ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಗೆರೆ ಗ್ರಾಮದ (Davanagere News) ಬಳಿಯ ತುಂಗಭದ್ರಾ ನದಿಯಲ್ಲಿ ಭಾನುವಾರ ಈಜಾಡಲು ಹೋಗಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವರುಣ್ (18), ಕಿರಣ್ (20), ಪವನ್ (18) ಮೃತ ಯುವಕರು.
ಈಜಾಡುತ್ತಿದ್ದಾಗ ನದಿಯಲ್ಲಿನ ಆಳವಾದ ಗುಂಡಿಯಲ್ಲಿ ಸಿಲುಕಿಕೊಂಡು ಮೂವರು ಕೊನೆಯುಸಿರೆಳೆದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರು, ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯಿಂದ ಮದಿಯಲ್ಲಿ ಬೃಹತ್ ಗುಂಡಿಗಳು ರಚನೆಯಾಗುತ್ತಿವೆ. ಇವು ಈ ರೀತಿಯ ಅವಘಡಗಳಿಗೆ ಕಾರಣವಾಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಡಿಲಿಗೆ 8 ಹಸು, 2 ಕುರಿ ಬಲಿ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಸಿಡಿಲಿಗೆ 8 ಹಸು ಹಾಗೂ 2 ಕುರಿ ಬಲಿಯಾಗಿರುವ ಘಟನೆ ನಡೆದಿದೆ. ಕುಂದುಕೆರೆ ಗ್ರಾಮದ ರೈತ ರಾಜಪ್ಪ ಎಂಬುವವರು ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುವ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಇದರಿಂದ ಎಂಟು ಹಸುಗಳು, ಎರಡು ಕುರಿಗಳು ಮೃತಪಟ್ಟಿವೆ. ಜಾನುವಾರುಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತ ರಾಜಪ್ಪ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಆಕಸ್ಮಿಕ ಬೆಂಕಿಯಿಂದ 3 ಬಣವೆ ಭಸ್ಮ
ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ದಾಟನಾಳ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ 3 ಬಣವೆಗಳು ಭಸ್ಮವಾಗಿವೆ. ದುರ್ಗಪ್ಪ ಚಲುವಾದಿ ಎಂಬುವವರ ಬಣವೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ನಂದಿಸಲು ಸ್ಥಳೀಯರು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ಮೇವಿನ ಬಣವೆ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ | Shivamogga Jail: ಶಿವಮೊಗ್ಗ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಸಾವು; ಕೊಲೆಯೆಂದು ಕುಟುಂಬಸ್ಥರ ಆರೋಪ
ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿ
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಬೀರನ ಕಣವಿ ತಿರುವಿನಲ್ಲಿ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದೃಷ್ಟಶಾತ್ ಯಾವುದೇ ಹಾನಿಯಾಗಿಲ್ಲ. 400ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳಿದ್ದ ಲಾರಿ ಮಂಗಳೂರಿನಿಂದ ರಾಣೆಬೆನ್ನೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.