ಬೆಂಗಳೂರು: ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಮತ್ತೆ ಬೆದರಿಕೆ ಕರೆಗಳು ಬಂದಿದ್ದು, ಇದರ ಹಿನ್ನೆಲೆಯಲ್ಲಿ ಸಚಿವರ ಕಚೇರಿ ಹಾಗೂ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ ಜಯೇಶ್ ಪೂಜಾರಿ ಎಂಬಾತನೇ ಮತ್ತೆ ಬೆದರಿಕೆ ಕರೆ ಮಾಡಿದ್ದಾನೆ ಎಂಬುದಾಗಿ ನಾಗ್ಪುರ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮಂಗಳೂರಿನ ಮಹಿಳೆಯ ಮೊಬೈಲ್‌ನಿಂದ ಬೆದರಿಕೆ ಕರೆ ಮಾಡಿದ್ದಾನೆ ಎಂದು ಮಹತ್ವದ ಅಂಶ ಬಹಿರಂಗಪಡಿಸಿದ್ದಾರೆ.
“ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆಗಳನ್ನು ಮಾಡಿದ ವ್ಯಕ್ತಿಯು ಜಯೇಶ್ ಪೂಜಾರಿ ಎಂಬುದಾಗಿ ತಿಳಿಸಿದ್ದಾನೆ. ಕರೆ ಮಾಡಿದ ನಂಬರ್‌ಅನ್ನು ಆಧರಿಸಿ ತನಿಖೆ ನಡೆಸಲಾಗಿದ್ದು, ಆ ಮಹಿಳೆಯು ಮಂಗಳೂರಿನವರು ಎಂಬುದಾಗಿ ಗೊತ್ತಾಗಿದೆ. ನಾವು ಕೂಡ ಆ ಮಹಿಳೆಯನ್ನು ಸಂಪರ್ಕಿಸಿದ್ದು, ಮಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಮಹಿಳೆಯ ಫ್ರೆಂಡ್ ಅಥವಾ ಜಯೇಶ್ ಪೂಜಾರಿಯಿಂದ ಕರೆ ಬಂದಿರುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ” ಎಂದು ನಾಗ್ಪುರ ಡಿಸಿಪಿ ರಾಹುಲ್ ಮಂದಾನೆ ಮಾಹಿತಿ ನೀಡಿದ್ದಾರೆ.
ನಾಗ್ಪುರ ಪೊಲೀಸರು ನೀಡಿದ ಮಾಹಿತಿ
ನಿತಿನ್ ಗಡ್ಕರಿ ಕಚೇರಿಗೆಕರೆ ಮಾಡಿ 10 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಜನವರಿಯಲ್ಲಿ ಕರೆ ಮಾಡಿದ್ದಾಗ 100 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂಬುದಾಗಿ ತಿಳಿದುಬಂದಿದೆ. ಅಲ್ಲದೆ, ಜನವರಿಯಲ್ಲಿ ಕರೆ ಮಾಡಿದ್ದಾತ, ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಎಂಬುದಾಗಿ ಹೇಳಿದ್ದ. ಆಗಲೂ, ಗಡ್ಕರಿ ನಿವಾಸ ಹಾಗೂ ಕಚೇರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಜನವರಿಯಲ್ಲೂ ಜಯೇಶ್ ಪೂಜಾರಿ ಹೆಸರಲ್ಲಿ ಕರೆ
ಕಳೆದ ಜನವರಿ 14ರಂದು ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಕಚೇರಿಗೆ ರಾತ್ರಿ 11.25, 11.32 ಮತ್ತು 12.32ಕ್ಕೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದು ಹಿಂಡಲಗಾ ಜೈಲಿನಿಂದ ಬಂದ ಕರೆ ಇದೆಂದು ಪ್ರಾಥಮಿಕ ತನಿಖೆಯಲ್ಲೇ ಬಯಲಾಗಿತ್ತು. ಆವತ್ತು ಕರೆ ಮಾಡಿದವನು ಜೈಲಿನಲ್ಲಿರುವ ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್ ಸ್ಟರ್ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂದು ಪತ್ತೆ ಹಚ್ಚಲಾಗಿತ್ತು. ಆವತ್ತು ಜಯೇಶ್ ಪೂಜಾರಿಯ ಕೋಣೆಯನ್ನು ಶೋಧಿಸಿದಾಗ ಒಂದು ಡೈರಿ ಪತ್ತೆಯಾಗಿತ್ತು.
ಜಯೇಶ್ ಕಾಂತಾನನ್ನು ಆವತ್ತು ನಾಗಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮರಳಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ಈಗ ಆತ ಮತ್ತೆ ಕರೆ ಮಾಡಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪದೇಪದೆ ಗಡ್ಕರಿ ಅವರಿಗೆ ಕರೆ ಮಾಡುವ ಉದ್ದೇಶದ ಬಗ್ಗೆಯೂ ತನಿಖೆ ಆಗಬೇಕಾಗಿದೆ. ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Nitin Gadkari : ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?