ಚಿಕ್ಕಮಗಳೂರು: ಬಿಗ್ ಬಾಸ್ ಸ್ಪರ್ಧಿ (BBK Season 10) ವರ್ತೂರು ಸಂತೋಷ್ (Varthur Santhosh) ಅವರು ಹುಲಿ ಉಗುರಿನ (Tiger Nail) ಪೆಂಡೆಂಟ್ ಧರಿಸಿದ ಕಾರಣಕ್ಕಾಗಿ ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹುಲಿ ಉಗುರು ಧರಿಸಿದವರೆಲ್ಲ ಬೆವರುತ್ತಿದ್ದಾರೆ. ಅದರಲ್ಲೂ ಹುಲಿಯುಗುರು ಧರಿಸಿ ಶೋ ಮಾಡುತ್ತಿದ್ದ ಸೆಲೆಬ್ರಿಟಿಗಳು, ಸ್ವಾಮೀಜಿಗಳಿಗೆ ಆತಂಕ ಶುರುವಾಗಿದೆ. ಈ ನಡುವೆ, ಚಿಕ್ಕಮಗಳೂರಿನ ಕೊಪ್ಪ ಸಮೀಪದ ಗೌರಿ ಗದ್ದೆ ಆಶ್ರಮದ (Gowrigadde Ashram) ವಿನಯ್ ಗುರೂಜಿ (Vinay Guruji) ಅವರು ಹುಲಿ ಚರ್ಮದ ಮೇಲೆ ಕುಳಿತ ಫೋಟೊ ವೈರಲ್ ಆಗಿತ್ತು. ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ, ಈ ಹುಲಿ ಚರ್ಮ ಆಶ್ರಮದಲ್ಲಿ ಇದ್ದಿದ್ದು ಕೇವಲ ಒಂದು ದಿನ ಮಾತ್ರ ಎಂದು ವಿನಯ್ ಗುರೂಜಿ ಹೇಳಿದ್ದು, ಬಳಿಕ ಅದನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾಗಿ ಹೇಳಿ ದಾಖಲೆಗಳನ್ನು ತೋರಿಸಿದ್ದಾರೆ.
ಅರಣ್ಯ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ಡಿ.ಎಫ್.ಓ. ನಂದೀಶ್ ನೇತೃತ್ವದ ತಂಡ ಗೌರಿಗದ್ದೆಯ ಆಶ್ರಮಕ್ಕೆ ಬಂದು ವಿಚಾರಣೆ ನಡೆಸಿದೆ ಮತ್ತು ಸ್ಥಳ ಮಹಜರು ಪ್ರಕ್ರಿಯೆ ಕೂಡ ಕೈಗೊಂಡಿದೆ.
ವಿನಯ್ ಗುರೂಜಿ ಅವರಿಂದಲೂ ಹುಲಿ ಚರ್ಮದ ವಿಚಾರ ಮಾಹಿತಿ ಪಡೆದಿದ್ದೇವೆ. ಮೂರು ವರ್ಷದ ಹಿಂದಿನ ಹುಲಿ ಚರ್ಮದ ಫೋಟೋ ಎಂದು ಹೇಳಿದ್ದಾರೆ. ಯಾರು ಕೊಟ್ಟಿದ್ದು, ಎಲ್ಲಿಂದ ಬಂತು ಎಲ್ಲಾ ಮಾಹಿತಿ ನೀಡಿದ್ದಾರೆ. ಹುಲಿ ಚರ್ಮದ ಫೋಟೊ ಸಂಬಂಧ ಎಲ್ಲಾ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ವಿನಯ್ ಗುರೂಜಿ ಆಶ್ರಮದಲ್ಲಿ ಡಿ.ಎಫ್.ಓ. ನಂದೀಶ್ ಹೇಳಿದರು.
ಗೌರಿಗದ್ದೆಗೆ ಈ ಚರ್ಮ ಬಂದಿದ್ದು ಎಲ್ಲಿಂದ?
ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿಯ ಬಳಿಕ ಮಾತನಾಡಿದ ವಿನಯ ಗುರೂಜಿ ಅವರು ನಾನು ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿ ಕೆಲವು ದಾಖಲೆಗಳನ್ನು ತೋರಿಸಿದರು.
ಅವರು ಹೇಳುವ ಪ್ರಕಾರ ಮತ್ತು ಅವರು ನೀಡುವ ದಾಖಲೆಗಳ ಪ್ರಕಾರ, ಆ ಹುಲಿ ಚರ್ಮ ಗೌರಿಗದ್ದೆ ಆಶ್ರಮದಲ್ಲಿ ಇದ್ದದ್ದು ಕೇವಲ ಒಂದು ದಿನ ಮಾತ್ರ!
ಈ ಹುಲಿ ಚರ್ಮ ಮೂಲದಲ್ಲಿ ಶಿವಮೊಗ್ಗದ ಉದ್ಯಮಿ ಅಮರೇಂದ್ರ ಕಿರೀಟಿ ಎಂಬವರಿಗೆ ಸೇರಿದ್ದು, ಅವರು 2020ರಲ್ಲಿ ಅದನ್ನು ಗೌರಿ ಗದ್ದೆ ಆಶ್ರಮಕ್ಕೆ ಒಪ್ಪಿಸಿದ್ದರು. ಇದು ಅಮರೇಂದ್ರ ಕಿರೀಟಿ ಅವರಿಗೆ ಸಿಕ್ಕಿದ್ದು ಅವರ ಪಿತ್ರಾರ್ಜಿತ ಆಸ್ತಿಯಾಗಿ. ಅವರ ಮನೆಯಲ್ಲಿ ಇದು ಇತ್ತಂತೆ. ತಮ್ಮ ಬಳಿ ಇದ್ದ ಈ ಹುಲಿ ಚರ್ಮವನ್ನು ಗೌರಿ ಗದ್ದೆ ಆಶ್ರಮಕ್ಕೆ ಒಪ್ಪಿಸುವ ಮೊದಲು ಶಿವಮೊಗ್ಗ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ವಿನಯ ಗುರೂಜಿ ಅಧಿಕಾರಿಗಳಿಗೆ ತೋರಿಸಿದ್ದಾರೆ.
ಎರಡು ವರ್ಷದ ಹಿಂದೆ ಅಮರೇಂದ್ರ ಕಿರೀಟಿ ಅವರು ಆಶ್ರಮಕ್ಕೆ ಈ ಹುಲಿ ಚರ್ಮವನ್ನು ಒಪ್ಪಿಸಿದಾಗ ವಿನಯ್ ಗುರೂಜಿ ಅವರು ಅದರ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿದ್ದರಂತೆ. ಆದರೆ, ತಕ್ಷಣವೇ ಅದು ವೈರಲ್ ಆಗಿತ್ತು. ʻಆಗ ಸೋಷಿಯಲ್ ಮೀಡಿಯಾ ಮತ್ತು ಇತರ ಕಡೆ ಇದಕ್ಕೆ ಸಂಬಂಧಿಸಿ ಭಾರಿ ಟೀಕೆಗಳು ಕೇಳಿಬಂದವು. ಕೆಲವರು ಯಾವ ಪರಿಯಲ್ಲಿ ಸುದ್ದಿ ಮಾಡಿದರೆಂತೆ ನಾನೇ ಹೋಗಿ ಹುಲಿಯನ್ನು ಕೊಂದು ಚರ್ಮವನ್ನು ಸುಲಿದು ತಂದು ಹಾಕಿಕೊಂಡಿದ್ದೇನೆ ಎನ್ನುವ ಮಟ್ಟದಲ್ಲಿ ಪ್ರಚಾರ ಆಗಿತ್ತು. ಆಗ ನಾನು ಅಮರೇಂದ್ರ ಕಿರೀಟಿ ಅವರನ್ನು ಕರೆಸಿಕೊಂಡು ಏನು ಮಾಡುವುದು ಎಂದು ಚರ್ಚಿಸಿದೆ. ಅವರ ಬಳಿಯೇ ಮರಳಿ ಒಯ್ಯುವಂತೆ ಕೇಳಿಕೊಂಡೆ. ಅವರು ಬೇರೆ ದಾರಿ ಹುಡುಕೋಣ ಎಂದರು. ಕೊನೆಗೆ ಇಬ್ಬರೂ ನಿರ್ಧರಿಸಿ ಸರ್ಕಾರದ ವಶಕ್ಕೆ ಒಪ್ಪಿಸಲು ತೀರ್ಮಾನಿಸಿದೆವು. ಹಾಗೆ ಒಪ್ಪಿಸಿದ ಬಗ್ಗೆಯೂ ದಾಖಲೆ ಇದೆʼʼ ಎಂದು ವಿನಯ್ ಗುರೂಜಿ ಹೇಳಿದರು.
ಇದನ್ನೂ ಓದಿ: Tiger pawl : ಧನಂಜಯ ಸ್ವಾಮಿಯ ಹುಲಿ ಉಗುರಿನ ಪೆಂಡೆಂಟ್ ನಿಗೂಢ ನಾಪತ್ತೆ; ಬೆನ್ನು ಹತ್ತಿದ ಅಧಿಕಾರಿಗಳು!
ಒಂದು ದಿನ ಆಶ್ರಮದಲ್ಲಿದ್ದ ಹುಲಿ ಚರ್ಮ ಇಷ್ಟೆಲ್ಲ ರಾದ್ಧಾಂತ ಸೃಷ್ಟಿಸಿದೆ ಎಂದ ವಿನಯ್ ಗುರೂಜಿ ಎಲ್ಲರೂ ವಿಷಯದ ಆಳವನ್ನು ತಿಳಿದು ಮಾಹಿತಿ ಹರಡಬೇಕು ಎಂದು ಮನವಿ ಮಾಡಿದರು.