ಕಾರವಾರ/ಕಲಬುರಗಿ/ಆನೇಕಲ್: ರಾಜ್ಯದ ಪ್ರತ್ಯೇಕ ಕಡೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ಸಾವು-ನೋವುಗಳು ಸಂಭವಿಸಿವೆ. ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದಲ್ಲಿ ಟೆಂಪೋ ಪಲ್ಟಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರೆ, ಕಲಬುರಗಿ ಜಿಲ್ಲೆಯ ಸೇಡಂ ಬಳಿ ಕೊಡಂಗಲ್ ರಸ್ತೆ ಬಳಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್-ಥಳಿ ಮುಖ್ಯರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಟೈರ್ ಬ್ಲಾಸ್ಟ್ ಆಗಿ ಟೆಂಪೋ ಪಲ್ಟಿ
ಕಾರವಾರ: ಹೊನ್ನಾವರದ ಗೇರುಸೊಪ್ಪ ಬಳಿ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ಟೆಂಪೋ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದ್ದು, ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಈ ವೇಳೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ಲಾರಿ ಹಾಯ್ದು ಸ್ಥಳದಲ್ಲೇ ಯುವಕ ಸಾವು
ಕಲಬುರಗಿ: ಜಿಲ್ಲೆಯ ಸೇಡಂ ಬಳಿ ಕೊಡಂಗಲ್ ರಸ್ತೆ ಬಳಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುರುಕುಂಟಾದ ಸಿಸಿಐ ಕಾಲೋನಿಯ ಇಂದಿರಾ ನಗರದ ನಿವಾಸಿ ಕಾಶಿನಾಥ್ ಶಂಕರ ರಾಠೋಡ್ (30) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸೇಡಂ ಕಡೆಯಿಂದ ಕೊಡಂಗಲ್ ಕಡೆಗೆ ಬೈಕ್‌ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಏಕಾಏಕಿ ಬಂದ ಲಾರಿ ಬೈಕ್‌ಗೆ ಗುದ್ದಿದ್ದು, ಕೆಳಗೆ ಬಿದ್ದ ಸವಾರನ ತಲೆ ಮೇಲೆ ಹಾಯ್ದು ಹೋಗಿದೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡುರಸ್ತೆಯಲ್ಲಿ ಪಲ್ಟಿಯಾದ ಟಿಪ್ಪರ್ ಲಾರಿ
ಆನೇಕಲ್: ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಬಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತಪ್ಪಿಸಲು ಹೋದ ಟಿಪ್ಪರ್ ಲಾರಿಯೊಂದು ಆನೇಕಲ್-ಥಳಿ ಮುಖ್ಯರಸ್ತೆಯಲ್ಲಿ ಪಲ್ಟಿಯಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ: Weather Report: ಇಂದು, ನಾಳೆ ದಕ್ಷಿಣ-ಉತ್ತರ ಒಳನಾಡಲ್ಲಿ ಗುಡುಗು ಸಹಿತ ಮಳೆ; ಬೆಂಗಳೂರಿನ ಸ್ಥಿತಿ ಏನು?
ರಾತ್ರಿ ಸುರಿದ ಮಳೆಗೆ ರಸ್ತೆಗೆ ಅಡ್ಡವಾಗಿ ಬೃಹತ್ ಗಾತ್ರದ ಮರವೊಂದು ಬಿದ್ದಿತ್ತು. ಆದರೆ, ಇದರ ಅರಿವಿಲ್ಲದ ಚಾಲಕ ವೇಗವಾಗಿ ಬಂದು ಬಿದ್ದ ಮರಕ್ಕೆ ಡಿಕ್ಕಿಯಾಗಿದ್ದರಿಂದ ಲಾರಿ ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮರಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.