ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ (KPTCL Exam Scam) ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12 ಕ್ಕೆ ಏರಿದೆ.
ಹುಕ್ಕೇರಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ, ಕಮತನೂರು ನಿವಾಸಿ ಆದೇಶ ನಾಗನೂರಿ, ಪರೀಕ್ಷಾರ್ಥಿಗಳ ಸಂಬಂಧಿಕರಾದ ಬೈಲಹೊಂಗಲ ತಾಲೂಕಿನ ನಾವಲಗಟ್ಟಿಯ ಮಡಿವಾಳಪ್ಪ ತೋರಣಗಟ್ಟಿ, ಹೊಸಕೋಟಿ ಗ್ರಾಮದ ಶಂಕರ ಉಣಕಲ್ ಬಂಧಿತರು.
ಅತಿಥಿ ಉಪನ್ಯಾಸಕ ಆದೇಶ ನಾಗನೂರಿ ಗದಗದಿಂದ ಬಂದಿದ್ದ ಪ್ರಶ್ನೆಪತ್ರಿಕೆಗೆ ಉತ್ತರ ಬಿಡಿಸಿದ್ದ. ಈತನ ಬಳಿ ಪರೀಕ್ಷಾರ್ಥಿಗಳ ಸಂಬಂಧಿಕರಾದ ಮಡಿವಾಳಪ್ಪ ತೋರಣಗಟ್ಟಿ, ಶಂಕರ ಉಣಕಲ್ ತಲಾ ಒಂದು ಬ್ಲುಟೂತ್ ಡಿವೈಸ್ ಪಡೆದಿದ್ದರು. ಆದರೆ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಬಂಧಿತರಿಂದ ಒಂದು ಕಾರು, ಎರಡು ಬ್ಲುಟೂತ್ ಪರಿಕರಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ | ಹೆಸರಾಂತ ಸಂಶೋಧಕಿ, ಆಕಾಶವಾಣಿಯ ನಿಲಯ ನಿರ್ದೇಶಕರಾಗಿದ್ದ ಡಾ. ಜ್ಯೋತ್ಸ್ನಾ ಕಾಮತ್ ಇನ್ನಿಲ್ಲ
ಕಿಂಗ್‌ಪಿನ್ ಸಂಜು ಭಂಡಾರಿ ಬಳಿ ಅತಿಥಿ ಉಪನ್ಯಾಸಕ ಡಿವೈಸ್ ಪಡೆದು ಪರೀಕ್ಷಾರ್ಥಿಗಳ ಸಂಬಂಧಿಕರಿಗೆ ನೀಡಿದ್ದ. ಇದಕ್ಕಾಗಿ 6 ಲಕ್ಷ ರೂಪಾಯಿಗೆ ಡೀಲ್ ಫೈನಲ್ ಮಾಡಿ ಪರೀಕ್ಷಾರ್ಥಿಗಳ ಸಂಬಂಧಿಕರು ಬ್ಲುಟೂತ್ ಡಿವೈಸ್ ಪಡೆದಿದ್ದರು. ಎಸ್‌ಪಿ ಡಾ.ಸಂಜೀವ ಪಾಟೀಲ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳು ಬಂಧಿತರ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿಸಿವೆ.
ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ವೇಳೆ ಅಕ್ರಮ ಎಸಗಿದ ಆರೋಪದಲ್ಲಿ ಬೆಳಗಾವಿ ಪೊಲೀಸರು ಇದವರೆಗೆ ಒಂಬತ್ತು ಮಂದಿಯನ್ನು ಬಂಧಿಸಿದ್ದರು. ಒಟ್ಟು 13 ಮಂದಿ ಅಕ್ರಮ ಮಾರ್ಗದ ಮೂಲಕ ಪರೀಕ್ಷೆ ಬರೆದಿರುವುದಾಗಿ ಹೇಳಲಾಗಿತ್ತು.
ಗೋಕಾಕ್ ಜಿ.ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಲಾಗಿದ್ದು, ಉತ್ತರಕನ್ನಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳ ಪರೀಕ್ಷಾರ್ಥಿಗಳು ಈ ಅಕ್ರಮದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದೆ.
ಇದನ್ನೂ ಓದಿ | ಕನ್ನಡ ಸಂಸ್ಕೃತಿ ಇಲಾಖೆ ಟ್ರಸ್ಟ್‌ಗಳಿಗೆ ನೇಮಕ: ತಿರಸ್ಕರಿಸಿದ ಚಕ್ರವರ್ತಿ ಸೂಲಿಬೆಲೆ