Site icon Vistara News

ಟಿಪ್ಪು ವಿವಾದ | ಟಿಪ್ಪು ಮಾಡಿದ್ದು ಮತಾಂತರವಾದರೆ ರಾಮಾನುಜಾಚಾರ್ಯ, ಬಸವಣ್ಣ ಮಾಡಿದ್ದೇನು?: ಬಸವಲಿಂಗಯ್ಯ

Former Rangayana director C. Basavalingaiah Protest

ಮೈಸೂರು: ನಾನು ರಂಗಾಯಣದಲ್ಲಿ “ಟಿಪ್ಪು ನಿಜ ಕನಸುಗಳು” ನಾಟಕ ನೋಡಲು ಟಿಕೆಟ್‌ ಪಡೆದು ಹೋಗಿದ್ದರೂ ನಿರಾಕರಿಸಿದ ಪೊಲೀಸರು, ತಡೆದು ನಿಲ್ಲಿಸಿ ಅಪಮಾನ ಮಾಡಿದ್ದಾರೆ. ಈ ನಾಟಕದಲ್ಲಿ ಅರ್ಧ ಸತ್ಯ ಹೇಳಲಾಗಿದೆ. ಟಿಪ್ಪು ಮಾಡಿದ್ದು ಮತಾಂತರವಾದರೆ ರಾಮಾನುಜಾಚಾರ್ಯ, ಬಸವಣ್ಣ ಮಾಡಿದ್ದು ಏನು? ಎಂದು ಟಿಪ್ಪು ವಿವಾದ ಸಂಬಂಧ ರಂಗಕರ್ಮಿ, ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದರು.

ನಾನು ರಂಗಾಯಣದ ನಿರ್ದೇಶಕನಾಗಿದ್ದವನು. ಟಿಕೆಟ್ ಖರೀದಿಸಿ ನಾಟಕ ನೋಡಲು ಹೋಗಿದ್ದೆ.
ಪೊಲೀಸರು ತಡೆದು ನಿಲ್ಲಿಸಿ ಅಪಮಾನ ಮಾಡಿದರು. ಇದರಿಂದ ಬೇಸತ್ತು ಧರಣಿ ನಡೆಸಿದೆ. ನಾಟಕ ನೋಡುವಾಗಲೂ ನನ್ನ ಸುತ್ತ ಪೊಲೀಸರು ನಿಂತಿದ್ದರು. ಟಿಪ್ಪು ನಿಜ ಕನಸುಗಳು ನಾಟಕವನ್ನು ನಾನು ವೀಕ್ಷಿಸಿದ್ದೇನೆ. ಅದರಲ್ಲಿ ಇತಿಹಾಸದ ಅರ್ಧ ಸತ್ಯವನ್ನು ಮಾತ್ರ ಹೇಳಲಾಗಿದೆ. ಟಿಪ್ಪು ಮತಾಂತರ ಮಾಡಿರಬಹುದು. ನಾವೂ ಅದನ್ನು ಇಲ್ಲ ಎಂದು ಹೇಳುತ್ತಿಲ್ಲ. ಆದರೆ, ಚಾರಿತ್ರಿಕ ಅಂಶಗಳನ್ನು ಈಗಿನ ಕಾಲಮಾನದಲ್ಲಿ ನಿಂತು ಅರ್ಥೈಸುವುದು ಸರಿಯಲ್ಲ ಎಂದು ಹೇಳಿದರು.

ಟಿಪ್ಪು ಮಾಡಿದ್ದು ಮತಾಂತರವಾದರೆ ರಾಮಾನುಜಾಚಾರ್ಯ, ಬಸವಣ್ಣ ಮಾಡಿದ್ದು ಏನು? ಹಾಗೆ ನೋಡಿದರೆ ಆದಿ ಕವಿ ಪಂಪ ಹಿಂದು ಧರ್ಮದಿಂದ ಜೈನ ಧರ್ಮಕ್ಕೆ ಮತಾಂತರ ಆಗಿಲ್ಲವೇ? ಅಶೋಕ, ಶಿವಾಜಿ ಮುಂತಾದವರು ಯುದ್ಧ, ಕ್ರೌರ್ಯ ಮಾಡಿಲ್ಲವೇ? ಶತ್ರುಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ರಾಜನ ಜವಾಬ್ದಾರಿ. ಅದನ್ನೇ ಟಿಪ್ಪು ಮಾಡಿದ್ದಾನೆ. ಟಿಪ್ಪು ಕೊಂದವರು ಉರಿಗೌಡ, ದೊಡ್ಡ ನಂಜೇಗೌಡ ಎಂದು ನಾಟಕದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಇತಿಹಾಸದಲ್ಲಿ ಎಲ್ಲೂ ಉಲ್ಲೇಖ ಇಲ್ಲ ಎಂದು ಬಸವಲಿಂಗಯ್ಯ ಹೇಳಿದರು.

ಇದನ್ನೂ ಓದಿ | Uniform civil code | ರಾಜ್ಯದಲ್ಲೂ ಸಮಾನ ನಾಗರಿಕ ಸಂಹಿತೆ ಜಾರಿಗೆ ಚಿಂತನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಇದು ಒಂದು ಪ್ರಬಲ ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಪ್ರಯತ್ನವಾಗಿದೆ. ರಂಗಾಯಣ ನಿರ್ದೇಶಕರು ಸರ್ಕಾರದ ಅಣತಿಯಂತೆ ಚುನಾವಣೆ ಗಮನದಲ್ಲಿಟ್ಟುಕೊಂಡು ನಾಟಕವನ್ನು ರೂಪಿಸಿದ್ದಾರೆ. ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ ನೀಡಲಾಗಿದೆ. ನಾನೊಬ್ಬ ರಂಗಭೂಮಿ ನಿರ್ದೇಶಕನಾಗಿ ನಾಟಕ ಪ್ರದರ್ಶನ ನಿಲ್ಲಬಾರದು ಎಂದೇ ಆಗ್ರಹಿಸುತ್ತೇನೆ ಬಸವಲಿಂಗಯ್ಯ ಹೇಳಿದರು.

ಗೇಟ್‌ನಲ್ಲೇ ತಡೆದಿದ್ದ ಪೊಲೀಸರು
ಇಲ್ಲಿನ ರಂಗಾಯಣದಲ್ಲಿ ಪ್ರದರ್ಶನಗೊಳ್ಳುತ್ತಿರುವ “ಟಿಪ್ಪು ನಿಜ ಕನಸುಗಳು” ನಾಟಕವನ್ನು ವೀಕ್ಷಿಸಲು ಶುಕ್ರವಾರ ಬಸವಲಿಂಗಯ್ಯ ಅವರು ಆಗಮಿಸಿದ್ದರು. ಆದರೆ, ಅವರನ್ನು ಪೊಲೀಸರು ಗೇಟ್‌ನಲ್ಲೇ ತಡೆದು ನಿಲ್ಲಿಸಿದ್ದರು. ನಾಟಕ ನೋಡಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜತೆಗೆ ಪೊಲೀಸರ ಜತೆ ವಾಗ್ವಾದವೂ ನಡೆಯಿತು. ಆದರೂ ಪೊಲೀಸರು ಕೇಳದೇ ಇದ್ದಿದ್ದರಿಂದ ಬಸವಲಿಂಗಯ್ಯ ಅವರು ಪ್ರವೇಶ ದ್ವಾರದಲ್ಲೇ ಧರಣಿ ಕುಳಿತರು.

ನಾಟಕಕ್ಕೆ ಅಡ್ಡಿ ಉಂಟು ಮಾಡಲು ಬಂದಿದ್ದೀರಿ ಎಂದು ಪೊಲೀಸರು ಕಾರಣ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಸವಲಿಂಗಯ್ಯ, “ನಾನು ನಾಟಕ ನೋಡಲು ಬಂದಿದ್ದೇನೆ, ಅಡ್ಡಿಪಡಿಸಲು ಅಲ್ಲ. ಟಿಕೆಟ್ ಖರೀದಿಸಿದವರನ್ನು ಒಳಗೆ ಬಿಡುವುದಿಲ್ಲ ಎಂದರೆ ಏನರ್ಥ?” ಎಂದು ಪ್ರಶ್ನೆ ಮಾಡಿದ್ದರು. ಕೊನೆಗೆ ಗಲಾಟೆ ಮಾಡದಂತೆ ಷರತ್ತು ವಿಧಿಸಿದ ಪೊಲೀಸರು ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು. ಸುಮಾರು 15ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ಬಸವಲಿಂಗಯ್ಯ ಅವರು ನಾಟಕವನ್ನು ವೀಕ್ಷಣೆ ಮಾಡಿದ್ದರು.

ಇದನ್ನೂ ಓದಿ | ಎಣ್ಣೆ ಏಟಿನ ಎಫೆಕ್ಟ್, ಚಲಿಸುತ್ತಿದ್ದ ರೈಲಿಗೆ ಕಾಲು ಕೊಟ್ಟ ಭೂಪ

ನಾನು ಪಲಾಯನವಾದಿಯಲ್ಲ, ಕಾರ್ನಾಡ್ ಪಲಾಯನವಾದಿ: ಅಡ್ಡಂಡ ಸಿ.ಕಾರ್ಯಪ್ಪ
ನಾಟಕ ಎಂದರೆ ನಾಟಕವಷ್ಟೇ, ರಂಗಭೂಮಿಯೇ ನಾಟಕ. ಕೆಲವು ಮನರಂಜನೆ, ಕೆಲವು ವೈಚಾರಿಕತೆ ಬಗ್ಗೆ ನಾಟಕವನ್ನು ಮಾಡುತ್ತೇವೆ. ಚರಿತ್ರೆಯನ್ನು ನಾನು ಸುಳ್ಳು ಮಾಡಲು ಹೋಗಿಲ್ಲ. ನಾನು ಪಲಾಯನವಾದಿಯಲ್ಲ, ಗಿರೀಶ್ ಕಾರ್ನಾಡ್ ಪಲಾಯನವಾದಿ. ನಾನು‌ ಹೇಳುತ್ತಿರುವುದು ಸತ್ಯ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯೆ ನೀಡಿದರು.

ನಾನು ಪುಸ್ತಕದಲ್ಲಿ ಇಲ್ಲದ ಯಾವುದೇ ವಿಚಾರವನ್ನು ಹೇಳಿಲ್ಲ. ಸೈಯ್ಯದ್ ಹುಸೇನ್ ಅಲಿ ಕಿರ್ಮಾನಿ ಸೇರಿ ಎಲ್ಲ ಪುಸ್ತಕದಲ್ಲೂ ಇದೆ. ಸ್ವತಃ ಟಿಪ್ಪು ಸುಲ್ತಾನನೇ ಬರೆದ ಪತ್ರಗಳಲ್ಲಿ ದಾಖಲಾಗಿದೆ. ಟಿಪ್ಪುವಿನ ಪರ‌ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಇನ್ನೊಂದು ಮುಚ್ಚಿಟ್ಟ ಮುಖವನ್ನು ನಾನು ಬಿಚ್ಚಿಡುತ್ತಿದ್ದೇನೆ. ಇತಿಹಾಸದಲ್ಲಿ ನನಗೆ, ನನ್ನ ತಂದೆ, ತಾತನಿಗೆ ಏನೆಲ್ಲ ಹೇಳಬೇಕೋ ಅದನ್ನೆಲ್ಲ ಹೇಳಿದ್ದಾರೆ ಎಂದು ಕಿಡಿಕಾರಿದರು.

ಕುಕ್ಕರ್‌ ಬ್ರದರ್ಸ್‌ಗೆ ಉರಿ
ಒಕ್ಕಲಿಗರು ಲಕ್ಷ್ಮಿ ಅಮ್ಮಣ್ಣಿ ಅವರಿಗೆ ನಿಷ್ಠರಾಗಿದ್ದರು. ಇದನ್ನು ಮಳವಳ್ಳಿ ಯುದ್ಧದಲ್ಲಿ ಉಲ್ಲೇಖ ಮಾಡಲಾಗಿದೆ. ತೆರಿಗೆ ಕಟ್ಟಲ್ಲ ಎಂಬುದಕ್ಕೆ ರಂಗೇಗೌಡನ‌ ಚರ್ಮ ಸುಲಿದಿದ್ದರು. ಆ ಕಾರಣಕ್ಕೆ ರಾಣಿಯ ಅಂಗರಕ್ಷಕರಾದ ನಂಜೇಗೌಡ, ಉರಿಗೌಡ ಅವರೇ ಟಿಪ್ಪುವನ್ನು ಕೊಂದರು. ನಾನು ಶಾಮಿಯಾನ ಪಾರ್ಟಿ, ಕುಕ್ಕರ್ ಪಾರ್ಟಿ, ಕುಕ್ಕರ್ ಬ್ರದರ್ಸ್‌ಗೆ ಏಕೆ ಹೇಳಲಿ? ನಾಟಕ ನೋಡಿ ಯಾರಿಗೆಲ್ಲ ಉರಿ ಬಂದಿದೆಯೋ ಅವರೆಲ್ಲ ಕುಕ್ಕರ್ ಬ್ರದರ್ಸ್. ಡಿ.ಕೆ. ಬ್ರದರ್ಸ್‌ ರೀತಿ ಕುಕ್ಕರ್ ಬ್ರದರ್ಸ್‌ ಇದ್ದಾರೆ. ಅವರಿಗೆಲ್ಲ ಈಗ ಉರಿ ಶುರುವಾಗಿದೆ ಎಂದು ಅಡ್ಡಂಡ ಹೇಳಿದರು.

ಜಿಹಾದ್ ಎಂಬ ಪದ ಮೊದಲಿನಿಂದಲೂ ಇದೆ. ರಂಗಾಯಣದಲ್ಲಿ ತಿಂದು, ಉಂಡು ಹೋಗಿದ್ದಾರೆ. ನೀವು ನಕ್ಸಲ್, ಮಾವೋವಾದಿಗಳಿಂದ ಬರುವುದಾದರೆ ನಾನು ಆರ್‌ಎಸ್ಎಸ್‌ನಿಂದ ಬರಬಾರದೇ? ನಾನು ಆರ್‌ಎಸ್ಎಸ್‌ನವನಾಗಿದ್ದೇನೆ. ಆದರೆ, ಇಲ್ಲಿ ಬಿಜೆಪಿ ಕೆಲಸ ಮಾಡಿಲ್ಲ. ನಾನು ರಂಗಾಯಣದ ಮಾಜಿ ನಿರ್ದೇಶಕರನ್ನು ತಡೆದಿಲ್ಲ. ನಾನೇ ಅವರನ್ನು ಖುದ್ದು ಕರೆದುಕೊಂಡು‌ ಹೋಗಿದ್ದೇನೆ. ಬಸವಲಿಂಗಯ್ಯ ಅವರಿಗೆ ಒಂದು ರೋಗ ಇದೆ.
ಆ ಕಾರಣಕ್ಕೆ ನನ್ನ ವಿರುದ್ಧ ಪ್ರತಿಭಟನೆ ಮಾಡಿದರು. ನಾವು ಮೈಸೂರಿನ‌ ಎಲ್ಲ ನ್ಯಾಯಾಲಯದಲ್ಲೂ ಕೇವಿಯಟ್ ಹಾಕಿದ್ದೇವೆ. ನಮಗೆ ಪುಸ್ತಕಕ್ಕೆ‌ ತಡೆ ಬಂದಿದೆ ‌ಹೊರತೂ ನಾಟಕಕ್ಕೆ ಅಲ್ಲ ಎಂದು ಹೇಳಿದರು.

ಇದನ್ನೂ ಓದಿ | Vaishnavi Gowda |ʻʻಮಗಳ ಮೇಲೆ ಆಪಾದನೆ ಮಾಡಿದರೆ ಕಮಿಷನರ್‌ವರೆಗೂ ಹೋಗುತ್ತೇವೆʼʼ: ವೈಷ್ಣವಿ ಪೋಷಕರು

Exit mobile version