Site icon Vistara News

Karnataka Rain: ರಾಜ್ಯದಲ್ಲಿ ಅಬ್ಬರಿಸಿದ ವರ್ಷ; ಮಳೆ ಅನಾಹುತಕ್ಕೆ ಮೂವರು ಬಲಿ

Karnataka Rain Heavy rains lash parts of Karnataka

Karnataka Rain Heavy rains lash parts of Karnataka

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಸುರಿದ ಭಾರಿ ಮಳೆ (Karnataka Rain) ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಹಲವೆಡೆ ಬಿರುಸಿನ ಮಳೆಗೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೆಂಗಳೂರಿನಲ್ಲಿ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರೆ, ಕಾಫಿನಾಡಿನಲ್ಲಿ ಮರ ಬಿದ್ದು ಬೈಕ್‌ ಸವಾರರೊಬ್ಬರು ಕೊನೆಯುಸಿರೆಳೆದಿದ್ದಾರೆ. ಅದೇ ರೀತಿ ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಇದಷ್ಟೇ ಅಲ್ಲದೆ ಮಳೆಯಿಂದ ಹಲವು ರೀತಿಯ ಅನಾಹುತಗಳು ನಡೆದಿವೆ.

ಬೆಂಗಳೂರಲ್ಲಿ ಬಿರುಗಾಳಿ ಮಳೆ; ಅಂಡರ್‌ಪಾಸ್‌ನಡಿ ಸಿಲುಕಿ ಮಹಿಳೆ ಸಾವು, ಆರು ಮಂದಿ ಪಾರು

ಬೆಂಗಳೂರು: ಭಾರಿ ಮಳೆಯಿಂದ ನಗರದ ಕೆ.ಆರ್‌. ಸರ್ಕಲ್ ಬಳಿಯ ಅಂಡರ್ ಪಾಸ್‌ ಜಲಾವೃತವಾಗಿತ್ತು. ಆ ಮಾರ್ಗದಲ್ಲಿ ಬಂದ ಕಾರೊಂದು ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಒಳಗೆ ಚಾಲಕ ಸೇರಿ ಏಳು ಜನ ಸಿಲುಕಿಕೊಂಡಿದ್ದರು. ಹೀಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಆರು ಮಂದಿಯನ್ನು ರಕ್ಷಣೆ ಮಾಡಿದ್ದು, ಒಬ್ಬ ಯುವತಿ ಮೃತಪಟ್ಟಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದಿದ್ದ ಆರು ಮಂದಿ ಅಂಡರ್‌ಪಾಸ್‌ ನಡಿ ಸಿಲುಕಿದ್ದರು. ಸ್ಥಳೀಯರು ಹಾಗೂ ಪೊಲೀಸರು ಸೇರಿ ಸಿಲುಕಿದವರನ್ನು ರಕ್ಷಣೆ ಮಾಡಿದರು. ಇದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯೊಬ್ಬಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Bengaluru Rain: ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಮೃತ್ಯು, ಆರು ಮಂದಿ ರಕ್ಷಣೆ; ಹೇಗಿತ್ತು ಕಾರ್ಯಾಚರಣೆ?

ಬಿರುಗಾಳಿ ಮಳೆ, ಮೂಡಿಗೆರೆಯಲ್ಲಿ ಸ್ಕೂಟರ್ ಮೇಲೆ ಮರ ಬಿದ್ದು ಸವಾರ ಸಾವು

heavy rain in kolar

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯಲ್ಲಿ ಸ್ಕೂಟರ್‌ ಮೇಲೆ ಮರ ಬಿದ್ದಿದ್ದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಹಳ್ಳ ಬಳಿ ನಡೆದ ದುರಂತದಲ್ಲಿ ಮೃತಪಟ್ಟವರನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಭಾರಿ ಮಳೆಯಾಗುತ್ತಿದ್ದಾಗ ವೇಣುಗೋಪಾಲ್ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಒಂದರ ಹಿಂದೆ ಒಂದರಂತೆ ಏಕಕಾಲಕ್ಕೆ ಮೂರು ಮರಗಳು ಬಿದ್ದಿವೆ, ಹೀಗಾಗಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಹೊರಟ್ಟಿ, ಬಣಕಲ್, ಬಾಳೂರು ಭಾಗದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು

ಕೊಪ್ಪಳ: ತಾಲೂಕಿನ ಶಿವಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಮೃತ ಬಾಲಕ. ಮಧ್ಯಾಹ್ನ ಸಿಡಿಲು ಬಡಿದಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಬಾಲಕ ಸಾವಿಗೀಡಾಗಿದ್ದಾನೆ.

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿಯಿತು.

ಚಿಕ್ಕಬಳ್ಳಾಪುರದಲ್ಲಿ ನೆಲಕಚ್ಚಿದ ಬಾಳೆಗಿಡಗಳು

heavy rain in kolar

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಭಾನುವಾರ ಮಧ್ಯಾಹ್ನ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರಿನಲ್ಲಿ ಮಳೆ‌ ಆರ್ಭಟ‌ಕ್ಕೆ ರೇಷ್ಮೆ ಸಾಕಾಣಿಕೆದಾರರ ಬದುಕು ಅಸ್ತವ್ಯಸ್ತವಾಗಿದೆ. ಭಾರಿ ಮಳೆಗೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮ ಶೀಗೆಹಳ್ಳಿ ಗ್ರಾಮದ ರೈತರ ನಾಲ್ಕೈದು ಹುಲ್ಲಿನ ಬಣವೆಗಳು ಗಾಳಿಗೆ ಹಾರಿ ಹೋಗಿವೆ. ಇನ್ನು ಅಶ್ವತ್ಥಪ್ಪ ಎಂಬುವವರ ರೇಷ್ಮೆ ಸಾಕಾಣಿಕೆ ಮನೆಗೆ ಹಾಕಿದ್ದ ಸಿಮೆಂಟ್ ತಗಡುಗಳು ಹಾರಿ ಹೋಗಿವೆ. ಹಾಗೆಯೇ ಶ್ರೀನಿವಾಸ್ ಎಂಬುವವರು ಅರ್ಧ ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಮತ್ತೊಂದೆಡೆ ಮರ ಬಿದ್ದು ಶ್ರೀನಿವಾಸ್ ಎಂಬುವವರ ಟ್ರ್ಯಾಕ್ಟರ್‌ ಜಖಂಗೊಂಡಿದೆ.

ಚಿತ್ರದುರ್ಗ, ತುಮಕೂರಿನಲ್ಲಿ ಬಿರುಸಿನ ಮಳೆ

ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಭಾನುವಾರ ಬಿರುಸಿನ ಮಳೆಯಾಗಿದೆ. ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯಿತು. ಇನ್ನು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಸತತ 3 ಗಂಟೆ ಮಳೆಯಾಯಿತು. ಇದರಿಂದ ಬಿಸಿಲ ಬೇಗೆಗೆ ಬೇಸತ್ತಿದ್ದ ಮಂದಿಗೆ ವರುಣ ತಂಪೆರೆದಿದ್ದಾನೆ. ಹೊಸದುರ್ಗ, ಹಿರಿಯೂರು ತಾಲೂಕಿನಲ್ಲಿ ಗಾಳಿ ಸಹಿತ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ.

ಇದನ್ನೂ ಓದಿ | Bengaluru Rain: ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಮೃತ್ಯು, ಆರು ಮಂದಿ ರಕ್ಷಣೆ; ಹೇಗಿತ್ತು ಕಾರ್ಯಾಚರಣೆ?

ಕೋಲಾರ- ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಬೃಹತ್ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆ

heavy rain in kolar

ಕೋಲಾರ: ಜಿಲ್ಲೆಯಲ್ಲಿ ಸತತ ಒಂದು ಗಂಟೆ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಕೋಲಾರ- ಚಿಕ್ಕಬಳ್ಳಾಪುರ ಮಾರ್ಗದ ಧನ್ಮಟ್ನಹಳ್ಳಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದ ಹಿನ್ನೆಲೆಯಲ್ಲಿ ಒಂದು ಗಂಟೆ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಗ್ರಾಮಸ್ಥರ ನೆರವಿನಿಂದ ಮರವನ್ನು ತೆರವು ಮಾಡಲಾಯಿತು.

Exit mobile version