ಕಾರವಾರ: ಜಿಲ್ಲೆಯ ಜೋಯಿಡಾ ಭಾಗದಲ್ಲಿ ಭಾರಿ ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಬೋನಿಗೆ (Tiger trapped) ಬಿದ್ದಿದೆ. ಕಳೆದ ೧೦ ದಿನದಲ್ಲಿ ಐದು ಜಾನುವಾರುಗಳನ್ನು ಹೊತ್ತೊಯ್ದಿದ್ದ ಈ ಹುಲಿ ಭಯ ಉಂಟು ಮಾಡಿತ್ತು. ಅದನ್ನು ಹಿಡಿಯಲು ಅರಣ್ಯ ಇಲಾಖೆ ಬೋನುಗಳನ್ನು ಇಟ್ಟಿದ್ದು, ಭಾನುವಾರ ರಾತ್ರಿ ಜೋಯಿಡಾದ ಗುಂದ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇಟ್ಟ ಬೋನಿನಲ್ಲಿ ಸಿಕ್ಕಿಬಿದ್ದಿದೆ.
ಕಳೆದೊಂದು ವಾರದಿಂದ ಪಣಸೋಲಿ, ಗುಂದ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದ ಹುಲಿ ಹತ್ತು ದಿನಗಳ ಅವಧಿಯಲ್ಲಿ 5 ಜಾನುವಾರು ಬೇಟೆಯಾಡಿತ್ತು. ಹೇಗಾದರೂ ಮಾಡಿ ಹುಲಿ ಸೆರೆಹಿಡಿಯುವಂತೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಗೆ ಸ್ಥಳೀಯರು ಮನವಿ ಮಾಡಿದ್ದರು.
ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಹುಲಿ ಸೆರೆಹಿಡಿಯಲು ಬೋನ್ ಇರಿಸಿದ್ದರು. ಭಾನುವಾರ ರಾತ್ರಿ ಹುಲಿ ಬೋನಿಗೆ ಬಿದ್ದಿದೆ. ಈ ರೀತಿ ಹುಲಿ ಬಿದ್ದಿದೆ ಎಂದು ತಿಳಿಯುತ್ತಲೇ ಊರಿನ ಎಲ್ಲರೂ ಅಲ್ಲಿಗೆ ಆಗಮಿಸಿ ನಿರಾಳತೆಯ ನಿಟ್ಟುಸಿರುಬಿಟ್ಟರು.
ಹುಲಿ ಸ್ವಲ್ಪ ಅನಾರೋಗ್ಯಕ್ಕೆ ತುತ್ತಾಗಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಬಳಿಕ ಹಂಪಿ ಮೃಗಾಲಯಕ್ಕೆ ಹುಲಿ ಕಳುಹಿಸಲು ಸಿದ್ಧತೆ ನಡೆಯಲಾಗಿದೆ. ಡಿಸಿಎಫ್ ಮಾರಿಯಾ ಕ್ರಿಸ್ತರಾಜು ನೇತೃತ್ವದಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಪಣಸೋಲಿ ಆರ್‌ಎಫ್ಓ ರಶ್ಮಿ ದೇಸಾಯಿ, ಗುಂದ ಆರ್‌ಎಫ್ಓ ರವಿಕಿರಣ ಸಂಪಗಾವಿ, ಸಿಬ್ಬಂದಿ ಭಾಗಿಯಾಗಿದ್ದರು.
ಹುಲಿಯನ್ನು ಬೋನು ಸಹಿತ ವಾಹನವೊಂದರಲ್ಲಿ ಸಾಗಿಸುವ ಹೊತ್ತಿಗೆ ಬೆಳಗ್ಗೆ ನಾಲ್ಕು ಗಂಟೆ ದಾಟಿತ್ತು. ಈ ವೇಳೆಗೂ ಜನ ನೆರೆದಿದ್ದು, ಕೊನೆಯ ಹಂತದಲ್ಲಿ ಎಲ್ಲರೂ ಸೇರಿಕೊಂಡು ಗ್ರೂಪ್ ಪೋಟೊ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ | Tiger Attack | ಮೈಸೂರಿನಲ್ಲಿ ರೈತನ ಮೇಲೆ ಹುಲಿ ದಾಳಿ, ತೀವ್ರ ಗಾಯ; ಹೆಚ್ಚಿದ ಆತಂಕ