ಚಾಮರಾಜನಗರ: ವನ್ಯಜೀವಿಗಳ ಉತ್ಪನ್ನಗಳಾದ ಉಗುರು, ಚರ್ಮ ಸೇರಿದಂತೆ ಇನ್ನಿತರ ಭಾಗಗಳ ಬೇಟೆ, ಮಾರಾಟವು ಕಾನೂನುಬಾಹಿರವಾಗಿದ್ದರೂ, ಹುಲಿ ಉಗುರು ಮಾರಾಟ ಮಾಡುತ್ತಿದ್ದ ತಂಡವೊಂದು ಕಾರ್ಯನಿರ್ವಹಣೆ ಮಾಡುತ್ತಿತ್ತು. ಈ ಖದೀಮರನ್ನು ಸಿನಿಮೀಯ ರೀತಿಯಲ್ಲಿ ಟ್ರ್ಯಾಪ್ ಮಾಡಿದ ಪೊಲೀಸರು (CEN Police) ಅವರನ್ನು ಬಂಧಿಸಿದ್ದಲ್ಲದೆ, ೮ ಹುಲಿ ಉಗುರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಾಮರಾಜನಗರ ಸೆನ್ (CEN) ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ಮಾಡಿದ್ದು, ೮ ಹುಲಿ ಉಗುಗಳ ಜತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಾಮರಾಜನಗರ ಕೆಪಿ ಮೊಹಲ್ಲಾದ ಯಾಸಿರ್ ಅರಾಫತ್, ಮುಬಾರಕ್ ಮೊಹಲ್ಲಾದ ಪರ್ಹದ್ ಉರ್ ರೆಹಮಾನ್ ಬಂಧಿತ ಆರೋಪಿಗಳಾಗಿದ್ದಾರೆ.
ವ್ಯಾಪಾರಿಗಳ ಸೋಗಿನಲ್ಲಿ ಬಲೆ
ಈ ಆರೋಪಿಗಳು ಹುಲಿ ಉಗುರು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇವರ ಮೇಲೆ ಸೆನ್ ಪೊಲೀಸರು ವಿಶೇಷ ನಿಗಾ ವಹಿಸಿದ್ದರು. ಇವರ ಹಿಂದೆ ಒಂದು ತಂಡವನ್ನೇ ಬಿಡಲಾಗಿತ್ತು. ಇವರ ಚಲನವಲನಗಳನ್ನು ಪರಿಶೀಲಿಸುತ್ತಿದ್ದ ಪೊಲೀಸರಿಗೆ ಹುಲಿ ಉಗುರುಗಳನ್ನು ಮಾರಾಟ ಮಾಡುವ ವಿಷಯ ತಿಳಿದಿದೆ. ಈ ಹಿನ್ನೆಲೆಯಲ್ಲಿ ಮಾಲು ಸಮೇತ ಆರೋಪಿಗಳನ್ನು ಹಿಡಿಯಲು ನಿರ್ಧರಿಸಿದ ಪೊಲೀಸರು ಮೊದಲು ವ್ಯಾಪಾರಿಗಳಂತೆ ಪರಿಚಯಿಸಿಕೊಂಡಿದ್ದಾರೆ.
ವ್ಯಾಪಾರ ಮಾಡಲು ಬಂದಿರುವುದಾಗಿ ಹೇಳಿಕೊಂಡಿದ್ದರಿಂದ ನಂಬಿದ ಆರೋಪಿಗಳು ಹುಲಿ ಉಗುರುಗಳನ್ನು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಕೊನೆಗೆ ನಿಗದಿತ ಸ್ಥಳಕ್ಕೆ ಆರೋಪಿಗಳು ಮಾಲು ಸಮೇತ ಬಂದಿದ್ದು, ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | ACB raid roundup | ಗಾರ್ಡನರ್ 100 ಕೋಟಿ ಕುಳ, ಹಲವರ ಮನೆಯಲ್ಲಿ ಸಿಕ್ತು ಕೆ.ಜಿ ಕೆ.ಜಿ ಚಿನ್ನ!
ಸರ್ಕಲ್ ಇನ್ಸ್‌ಪೆಕ್ಟರ್ ಮಹದೇವ ಶೆಟ್ಟಿ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಮಾಲು ಸಮೇತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕಾಗಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.