ಮೈಸೂರು: ಕಳೆದ ಬುಧವಾರವಷ್ಟೇ (ಡಿ. ೭) ಬಂಡಿಪುರದ ಅರಣ್ಯ ವ್ಯಾಪ್ತಿಯಲ್ಲಿ ಸುಂದರಿ ಹೆಸರಿನ ಹುಲಿಯೊಂದು ತನ್ನ ಮರಿಯೊಂದಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದ ಬೆನ್ನಲ್ಲೇ ಈಗ ಇಲ್ಲಿನ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಹೆಣ್ಣು ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಈ ಮೂಲಕ ಹುಲಿ ಸಫಾರಿ (Tiger Safari) ಮಾಡುವವರ ಕಣ್ಣಿಗೆ ಹಬ್ಬವಾಗಿದೆ.
ಕಬಿನಿ ಹಿನ್ನೀರಿನಲ್ಲಿ ಸಫಾರಿ ಹೋಗಿದ್ದ ವೇಳೆ ಬ್ಯಾಕ್‌ವಾಟರ್ ಫಿಮೇಲ್ ಎಂದೇ ಕ್ಯಾತಿಗೊಳಪಟ್ಟಿರುವ ಹೆಣ್ಣು ಹುಲಿ ಪ್ರತ್ಯಕ್ಷವಾಗಿದೆ. ಇದು ತನ್ನ ಮುದ್ದಾದ ಮರಿಗಳೊಂದಿಗೆ ಕಂಡಿದ್ದು, ಪ್ರವಾಸಿಗರು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ, ಈ ವೇಳೆ ಫೋಟೊಗೆ ಆರಾಮವಾಗಿ ಪೋಸ್ ನೀಡಿದ ಹುಲಿ ಮತ್ತು ಮರಿಗಳು ಆರಾಮವಾಗಿ, ಸ್ವಚ್ಛಂದವಾಗಿ ವಿಹರಿಸಿವೆ.
ಚಾಮರಾಜನಗರದಲ್ಲಿ ಕಾಣಿಸಿಕೊಂಡಿದ್ದ ಸುಂದರಿ
ಇದೇ ಡಿಸೆಂಬರ್ ೭ರಂದು ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಸುಂದರಿ ಹುಲಿ ಕಾಣಿಸಿಕೊಂಡಿತ್ತು. ಇದು ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಒಂದು ವರ್ಷದಿಂದ ಕಾಣಿಸಿಕೊಂಡಿರಲಿಲ್ಲ. ಕಾಣಿಸಿಕೊಂಡಾಗಲೆಲ್ಲ ಸುಂದರ ಪೋಸ್ ಕೊಡುವ ಮೂಲಕ ಗಮನ ಸೆಳೆಯುತ್ತಿತ್ತು. ಮದುಮಲೈ ಕಾಡಿನತ್ತ ವಲಸೆ ಹೋಗಿದ್ದ ಸುಂದರಿ ಬಂಡಿಪುರದಲ್ಲಿ ಮತ್ತೆ ಪ್ರತ್ಯಕ್ಷಳಾಗಿದ್ದಳು. ಮರಿಯೊಂದಿಗೆ ಸುಂದರಿ ಹೆಜ್ಜೆ ಹಾಕುತ್ತಿರುವುದನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದರು. ಬಂಡೀಪುರದಲ್ಲಿ ಪ್ರವಾಸಿಗರ ಫೇವರಿಟ್ ಆಗಿದ್ದ ಪ್ರಿನ್ಸ್ ಹುಲಿಯ ಸಾವಿನ ಬಳಿಕ ಈಗ ಸುಂದರಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ಇದನ್ನೂ ಓದಿ | Molester attacked | ಹುಡುಗಿಯರನ್ನು ಚುಡಾಯಿಸುತ್ತಿದ್ದ ಪುಂಡನಿಗೆ ಸಾರ್ವಜನಿಕರಿಂದ ಚಪ್ಪಲಿ ಸೇವೆ