ಚಾಮರಾಜನಗರ/ಉಡುಪಿ: ಉಡುಪಿ ಮತ್ತು ಚಾಮರಾಜ ನಗರ ಜಿಲ್ಲೆಯಲ್ಲಿ ಮೂವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರು ಟ್ರ್ಯಾಕ್ಟರ್ ಮಗುಚಿ, ಇನ್ನೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರೆ, ಇನ್ನೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟ್ರ್ಯಾಕ್ಟರ್ ಮಗುಚಿ ರೈತ ಸಾವು
ಚಾಮರಾಜ ನಗರದ ಕೊತ್ತಲವಾಡಿ ಗ್ರಾಮದಲ್ಲಿ ಶಿವಕುಮಾರ್ (೩೨) ಎಂಬವರು ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮಗುಚಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಮರಾಜ ನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ಸ್ಪರ್ಶದಿಂದ ಕೃಷಿಕ ಮೃತ್ಯು
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಕೃಷಿಕರೊಬ್ಬರು ಮೃತಪಟ್ಟಿದ್ದಾರೆ. ಸತೀಶ ಸುಬ್ರಾಯ ಪ್ರಭು (52) ಮೃತಪಟ್ಟವರು.
ಇವರು ಏಣಿ ಏರಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಸತೀಶ್ ಪ್ರಭು ಅವರು ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ಕ್ರೈಂ ಪಿ.ಎಸ್.ಐ ಮಹೇಶ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದಾರೆ.
ಕೋರ್ಟ್ ಮೆಟ್ಟಿಲು ಹತ್ತಿದ ಬ್ಯಾಂಕ್: ಆತ್ಮಹತ್ಯೆ
ಟ್ರ್ಯಾಕ್ಟರ್ ಖರೀದಿಗೆಂದು ಖಾಸಗಿ ಫೈನಾನ್ಸ್‌ನಿಂದ ಸಾಲ ಪಡೆದಿದ್ದ ರೈತರೊಬ್ಬರು ಅದನ್ನು ಮರುಪಾವತಿ ಮಾಡಲಾಗದೆ ಸಾವಿಗೆ ಶರಣಾಗಿದ್ದಾರೆ. ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದ ನಿವಾಸಿಯಾಗಿರುವ ಕೃಷ್ಣಯ್ಯ ಅವರು ಮೃತಪಟ್ಟರು. ಅವರಿಗೆ ೪ ಎಕರೆ ಜಮೀನಿದೆ. ಮೂರು ವರ್ಷಗಳ ಹಿಂದೆ ಖಾಸಗಿ ಫೈನಾನ್ಸ್ ಮೂಲಕ ಸಾಲ ಪಡೆದು ಟ್ರಾಕ್ಟರ್ ಖರೀದಿ ಮಾಡಿದ್ದರು. ಆದರೆ ಕೊರೊನಾ ಮತ್ತು ಇತರ ಸಮಸ್ಯೆಗಳಿಂದಾಗಿ ಲೋನ್ ಮರುಪಾವತಿ ಮಾಡಲಾಗಿರಲಿಲ್ಲ. ಈ ಮಧ್ಯೆ ಬ್ಯಾಂಕ್‌ನವರು ಇಎಂಐ ಕಟ್ಟದ ಕಾರಣ ಟ್ರಾಕ್ಟರ್ ಜಪ್ತಿ ಮಾಡಿದ್ದರು. ಅಲ್ಲದೇ ಚೆಕ್‌ಬೌನ್ಸ್ ಕೇಸ್ ಅನ್ನು ದಾಖಲು ಮಾಡಿದ್ದರು.. ಇದರಿಂದ ಮನನೊಂದ ಕೃಷ್ಣಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.