ಬೆಂಗಳೂರು: ಕರ್ನಾಟಕದಲ್ಲಿ ಹುಲಿಗಳ (Tigers in Karnataka) ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2018ಕ್ಕೆ ಹೋಲಿಸಿದರೆ 2020ರಲ್ಲಿ ಶೇ.30ರಷ್ಟು ಏರಿಕೆ ಕಂಡುಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ಓದಿ: Tiger attack : ಯುವಕನನ್ನು ಬಲಿ ಪಡೆದ ಸ್ಥಳದಲ್ಲೇ ಮತ್ತೆ ಹುಲಿ ಪ್ರತ್ಯಕ್ಷ; ಗುಂಡಿಟ್ಟು ಸಾಯಿಸಿ ಎಂದು ಸಾರ್ವಜನಿಕರ ಆಗ್ರಹ
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ರಾಷ್ಟ್ರೀಯವಾಗಿ ಹುಲಿಗಳ ಸಮೀಕ್ಷೆ ನಡೆಯುತ್ತದೆ. ಈ ಹಿಂದೆ 2018ರಲ್ಲಿ ಸಮೀಕ್ಷೆ ನಡೆದಿದ್ದು ಅದರಲ್ಲಿ ಕರ್ನಾಟಕದಲ್ಲಿ 524 ಹುಲಿಗಳು ಇರುವುದಾಗಿ ವರದಿಯಾಗಿತ್ತು. ಇದಲ್ಲದೆಯೇ ರಾಜ್ಯದ ಅರಣ್ಯ ಇಲಾಖೆಯು ಪ್ರತಿ ವರ್ಷ ಹುಲಿಗಳ ವಲಸೆ, ಸೇರಿ ಹಲವು ವಿಚಾರಗಳಲ್ಲಿ ಮೇಲ್ವಿಚಾರಣೆ ಮಾಡುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸುತ್ತದೆ. ರಾಜ್ಯದ ಅರಣ್ಯ ಇಲಾಖೆ 2020ರಲ್ಲಿ ಮಾಡಿರುವ ಸಮೀಕ್ಷೆಯಲ್ಲಿ 650-700 ಹುಲಿಗಳು ಕಾಣಸಿಕ್ಕಿರುವುದಾಗಿ ಹೇಳಲಾಗಿದೆ.
2018ರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದ ಸಮೀಕ್ಷಾ ವರದಿಯ ಪ್ರಕಾರ ಕರ್ನಾಟಕದಲ್ಲಿರುವ ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ, ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ 350 ಹಾಗೂ ಬೇರೆ ಸುರಕ್ಷಿತ ಪ್ರದೇಶಗಳಲ್ಲಿ 174 ಹುಲಿಗಳಿವೆ ಎಂದು ಹೇಳಲಾಗಿತ್ತು. ಆದರೆ 2020ರ ಸಮೀಕ್ಷೆಯ ಪ್ರಕಾರ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿಯೇ 403 ಹುಲಿಗಳಿವೆ. ಹಾಗೆಯೇ ಬೇರೆ ಪ್ರದೇಶಗಳಲ್ಲಿರುವ ಹುಲಿಗಳ ಸಂಖ್ಯೆಯೂ ಏರಿಕೆಯಾಗಿದೆ.
“ಹುಲಿಗಳನ್ನು ಆಗಾಗ ಮೇಲ್ವಿಚಾರಣೆ ಮಾಡುವ ಅವಶ್ಯಕತೆ ಇರುತ್ತದೆ. ಹಾಗಾಗಿ ನಾವು ಪ್ರತಿ ವರ್ಷ ಸಮೀಕ್ಷೆ ನಡೆಸುತ್ತೇವೆ. ಅದರಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿರುವುದು ಕಂಡುಬಂದಿದೆ. ಬಂಡೀಪುರ, ಬಿಳಿಗಿರಿರಂಗನಬೆಟ್ಟ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿ ಏರಿರುವುದು ಕಂಡುಬಂದಿದೆ” ಎಂದು ಮಾಹಿತಿ ನೀಡಿದ್ದಾರೆ ಅರಣ್ಯ ಅಧಿಕಾರಿ ಆಗಿರುವ ಕುಮಾರ್ ಪುಷ್ಕರ್.
2020ರ ವರದಿಯ ನಂತರ ಅರಣ್ಯ ಇಲಾಖೆಯು 2021, 2022ರ ವರದಿಯನ್ನೂ ಸಿದ್ಧಪಡಿಸಿದ್ದು, ಅದನ್ನು ಶೀಘ್ರವೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗುವುದು. ಪ್ರಾಧಿಕಾರದ 2022ನೇ ಸಾಲಿನ ವರದಿ ಸದ್ಯದಲ್ಲೇ ಹೊರಬೀಳಲಿದೆ. 2018ರ ವರದಿಯಲ್ಲಿ 526 ಹುಲಿಗಳು ಇರುವ ಮಧ್ಯ ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯವಾಗಿ ಹೊರಹೊಮ್ಮಿತ್ತು. ಒಂದು ವೇಳೆ ಈ ಬಾರಿ ಕರ್ನಾಟಕದಲ್ಲಿ ಕಂಡಂತಹ ಬೆಳವಣಿಗೆ ಬೇರೆ ರಾಜ್ಯಗಳಲ್ಲಿ ಕಾಣದೇ ಹೋದರೆ ಕರ್ನಾಟಕ ಈ ಬಾರಿ ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗುವ ಸಾಧ್ಯತೆಯಿದೆ.