ಮಡಿಕೇರಿ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪ ಬ್ರಹ್ಮಗಿರಿಯಲ್ಲಿ ಶನಿವಾರ (ಫೆ.೨೫) ಮಧ್ಯಾಹ್ನ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಕಾನೂರು ಸುತ್ತಮುತ್ತಲಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈಗ ಇದರ ವಿಡಿಯೊ (Video Viral) ವೈರಲ್ ಆಗಿದೆ.
ಹಗಲಿನ ಸಂದರ್ಭದಲ್ಲಿಯೇ ಹುಲಿಯೊಂದು ರಸ್ತೆಯಲ್ಲಿ ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇದರ ವಿಡಿಯೊ ಮತ್ತು ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊನ್ನಂಪೇಟೆ ತಾಲೂಕಿನ ಕಿರಗೂರು ಸಮೀಪ ಕಳೆದ ಮೂರು ದಿನಗಳ ಹಿಂದೆ ಹುಲಿಯೊಂದು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹುಲಿಯ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈಗ ಕಾನೂರು ಸಮೀಪ ಹುಲಿ ಕಂಡಿರುವುದು ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಇದನ್ನೂ ಓದಿ: Barisu Kannada Dindimava: ಕರ್ನಾಟಕದ ಹೊರತಾಗಿ ಭಾರತದ ವೈವಿಧ್ಯತೆ ಅಪೂರ್ಣ, ನರೇಂದ್ರ ಮೋದಿ ಶ್ಲಾಘನೆ
ಹುಲಿಯೊಂದು ಈಗ ಬ್ರಹ್ಮಗಿರಿ ಪ್ರದೇಶದಲ್ಲಿ ಏಕಾಂಗಿಯಾಗಿ ಓಡಾಡುತ್ತಿದೆ. ಇದು ಈ ಭಾಗದ ಜನರಿಗೆ ಭಯ ಆವರಿಸಿದ್ದು, ಕಾಫಿ, ಕರಿಮೆಣಸು ಕೊಯ್ಲಿನ ಕೆಲಸ ಕೂಡ ನಡೆಯುತ್ತಿದ್ದು, ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೆಲಸ ಮಾಡಲು, ಸಾರ್ವಜನಿಕರು ಸಂಚರಿಸಲು ಸಹ ಭಯದ ವಾತಾವರಣ ನಿರ್ಮಾಣವಾಗಿದೆ.