ಮಂಗಳೂರು: ನಗರದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಸೆಪ್ಟೆಂಬರ್ 21ರಂದು ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಸುರಕ್ಷಿತವಾಗಿ ವಾಪಸಾಗಿದ್ದಾರೆ.
ಮಂಗಳೂರಿನ ಮೇರಿಹಿಲ್ ಬಳಿಯ ವಿಕಾಸ್ ಕಾಲೇಜಿನ ಹಾಸ್ಟೆಲ್‌ನಿಂದ ಬೆಂಗಳೂರಿನ ಇಬ್ಬರು ಹಾಗೂ ಚಿತ್ರದುರ್ಗದ ಒಬ್ಬ ವಿದ್ಯಾರ್ಥಿನಿಯು ಪತ್ರ ಬರೆದಿಟ್ಟು ಎಸ್ಕೇಪ್ ಆಗಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಮಂಗಳೂರು ಪೊಲೀಸರಿಗೆ ಮೂವರೂ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದ ಮಾಹಿತಿ ದೊರೆತಿತ್ತು. ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬಳ ಸಂಬಂಧಿಕೊರೊಬ್ಬರು ಚೆನ್ನೈನಲ್ಲಿ ಇದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದ್ದರು.
ಮೊಬೈಲ್ ಸಂಖ್ಯೆ ಹಾಗೂ ಸರಿಯಾದ ವಿಳಾಸ ಇಲ್ಲದ ಕಾರಣ ವಿದ್ಯಾರ್ಥಿನಿಯರು ನಿರೀಕ್ಷಿಸಿದ ಸ್ಥಳ ತಲುಪಿರಲಿಲ್ಲ. ಅಲ್ಲದೆ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದೆ ಎರಡು ದಿನ ಬಸ್‌ನಲ್ಲಿ ದೂರದ ಪ್ರಯಾಣ ಮಾಡಿದ್ದರು. ಕೊನೆಗೂ ತಪ್ಪಿನ ಅರಿವಾಗಿ ಆಟೋ ಸಹಾಯದಿಂದ ಚೆನ್ನೈನ ಪೊಲೀಸ್ ಠಾಣೆ ತಲುಪಿದ್ದಾರೆ. ತಾವು ಮಾಡಿದ ತಪ್ಪಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಪೊಲೀಸರ ಸಹಾಯದಿಂದ ಮಂಗಳೂರಿಗೆ ವಾಪಸಾಗಿದ್ದಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಕಾರಣಕ್ಕೆ ಹೀಗೆ ಮಾಡಿರುವುದಾಗಿ ತಿಳಿಸಿದ್ದಾರೆ.
”ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಎಂದು ಕಾಗದದ ಮೇಲೆ ಬರೆದಿಟ್ಟು ಮೂವರು ವಿದ್ಯಾರ್ಥಿನಿಯರು ಸೆ.21ರಂದು ಮುಂಜಾನೆ ಹಾಸ್ಟೆಲ್‌ನಿಂದ ಪರಾರಿಯಾಗಿದ್ದರು. ಇವರು ಕಿಟಕಿ ಸರಳು ಮುರಿದು ಹೋಗಿದ್ದರು. ಹೊರಗೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ಆರಂಭಿಸಿದ್ದರು. ಇದರಿಂದ ಕಾಲೇಜು ಆಡಳಿತ ಮಂಡಳಿ ಹಾಗೂ ಪಾಲಕರು ಆತಂಕಗೊಂಡಿದ್ದರು. ಆದರೆ ಈಗ ವಿದ್ಯಾರ್ಥಿನಿಯರೇ ವಾಪಸಾಗಿದ್ದಾರೆ.
ಇದನ್ನೂ ಓದಿ | B.Y. Vijayendra: ಭ್ರಷ್ಟಾಚಾರದ ಬಗ್ಗೆ ಮಾತಾಡಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ