ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (Karnataka Election) ಸುಳ್ಳು ಕೇಸ್ ಹಾಕಿ ಜನರಿಗೆ ಬೆದರಿಕೆ ಹಾಕುವ ಮೂಲಕ ಕಿರುಕುಳ ನೀಡುತ್ತಿರುವ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಯಶವಂತಪುರ ಕ್ಷೇತ್ರದ ಕಗ್ಗಲಿಪುರ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯಕುಮಾರ್, ತಾವರೆಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ರಾಮಪ್ಪ ಗುತ್ತೆದಾರ್ ಹಾಗೂ ತಲಘಟ್ಟಪುರ ಇನ್ಸ್‌ಪೆಕ್ಟರ್ ಜಗದೀಶ್ ವಿರುದ್ಧ ದೂರು ನೀಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರ ಮೇಲೆ ಸುಳ್ಳು ಕೇಸ್ ಹಾಕಿ ಬೆದರಿಕೆ ಹಾಕುತ್ತಿರುವ ಮೂವರು ಠಾಣಾಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಮಾಜಿ ಪ್ರಧಾನಿಗಳು ದೂರಿನಲ್ಲಿ ಕೋರಿದ್ದಾರೆ.
ಸ್ಥಳೀಯ ಶಾಸಕರ ( ಬಿಜೆಪಿಯ ಎಸ್.ಟಿ.ಸೋಮಶೇಖರ್) ಪರವಾಗಿ ಮತ ಹಾಕುವಂತೆ ಈ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಅಲ್ಲಿನ ನಾಗರಿಕರಿಗೆ ಒತ್ತಾಯಿಸಿ ಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳ ವರ್ತನೆ ಮತದಾರರ ಮೇಲೆ ಪ್ರಭಾವ ಬೀರುವ ಸಂಭವವಿದೆ. ಹೀಗಾಗಿ ಇನ್ಸ್‌ಪೆಕ್ಟರ್‌ಗಳನ್ನು ಎತ್ತಂಗಡಿ ಮಾಡಬೇಕು ಎಂದು ದೇವೇಗೌಡರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Karnataka Election: ಬಿಜೆಪಿ ಪರ ಪ್ರಚಾರ; ಟೆಲಿಕಾಲಿಂಗ್ ಸೆಂಟರ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ, 59 ಕಂಪ್ಯೂಟರ್ ಜಪ್ತಿ
ಸ್ಕೂಟರ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಸವಾರ ಸಾವು
ಬೆಂಗಳೂರು: ಸ್ಕೂಟರ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದ್ದರಿಂದ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ (Road Accident) ಅಶೋಕ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಶಿವಾಜಿನಗರದ ನಾಜೀಮ್ (36) ಮೃತ ಸವಾರ. ಲೋಯರ್ ಅಗ್ರಂ ರಸ್ತೆಯಲ್ಲಿ ಅಪಘಾತ ನಡೆದಿದ್ದು, ಟಿಪ್ಪರ್ ಲಾರಿ ಸಮೇತ ಚಾಲಕ ಭೋಜರಾಜು ಎಂಬಾತನನ್ನು ಅಶೋಕ ನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.