ಹೇಳಿದರು.
ಕೆಲ ಅಧಿಕಾರಿಗಳ ಪಟ್ಟಿಕೊಟ್ಟಿದ್ದಾರೆ. ಐದಾರು ಕ್ಷೇತ್ರದ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ. ಆ ಅಧಿಕಾರಿಗಳ ಪಟ್ಟಿಯನ್ನು ಆಯೋಗಕ್ಕೆ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿ ಶಾಸಕ ಅಶ್ವತ್ಥನಾರಾಯಣ್ ಮಾತನಾಡಿ, ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿಯಾಗಿದ್ದೇವೆ. ಮತದಾರರ ಪಟ್ಟಿಯಲ್ಲಿ ನೋಂದಣಿ, ಪರಿಷ್ಕರಣೆ ಬಗ್ಗೆ ಪರಿಶೀಲನೆ ಮಾಡಿದಾಗ ಹಲವು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಒಂದೇ ಕುಟುಂಬದವರ ಮತದಾನದ ಬೂತ್ ಬದಲಾಗಿದೆ. ಆನ್‌ಲೈನ್‌ನಲ್ಲಿ ಮತದಾನದ ಹೆಸರು ಸೇರ್ಪಡೆ ಮಾಡಲು ಆಗ್ತಿಲ್ಲ. ಹೀಗಾಗಿ ಅಪಾರ್ಟ್ಮೆಂಟ್‌ಗಳಲ್ಲಿ ಪೋಲಿಂಗ್ ಸ್ಟೇಷನ್ ಮಾಡುವ ಬಗ್ಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ | Lok Sabha Election 2024 : ಕೋಟ ಚುನಾವಣಾ ಖರ್ಚಿಗೆ 25,000 ರೂ. ನೀಡಿದ ಚುರುಮುರಿ ವ್ಯಾಪಾರಿ!
ಈ ವೇಳೆ ಶಾಸಕರಾದ ಬೈರತಿ ಬಸವರಾಜ್, ಮುನಿರತ್ನ, ದಾಸರಹಳ್ಳಿ ಮುನಿರಾಜ್, ಜಯನಗರ ಶಾಸಕ ರಾಮಮೂರ್ತಿ ಮತ್ತಿತರರು ಇದ್ದರು.
ನಟ ಶಿವ ರಾಜ್‌ಕುಮಾರ್ ಸಿನಿಮಾ, ಜಾಹೀರಾತು ನಿಷೇಧಿಸಿ; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಬೆಂಗಳೂರು: ನಟ ಶಿವ ರಾಜ್‌ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ (Shiva Rajkumar) ಅವರ ಸಿನಿಮಾ, ಜಾಹೀರಾತುಗಳನ್ನು ನಿಷೇಧ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ದೂರು ಸಲ್ಲಿಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಪತ್ನಿಯ ಚುನಾವಣಾ ಪ್ರಚಾರಕ್ಕೆ ನಟ ಶಿವರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೋಡ್ ಶೋ, ಬೃಹತ್ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ | Vistara News Polling Booth: ಚಿತ್ರದುರ್ಗದಲ್ಲಿ ಮತ್ತೆ ಬಿಜೆಪಿ ಮೇಲುಗೈ; ಕಾಂಗ್ರೆಸ್‌ಗೆ ಹಿನ್ನಡೆ
ಶಿವ ರಾಜ್‌ಕುಮಾರ್ ಜನಪ್ರಿಯ ನಟರಾಗಿದ್ದು, ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅದೇ ರೀತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪತ್ನಿ ಪರ ಪ್ರಚಾರ ಮಾಡುತ್ತಿರುವ ಶಿವ ರಾಜ್‌ಕುಮಾರ್ ಅವರ ಭಾವಚಿತ್ರವುಳ್ಳ ಫ್ಲೆಕ್ಸ್, ಸಿನಿಮಾಗಳು, ಪೋಸ್ಟರ್, ಜಾಹೀರಾತುಗಳನ್ನು ನಿಷೇಧ ಮಾಡಬೇಕು ಎಂದು ಚುನಾವಣಾ ಆಯೋಗಕ್ಕ ದೂರು ನೀಡಲಾಗಿದೆ.