ಮಡಿಕೇರಿ: ಮಡಿಕೇರಿ ಸಮೀಪದ ಪೊನ್ನಂಪೇಟೆಯಲ್ಲಿ ಬಾಲಕ ಹಾಗೂ ವೃದ್ಧರೊಬ್ಬರನ್ನು ಹುಲಿಯೊಂದು (Tiger attack) ಕೊಂದು ಹಾಕಿರುವುದರಿಂದ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದು, ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಿಸಿದ್ದಾರೆ. ಈ ಆದೇಶ ಹೊರಡಿಸುವವರೆಗೂ ಕಾಡಿನಲ್ಲಿರುವ ವೃದ್ಧ ರಾಜು (೭೨) ಅವರ ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿಯ ನಿವಾಸಿಯಾದ ರಾಜು ಬಾಡಗ ಗ್ರಾಮಕ್ಕೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಪೂಣಚ್ಚ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿಯೇ ಇನ್ನೊಬ್ಬ ಬಾಲಕ ಪಲ್ಲೇರಿಯ ಚೇತನ್(12) ಕೆಲಸ ಮಾಡಿಕೊಂಡಿದ್ದ. ಮೂಲತಃ ಪಂಚವಳ್ಳಿಯ ಬಾಲಕನಾದ ಈತ ಕಾಫಿ ಬೀಜ ಹೆಕ್ಕುತ್ತಿದ್ದಾಗ ಹುಲಿ ದಾಳಿ ಮಾಡಿ ಸಾಯಿಸಿತ್ತು. ಇದಾದ ಒಂದು ದಿನದಲ್ಲಿ ಬಾಲಕನನ್ನು ಕೊಂದ ಜಾಗದ ಸಮೀಪವೇ ರಾಜು ಅವರನ್ನೂ ಹುಲಿ ಬಲಿ ಪಡೆದಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ವ್ಯಾಪ್ತಿಯಲ್ಲಿ ಜನ ಸೇರಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಮುತ್ತಿಗೆ ಹಾಕಿರುವ ಸ್ಥಳೀಯರು, ನಿನ್ನೆ ಬಾಲಕ, ಇಂದು ವೃದ್ಧ ನಾಳೆ ಇನ್ಯಾರೋ ಬಲಿಯಾಗಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಇದಕ್ಕೆ ಯಾರು ಹೊಣೆ? ನಮ್ಮ ಜೀವಗಳಿಗೆ ಬೆಲೆ ಇಲ್ಲವೇ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಬೆಳಿಗ್ಗೆಯಿಂದ ರಾಜು ಅವರ ಶವ ತೆಗೆಯಲು ರೈತ ಸಂಘದ ಮುಖಂಡರು ಬಿಟ್ಟಿರಲಿಲ್ಲ. ಈ ಬಗ್ಗೆ ಸರ್ಕಾರದಿಂದ ಆದೇಶ ಬರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಕ್ಕೆ, ಆದೇಶ ಬರುವವರೆಗೂ ಶವವನ್ನು ಕಾಯುವುದಾಗಿ ಪಟ್ಟುಹಿಡಿದರು. ಬಳಿಕ ಸಮಾಧಾನಪಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.