ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯೊಂದರ ಮೃತದೇಹ (Tiger Death) ಪತ್ತೆಯಾಗಿದ್ದು, ಹಲವು ಅನುಮಾನವನ್ನು ಹುಟ್ಟುಹಾಕಿದೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಹುಲಿ ಮೃತದೇಹ ಪತ್ತೆಯಾಗಿದೆ. ಈವರೆಗೂ ಜಿಲ್ಲೆಯಲ್ಲಿ ಎಲ್ಲಿಯೂ ಹುಲಿ ಪತ್ತೆಯಾಗಿರಲಿಲ್ಲ. ಸಿಮೆಂಟ್ ಪೈಪ್ ಒಳಗೆ ಹುಲಿ ಸತ್ತು ಬಿದ್ದಿರುವುದು ಕಂಡುಬಂದಿದೆ. ಇದು ಆತಂಕವನ್ನು ಹುಟ್ಟುಹಾಕಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇರೆ ಕಡೆ ಹುಲಿಯನ್ನು ಸಾಯಿಸಿ ತಂದು ಎಸೆದು ಹೋಗಲಾಗಿದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ, ಯಾರು ತಂದು ಹಾಕಿರಬಹುದು? ಏತಕ್ಕಾಗಿ ಹುಲಿಯನ್ನು ಕೊಂದಿರಬಹುದು? ಇಲ್ಲವೇ ಸಹಜ ಸಾವೇ ಎಂಬ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.