ಬೆಂಗಳೂರು: ಧಾರವಾಡ-ಬೆಂಗಳೂರು (Dharwad- Bengaluru) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express) ರೈಲು ಸಂಚಾರ ಮಂಗಳವಾರ ಆರಂಭಗೊಂಡಿದೆ. ಚೆನ್ನೈ- ಮೈಸೂರು ಬಳಿಕ ರಾಜ್ಯಕ್ಕೆ ಒಲಿದಿರುವ ಎರಡನೇ ವಂದೇ ಭಾರತ್ ರೈಲು ಇದಾಗಿದ್ದು, ಇದರ ಮೂಲಕ ಧಾರವಾಡದಿಂದ ಬೆಂಗಳೂರಿಗೆ ಕೇವಲ 7 ಗಂಟೆಯಲ್ಲಿ ಪ್ರಯಾಣಿಸಬಹುದು. ಸಾಮಾನ್ಯ ರೈಲಿಗೆ 9 ಗಂಟೆ ಬೇಕು.
ಎಂಟು ಬೋಗಿಗಳನ್ನು ಹೊಂದಿರುವ ಈ ರೈಲಿನ ಸಂಚಾರ ವೇಳಾಪಟ್ಟಿ, ನಿಲ್ಲುವ ನಿಲ್ದಾಣಗಳು ಮತ್ತು ಪ್ರಯಾಣ ದರ ಎಷ್ಟು ಎನ್ನುವ ಪೂರ್ಣ ವಿವರ ಇಲ್ಲಿದೆ.
ರೈಲಿನ ಪ್ರಯಾಣ ವೇಳಾಪಟ್ಟಿ ಹೀಗಿದೆ
- ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡಲಿದೆ. ಧಾರವಾಡಕ್ಕೆ ಮಧ್ಯಾಹ್ನ 12.45ಕ್ಕೆ ತಲುಪಲಿದೆ.
- ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿಗೆ ಹೊರಡಲಿದೆ. ರಾತ್ರಿ 8.10ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪಲಿದೆ.
- ಮಂಗಳವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್, ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸಲಿದೆ.
- ವಂದೇ ಭಾರತ್ ರೈಲು ಬೆಂಗಳೂರು-ಧಾರವಾಡ ನಡುವೆ 7 ಗಂಟೆಗಳಲ್ಲಿ ಸಂಚರಿಸಲಿದೆ. ಇತರ ರೈಲುಗಳಿಗೆ 9-10 ಗಂಟೆ ಬೇಕಾಗುತ್ತದೆ.
ಈ ರೈಲು ಎಲ್ಲೆಲ್ಲಿ ನಿಲ್ಲಲಿದೆ?
ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಶ್ವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಸ್ವಲ್ಪ ಹೊತ್ತು ನಿಲ್ಲಲಿದೆ.
ಟಿಕೆಟ್ ದರ ಎಷ್ಟು?
ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನೀವು ಸಂಚರಿಸುವುದಾದರೆ ಅದರ ಪ್ರಯಾಣ ದರವನ್ನು ತಿಳಿದುಕೊಳ್ಳುವುದು ಮುಖ್ಯ.
- ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಧಾರವಾಡಕ್ಕೆ: ಎಕ್ಸಿಕ್ಯೂಟಿವ್ ಎಸಿ ಚೆಯರ್ ಕಾರ್‌ನಲ್ಲಿ 1165 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 2010 ರೂ.
- ಬೆಂಗಳೂರಿನ ಸಂಗೊಳಳಿ ರಾಯಣ್ಣ ರೈಲು ನಿಲ್ದಾಣದಿಂದ ಹುಬ್ಬಳ್ಳಿಗೆ: ಎಕ್ಸಿಕ್ಯೂಟಿವ್ ಎಸಿ ಚೆಯರ್ ಕಾರ್‌ನಲ್ಲಿ 1135 ರೂ. ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ 2180 ರೂ.
- ಯಶವಂಪುರದಿಂದ ಧಾರವಾಡಕ್ಕೆ: ಎಕ್ಸಿಕ್ಯೂಟಿವ್ ಎಸಿ ಚೆಯರ್ ಕಾರ್‌ನಲ್ಲಿ 1165 ರೂ. ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ 2245 ರೂ.
- ಯಶವಂತಪುರದಿಂದ ಹುಬ್ಬಳ್ಳಿಗೆ: ಎಕ್ಸಿಕ್ಯೂಟಿವ್ ಎಸಿ ಚೆಯರ್ ಕಾರ್‌ನಲ್ಲಿ 1135 ರೂ. ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ 2180 ರೂ.
ಕಡಿಮೆ ಅಂತರದ ಪ್ರಯಾಣ ಮಾಡುವಾಗ ಇರಲಿ ಎಚ್ಚರ!
ಗಮನಿಸಿ: ಬೆಂಗಳೂರು ರೈಲು ನಿಲ್ದಾಣಕ್ಕೆ ಹೋದಾಗ ಯಶವಂತಪುರಕ್ಕೆ ರೈಲಿಗೆ ಅಂತಾನೋ, ಹುಬ್ಬಳ್ಳಿಯಿಂದ ಧಾರವಾಡಕ್ಕೆ ರೈಲು ಇದೆ ಅಂತ ಅರ್ಜೆಂಟಿಗೆ ಹತ್ತಿ ಬಿಡಬೇಡಿ.. ಈ ನಿಲ್ದಾಣಗಳ ನಡುವೆ ಕಡಿಮೆ ಅಂತರವಿದ್ದರೂ ಪ್ರಯಾಣ ದರ ಮಾತ್ರ ಭರ್ಜರಿಯಾಗಿಯೇ ಇದೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಯಶವಂತಪುರಕ್ಕೆ ಎಸಿ ಚೆಯರ್ ಕಾರಿನಲ್ಲಿ 410 ರೂ. ಇದ್ದರೆ, ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ 545 ರೂ. ಇದೆ. ಇದೇ ರೀತಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಎಸಿ ಚೆಯರ್ ಕಾರಿನಲ್ಲಿ 410 ರೂ., ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ 545 ರೂ. ಪ್ರಯಾಣ ದರವಿದೆ.
ವಿಶೇಷವೆಂದರೆ ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುವ ರೈಲಿನ ದರ ಪಟ್ಟಿ ಮತ್ತು ಧಾರವಾಡದಿಂದ ಬೆಂಗಳೂರಿಗೆ ಬರುವ ರೈಲಿನ ದರ ಪಟ್ಟಿಯಲ್ಲಿ ವ್ಯತ್ಯಾಸವಿದೆ.
ಎಲ್ಲಿಂದ ಎಲ್ಲಿಗೆ ಎಷ್ಟೆಷ್ಟು ಪ್ರಯಾಣ ದರ? ಇಲ್ಲಿದೆ ಪೂರ್ಣ ಪಟ್ಟಿ
ಇದನ್ನೂ ಓದಿ : Vande Bharat Express: ಧಾರವಾಡ- ಬೆಂಗಳೂರು ವಂದೇ ಭಾರತ್ ಸಂಚಾರ ಶುರು; ಆರೇ ಗಂಟೇಲಿ ರಾಜಧಾನಿಗೆ!
ವಂದೇ ಭಾರತ್ ರೈಲಿನ ವಿಶೇಷತೆ ಏನು?
- ವಂದೇ ಭಾರತ್ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳಿರುತ್ತವೆ.
- ಮನರಂಜನೆಯ ಉದ್ದೇಶಕ್ಕೆ ಹಾಟ್ ಸ್ಪಾಟ್ ವೈ-ಫೈ ಸೌಲಭ್ಯ ಸಿಗುತ್ತದೆ.
- ಸೀಟುಗಳು ಸುಖಾಸೀನ ಕಲ್ಪಿಸುತ್ತವೆ. ಎಲ್ಲ ಶೌಚಾಲಯಗಳು ಬಯೊ-ವಾಕ್ಯೂಮ್ ಮಾದರಿಯದ್ದಾಗಿದೆ.
- ಅಡುಗೆ ಕೋಣೆಯೂ ಇದ್ದು, ಬಿಸಿ ಊಟ, ಬಿಸಿ ಮತ್ತು ತಣ್ಣೀರು ವಿತರಣೆಯ ಸೌಲಭ್ಯವಿದೆ.
- ಪ್ರತಿ ಬೋಗಿಯಲ್ಲೂ ವೈ-ಫೈ ಕಂಟೆಂಟ್ ಸಿಗುತ್ತದೆ.
- ಪ್ರತಿ ಕೋಚ್‌ನಲ್ಲೂ 32 ಇಂಚಿನ ಸ್ಕ್ರೀನ್ ಇರುತ್ತದೆ.
- ವೀಕ್ಷಕರಿಗೆ ನ್ಯೂಸ್ ಹಾಗೂ ಇನ್ಫೋಟೈನ್‌ಮೆಂಟ್ ದೊರೆಯುತ್ತದೆ.
- ವಿಕಲಚೇತನರಿಗೆ ಸೀಟ್ ಹ್ಯಾಂಡಲ್, ಬ್ರೈಲ್ ಲಿಪಿಯಲ್ಲಿ ಸೀಟಿನ ಸಂಖ್ಯೆ ಇರುತ್ತದೆ
- 180 ಡಿಗ್ರಿ ಸುತ್ತುವ ಆಸನಗಳು ಎಕ್ಸಿಕ್ಯುಟಿವ್ ಬೋಗಿಗಳಲ್ಲಿ ಲಭ್ಯ.
- ವಂದೇ ಭಾರತ್ ಎಕ್ಸ್‌ಪ್ರೆಸ್ 392 ಟನ್ ಭಾರವಿದೆ. 16 ಬೋಗಿಗಳನ್ನು ಒಳಗೊಂಡಿದೆ.
- ಒಟ್ಟು ಸೀಟುಗಳ ಸಾಮರ್ಥ್ಯ 1128 ಆಗಿದೆ.