Site icon Vistara News

ಟಿಪ್ಪು ವಿವಾದ : ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಾಕಿದ್ದ ಟಿಪ್ಪು ಸುಲ್ತಾನ್ ಫೋಟೊ ತೆರವು

ಶಿವಮೊಗ್ಗ ಮಹಾನಗರ ಪಾಲಿಕೆ ಎದುರು ಬಜರಂಗ ದಳ ಪ್ರತಿಭಟನೆ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಕಚೇರಿಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್‌ ಭಾವಚಿತ್ರವನ್ನು (ಟಿಪ್ಪು ವಿವಾದ) ತೆರವುಗೊಳಿಸಲಾಗಿದೆ.

ಪಾಲಿಕೆಯ ೨೫ನೇ ವಾರ್ಡ್‌ ಕಾರ್ಪೊರೇಟರ್‌ ಆಗಿರುವ ಮೆಹಕ್‌ ಷರೀಫ್‌ ಅವರು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಅವರ ಪದಗ್ರಹಣದ ವೇಳೆ ಪತಿ ಎಂ.ಡಿ. ಷರೀಫ್‌ ಮತ್ತು ಇತರರ ಟಿಪ್ಪು ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು ಮತ್ತು ಅದನ್ನು ಕಚೇರಿಯಲ್ಲಿ ಅಳವಡಿಸುವಂತೆ ಸೂಚಿಸಿದ್ದರು. ಹೀಗಾಗಿ ಮೆಹಕ್‌ ಅವರು ಗಾಂಧೀಜಿ, ಅಂಬೇಡ್ಕರ್‌, ಭಾರತಮಾತೆಯ ಚಿತ್ರಗಳ ಸಾಲಿನಿಂದ ಸ್ವಲ್ಪ ದೂರ, ಸ್ವಲ್ಪ ಎತ್ತರದಲ್ಲಿ ಭಾವಚಿತ್ರವನ್ನು ಹಾಕಿದ್ದರು.

ಈ ಬಗ್ಗೆ ವಿಸ್ತಾರ ನ್ಯೂಸ್‌ ವರದಿ ಮಾಡಿದ ಬೆನ್ನಿಗೇ ಸಾಕಷ್ಟು ವಾದ-ವಿವಾದಗಳು ಕೇಳಿಬಂತು. ಸಂಜೆಯೇ ಮೆಹಕ್‌ ಅವರು ಕಚೇರಿಯಿಂದ ಫೋಟೊವನ್ನು ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ ೧೨.೩೦ರ ಹೊತ್ತಿಗೆ ಪದಗ್ರಹಣದ ವೇಳೆ ನೀಡಲಾಗಿದ್ದ ಭಾವಚಿತ್ರವನ್ನು ಅಲ್ಲಿ ಇಡಲಾಗಿತ್ತು, ಸಂಜೆ ೫.೩೦ರ ಹೊತ್ತಿಗೆ ಅದನ್ನು ತೆರವುಗೊಳಿಸಲಾಗಿದೆ.

ಬಜರಂಗ ದಳ ಪ್ರತಿಭಟನೆ
ಈ ನಡುವೆ, ಟಿಪ್ಪು ಸುಲ್ತಾನ್‌ ಫೋಟೊ ಹಾಕಿದ್ದು ಹಿಂದು ಸಂಘಟನೆಗಳನ್ನು ಕೆರಳಿಸಿತ್ತು. ಮೆಹಕ್‌ ಅವರ ಪತಿಯಾಗಿರುವ ಎಂ.ಡಿ. ಷರೀಫ್‌ ಖಾಸಗಿಯಾಗಿರುವ ಶಿವಪ್ಪ ನಾಯಕ್‌ ಮಾಲ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ವಿ.ಡಿ. ಸಾವರ್ಕರ್‌ ಫೋಟೋ ಹಾಕಿದ್ದನ್ನು ಪ್ರಶ್ನೆ ಮಾಡಿ ಭಾರಿ ಗಲಾಟೆ ಮಾಡಿದ್ದರು. ಹಾಗಿರುವಾಗ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಫೋಟೊ ಹಾಕಿದ್ದು ಹೇಗೆ ಎಂಬ ಪ್ರಶ್ನೆಯೊಂದಿಗೆ ಸಿಡಿದೆದ್ದರು. ಮೊದಲು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಟಿಪ್ಪು ಭಾವಚಿತ್ರ ಅಳವಡಿಕೆಯನ್ನು ಖಂಡಿಸಿದ ಬಜರಂಗ ದಳ ಕಾರ್ಯಕರ್ತರು, ಬಳಿಕ ನೇರವಾಗಿ ಕಚೇರಿಗೆ ನುಗ್ಗಿದರು.

ಜಿಹಾದಿಗಳು ಕೋಮು ಸಂಘರ್ಷಕ್ಕೆ ಕಾರಣರಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇಂಥವರನ್ನು ಜೈಲಿಗೆ ಅಟ್ಟಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹಿಂದೂ ವಿರೋಧಿ, ಮತಾಂಧ, ಕನ್ನಡ ವಿರೋಧಿಯಾಗಿರುವ ಟಿಪ್ಪುವಿನ ಭಾವಚಿತ್ರ ಅಳವಡಿಕೆ ಮೂಲಕ ಕನ್ನಡಿಗರು, ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಲಾಯಿತು. ಜತೆಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಗರದಲ್ಲಿ ಅಶಾಂತಿಗೆ ಕಾರಣವಾಗಿದ್ದ ಎಂ.ಡಿ. ಷರೀಫ್‌ ಈಗಲೂ ಅಂತಹುದೇ ಕೃತ್ಯಕ್ಕೆ ಮುಂದಾಗಿದ್ದು, ಆತನನ್ನು ಗೂಂಡಾ ಕಾಯಿದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಬಜರಂಗ ಜಿಲ್ಲಾಧ್ಯಕ್ಷ ರಾಜೇಶ್ ಗೌಡ ಅವರ ನೇತೃತ್ವದಲ್ಲಿ ಪಾಲಿಕೆಗೆ ಮನವಿ ಸಲ್ಲಿಸಲಾಯಿತು. ಅಷ್ಟು ಹೊತ್ತಿಗೆ ಪಾಲಿಕೆಯ ಸೂಚನೆಯ ಮೇರೆಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಕಚೇರಿಯಿಂದ ಫೋಟೊವನ್ನು ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಬಜರಂಗ ದಳ ಕಾರ್ಯಕರ್ತರು ಮೆಹಕ್‌ ಅವರ ಕಚೇರಿವರೆಗೂ ಹೋಗಿ ಫೋಟೊ ತೆಗೆದಿರುವುದನ್ನು ಖಾತ್ರಿಪಡಿಸಿದರು.

ಇದನ್ನೂ ಓದಿ | ಟಿಪ್ಪು ವಿವಾದ : ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಫೋಟೊ; ಪತ್ನಿಯ ಹೆಸರಲ್ಲಿ ಸಾವರ್ಕರ್‌ ಗಲಾಟೆ ಆರೋಪಿ ಷರೀಫ್‌ ಕೃತ್ಯ

Exit mobile version