Site icon Vistara News

ಟಿಪ್ಪು ವಿವಾದ | ಟಿಪ್ಪು ನಿಜ ಕನಸುಗಳು ಪುಸ್ತಕದ ಮಾರಾಟಕ್ಕೆ ತಡೆಯಾಜ್ಞೆ ವಿಧಿಸಿದ ಪ್ರಕರಣದ ವಿಚಾರಣೆ ಇಂದು, ತೆರವಾಗುತ್ತಾ?

court temperorily stays sales of tipu nija kansugalu book

ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ರಚಿಸಿರುವ ʻಟಿಪ್ಪು ನಿಜ ಕನಸುಗಳುʼ ಪುಸ್ತಕದ ಮಾರಾಟ ಮತ್ತು ಹಂಚಿಕೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ವಿಧಿಸಿದ್ದ ತಾತ್ಕಾಲಿಕ ತಡೆಯಾಜ್ಞೆಯ ಮುಂದುವರಿದ ವಿಚಾರಣೆ ಡಿಸೆಂಬರ್‌ ೫ (ಸೋಮವಾರ) ನಡೆಯಲಿದೆ.

ಬೆಂಗಳೂರು ಜಿಲ್ಲಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ರಫಿವುಲ್ಲಾ ಬಿ.ಎಸ್‌ ಅವರು ಸಲ್ಲಿಸಿದ್ದ ದಾವೆಯನ್ನು ಶನಿವಾರ ವಿಚಾರಣೆ ನಡೆಸಿದ 14ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೆ.ಆರ್‌ ಮೆಂಡೋನ್ಸಾ ಅವರು ಮಧ್ಯಂತರ ಆದೇಶ ವಿಸ್ತರಿಸಿ, ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದ್ದರು.

“ಮುಂದಿನ ವಿಚಾರಣೆಯ ದಿನಾಂಕದಂದು ತಪ್ಪದೇ ವಾದ ಮಂಡನೆ ಮಾಡುವಂತೆ ನಿರ್ದೇಶಿಸಿ, ಮಧ್ಯಂತರ ಆದೇಶ ವಿಸ್ತರಣೆ ಮಾಡುವುದರಿಂದ ಪ್ರತಿವಾದಿಗಳಿಗೆ ಯಾವುದೇ ತೆರನಾದ ಪೂರ್ವಾಗ್ರಹ ಉಂಟಾಗುವುದಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಹೀಗಾಗಿ, ಫಿರ್ಯಾದಿ ಸಲ್ಲಿಸಿರುವ ಮೂರನೇ ಮಧ್ಯಪ್ರವೇಶ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. 21.11.2022ರಂದು ಮಾಡಲಾಗಿರುವ ಮಧ್ಯಂತರ ಆದೇಶವು ಮುಂದಿನ ವಿಚಾರಣೆಯವರೆಗೆ ಅಸ್ತಿತ್ವದಲ್ಲಿರಲಿದೆ. ಫಿರ್ಯಾದಿಯು ಯಾವುದೇ ಕಾರಣಕ್ಕೂ ತಪ್ಪದೇ ಮುಂದಿನ ವಿಚಾರಣೆಯಲ್ಲಿ ಒಂದನೇ ಮಧ್ಯಪ್ರವೇಶ ಅರ್ಜಿಗೆ ಸಂಬಂಧಿಸಿದಂತೆ ವಾದಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿತ್ತು.

“ಫಿರ್ಯಾದಿಯ ವಾದ ಆಲಿಸಿದ ಬಳಿಕ ಪ್ರತಿವಾದಿಗಳ ಪರ ವಕೀಲರ ಆಕ್ಷೇಪಣೆಯನ್ನು ನಿರ್ಧರಿಸಲಾಗುವುದು. ಇಲ್ಲಿಯವರೆಗೆ ಫಿರ್ಯಾದಿಗೆ ಮಧ್ಯಂತರ ಆದೇಶದ ಲಾಭ ದೊರೆತಿದೆ. ನ್ಯಾಯಾಲಯದ ಮುಂದಿನ ಕೆಲಸದ ದಿನದಂದು ವಾದ ಮಂಡಿಸುವುದಾಗಿ ಫಿರ್ಯಾದಿ ಹೇಳಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿತ್ತು.

ಫಿರ್ಯಾದಿ ಪರ ವಕೀಲರು ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಸೆಕ್ಷನ್‌ 151ರ ಅಡಿ ಮಧ್ಯಂತರ ಆದೇಶ ವಿಸ್ತರಿಸುವಂತೆ ಕೋರಿ ಮೂರನೇ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿವಾದಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

“ಫಿರ್ಯಾದಿ ಹೂಡಿರುವ ದಾವೆಯೇ ಮಾನ್ಯವಾಗುವುದಿಲ್ಲ. ಮುಖ್ಯ ದಾವೆ ಮತ್ತು ಮಧ್ಯಂತರ ಅರ್ಜಿಯಲ್ಲಿನ ಕೋರಿಕೆಗಳು ನಿರರ್ಥಕವಾಗಿವೆ. ಅಲ್ಲದೇ, ನಿರ್ದಿಷ್ಟ ಕಾಲಾವಧಿಯಲ್ಲಿ ನ್ಯಾಯಾಲಯದ ನಿರ್ದೇಶನ ಪಾಲಿಸದಿರುವುದರಿಂದ ಮಧ್ಯಂತರ ಆದೇಶವು ಅಸ್ತಿತ್ವ ಕಳೆದುಕೊಂಡಿದೆ” ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದರು.

“ಟಿಪ್ಪು ನಿಜ ಕನಸುಗಳು” ಕೃತಿ ರಚಿಸಿರುವ ಅಡ್ಡಂಡ ಕಾರ್ಯಪ್ಪ, ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ, ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯವನ್ನು ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ನ್ಯಾಯಾಲಯವು ಕಳೆದ ವಿಚಾರಣೆಯಲ್ಲಿ ನಿರ್ಬಂಧಿಸಿತ್ತು.

ಇದನ್ನೂ ಓದಿ | ಟಿಪ್ಪು ಬಗ್ಗೆ ಕಾರ್ನಾಡ್‌ ನಾಟಕ ಬರೆಯಬಹುದಾದರೆ ನಾನ್ಯಾಕೆ ಬರೆಯಬಾರದು: ಅಡ್ಡಂಡ ಕಾರ್ಯಪ್ಪ ಪ್ರಶ್ನೆ

Exit mobile version