ಮೈಸೂರು: ರಾಜ್ಯದ ಹಲವೆಡೆ ಚಿರತೆಗಳು ದಾಳಿ ನಡೆಸಿ ಆತಂಕವನ್ನು ಹುಟ್ಟಿಸಿರುವ ಬೆನ್ನಲ್ಲೇ ಮೈಸೂರಿನಲ್ಲಿ ಈಗ ಹುಲಿ ದಾಳಿ (Tiger Attack) ಆತಂಕ ಎದುರಾಗಿದೆ. ನಂಜನಗೂಡು ತಾಲೂಕಿನಲ್ಲಿ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದ್ದು, ತೀವ್ರ ಗಾಯಗಳಾಗಿದ್ದು ಬಿಟ್ಟರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿಯಲ್ಲಿ ಘಟನೆ ನಡೆದಿದ್ದು, ಸ್ವಾಮಿ (52) ಗಾಯಗೊಂಡ ರೈತರಾಗಿದ್ದಾರೆ. ಇವರು ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದರು. ಆಗ ಅಲ್ಲಿ ಏಕಾಏಕಿ ಹುಲಿ ಕಾಣಿಸಿಕೊಂಡಿದ್ದು, ಇವರ ಮೇಲೆ ದಾಳಿ ಮಾಡಿದೆ.
ಈ ವೇಳೆ ಗಾಬರಿಗೊಂಡ ಸ್ವಾಮಿ ಅವರು ಜೋರಾಗಿ ಕಿರುಚಿಕೊಂಡಿದ್ದು, ಪ್ರತಿರೋಧ ಒಡ್ಡಿದ್ದಾರೆ ಎನ್ನಲಾಗಿದೆ. ಕೊನೆಗೂ ಹುಲಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಷ್ಟರಲ್ಲಿ ಅವರ ತಲೆ, ಕೆನ್ನೆ, ಮುಖದ ಭಾಗಕ್ಕೆ ಗಾಯಗಳಾಗಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ಗಾಯಾಳು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಲಿ ದಾಳಿ ಸಂಬಂಧ ಸುತ್ತಮುತ್ತಲ ಗ್ರಾಮಸ್ಥರು ಹೊರಗಡೆ ಹೋಗಲು ಭಯಭೀತರಾಗಿದ್ದಾರೆ.
ಇದನ್ನೂ ಓದಿ | Weather Report | ಮಾಂಡೌಸ್ ಎಫೆಕ್ಟ್; ನಾಳೆ-ನಾಡಿದ್ದು ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ