ಮಡಿಕೇರಿ: ದುಷ್ಕರ್ಮಿಗಳ ತಂಡವೊಂದು ಯುವತಿಯೊಬ್ಬಳನ್ನು ಕಾಫಿ ತೋಟಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ (Harrassment) ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಆದರೆ, ಯುವತಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಆರೋಪಿಗಳು ಆಕೆಯನ್ನು ಬಿಟ್ಟು ಓಡಿದ್ದಾರೆ. ಆಗ ಒಬ್ಬನನ್ನು ಸ್ಥಳೀಯರು ಹಿಡಿದಿದ್ದಾರೆ, ಇತರ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಸಮೀಪದ ಬಿಳಿಗೇರಿಯಲ್ಲಿ 19 ವರ್ಷ ವಯಸ್ಸಿನ ದಲಿತ ವಿವಾಹಿತ ಯುವತಿಯ ಮೇಲೆ ದೌರ್ಜನ್ಯ ನಡೆದಿದೆ. ರಾತ್ರಿ 9.30ರ ಹೊತ್ತಿಗೆ ಆಕೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ದುಷ್ಟರು ಆಕೆಯನ್ನು ಬಲಾತ್ಕಾರವಾಗಿ ಕಾಫಿ ತೋಟದೊಳಗೆ ಎಳೆದೊಯ್ಯಲು ಪ್ರಯತ್ನಿಸಿದರು. ಯುವತಿ ಜೋರಾಗಿ ಕಿರುಚಿಕೊಂಡಾಗ ಯುವತಿಯ ಸಂಬಂಧಿಕರು ಗಮನಿಸಿದರು. ಅವರು ಕೂಡಲೇ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಪ್ರಮುಖರಿಗೆ ಕರೆ ಮಾಡಿ ತಿಳಿಸಿದರು.
ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿಯಾದ ನಂದಿ ಮೊಟ್ಟೆಯ ರಾಜ ಹಾಗೂ ದುಷ್ಕೃತ್ಯಕ್ಕೆ ಬಳಸಿದ ಎರಡು ಆಟೋಗಳನ್ನು ವಶಕ್ಕೆ ಪಡೆದರು.
ದುಷ್ಕೃತ್ಯದ ನಡೆಸಿದ ಪ್ರಮುಖ ಆರೋಪಿಗಳಾದ ಹಟ್ಟಿಹೊಳೆಯ ನೌಶದ್ ಹಾಗೂ ಇಗ್ಗೋಡ್ಲು ಆಶ್ರಯ ಕಾಲೋನಿಯ ನಿವಾಸಿ ಹಾಗೂ ಮಾದಾಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ಫಾರೂಕ್ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ದುಷ್ಕೃತ್ಯಕ್ಕೆ ಬಳಸಿರುವ ಎರಡು ಆಟೋ ರಿಕ್ಷಾಗಳು ಇಗ್ಗೋಡ್ಲು ಆಶ್ರಯ ಕಾಲೋನಿಯ ನೌಶದ್ ಹಾಗೂ ರಶೀದ್ ಎಂಬವರಿಗೆ ಸೇರಿದ್ದೆಂದು ತಿಳಿದುಬಂದಿದೆ.
ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಒಬ್ಬ ಆರೋಪಿ ಹಾಗೂ ಎರಡು ಆಟೋ ರಿಕ್ಷಾಗಳನ್ನು ಸೋಮವಾರಪೇಟೆ ಪೋಲೀಸರಿಗೊಪ್ಪಿಸಿದರು. ಆರೋಪಿಗಳು ಹೊರದೇಶಗಳಿಗೆ ಪಲಾಯನ ಮಾಡುವ ಸಾಧ್ಯತೆಯಿರುವುದರಿಂದ ಅವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ತಪ್ಪಿದ್ದಲ್ಲಿ ಅನ್ಯಾಯಕ್ಕೊಳಗಾದ ಯುವತಿ ಹಾಗೂ ಅವರ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಲು ಸಂಘಟನೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸೋಮವಾರಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೊಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ : Harrassment : ಹಾಸನದ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಪ್ರಿನ್ಸಿಪಾಲ್ ಸೇರಿ ಐವರ ಸೆರೆ