ಮುಂಬೈ: ಕರ್ನಾಟಕದಲ್ಲಿ ಟಿಪ್ಪು ಸುಲ್ತಾನನ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ರಾಜಕೀಯ ನಡೆಯುತ್ತಲೇ ಇರುತ್ತದೆ. ಟಿಪ್ಪು ಸುಲ್ತಾನ ಮತಾಂಧ ಎಂದು ಬಿಜೆಪಿ ಹೇಳಿದರೆ, ಆತ ಬ್ರಿಟಿಷರ ವಿರುದ್ಧ ಹೋರಾಡಿದ್ದಾನೆ ಎಂಬುದು ಕಾಂಗ್ರೆಸ್ ವಾದವಾಗಿದೆ. ಇದರ ಬೆನ್ನಲ್ಲೇ, ಟಿಪ್ಪು ಸುಲ್ತಾನನ ಕರಾಳ ಮುಖವನ್ನು ಅನಾವರಣ ಮಾಡುವ ಸಿನಿಮಾ (Tipu Movie) ಘೋಷಣೆಯಾಗಿದೆ. ಹೌದು, ಟಿಪ್ಪು ಸುಲ್ತಾನ್ ಕುರಿತ ‘ಟಿಪ್ಪು’ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಬರಲಿದ್ದು, ಇದರ ಮೋಷನ್ ಪೋಸ್ಟರ್‌ಅನ್ನು ಆತನ ಪುಣ್ಯತಿಥಿಯ ದಿನವಾದ ಗುರುವಾರ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಇದು ಕೂಡ ರಾಜಕೀಯ ಮೇಲಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಟಿಪ್ಪು ಸಿನಿಮಾದ ಮೋಷನ್ ಪೋಸ್ಟರ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೋಷನ್ ಪೋಸ್ಟರ್ ನೋಡಿದರೆ, ಟಿಪ್ಪು ಸುಲ್ತಾನನ ಶೌರ್ಯಕ್ಕಿಂತ, ಕ್ರೌರ್ಯದ ಮುಖ ಅನಾವರಣ ಮಾಡುವ ರೀತಿ ಇದೆ. “8 ಸಾವಿರ ದೇವಾಲಯಗಳ ನಾಶ, 27 ಚರ್ಚ್‌ಗಳ ಧ್ವಂಸ, 40 ಲಕ್ಷ ಹಿಂದುಗಳ ಮತಾಂತರ ಹಾಗೂ ಅವರಿಗೆ ಗೋಮಾಂಸ ತಿನ್ನುವಂತೆ ಒತ್ತಾಯ” ಸೇರಿ ಹಲವು ಅಂಶಗಳು ಸಿನಿಮಾದ ಮೋಷನ್ ಪೋಸ್ಟರ್‌ನಲ್ಲಿವೆ.
ಇಲ್ಲಿದೆ ಮೋಷನ್ ಪೋಸ್ಟರ್
ಪವನ್ ಶರ್ಮಾ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಬಿಜೆಪಿ ಈಶಾನ್ಯ ರಾಜ್ಯಗಳ ರಣತಂತ್ರಗಾರ, ಮಣಿಪುರ ಮುಖ್ಯಮಂತ್ರಿಯವರ ಸಲಹೆಗಾರ ರಜತ್ ಸೇಥಿ ಅವರು ಸಿನಿಮಾಗಾಗಿ ಸಂಶೋಧನೆ ನಡೆಸಿದ್ದಾರೆ. ಪಿಎಂ ನರೇಂದ್ರ ಮೋದಿ, ಸ್ವತಂತ್ರ ವೀರ ಸಾವರ್ಕರ್, ಅಟಲ್ ಸೇರಿ ಹಲವು ಸಿನಿಮಾಗಳನ್ನು ನಿರ್ಮಿಸಿದ ಸಂದೀಪ್ ಶರ್ಮಾ ಅವರು ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ.
ಇದನ್ನೂ ಓದಿ: Karnataka Election 2023: ಬಜರಂಗದಳ ಬಿಜೆಪಿಯದ್ದೇ ಸಂಘಟನೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ನಿರ್ದೇಶಕ ಹೇಳುವುದೇನು?
ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿನಲ್ಲಿ ಚಿತ್ರ ತೆರೆ ಕಾಣಲಿದೆ. “ಟಿಪ್ಪು ಸುಲ್ತಾನ್ ಕುರಿತು ನಾವು ಶಾಲೆಗಳಲ್ಲಿ ಓದಿದ್ದು ತಪ್ಪು ಮಾಹಿತಿಯಾಗಿದೆ. ಆದರೆ, ಆತ ಎಂತಹ ಕ್ರೂರಿಯಾಗಿದ್ದ ಎಂಬುದನ್ನು ತಿಳಿದಾಗ ನನಗೇ ಆಘಾತವಾಯಿತು. ಆತನ ಕ್ರೌರ್ಯದ ಮೇಲೆ ಬೆಳಕು ಚೆಲ್ಲುವ ದಿಸೆಯಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಹಾಗೆಯೇ, ಆತ ದೊಡ್ಡ ಶೂರ, ರಾಜನ ರೀತಿ ಬಿಂಬಿಸಿರುವುದು ಸುಳ್ಳು ಎಂಬುದನ್ನು ತಿಳಿಸುತ್ತೇವೆ” ಎಂದು ನಿರ್ದೇಶಕ ಪವನ್ ಶರ್ಮಾ ಮಾಹಿತಿ ನೀಡಿದರು. ಈಗಾಗಲೇ, ಮೋಷನ್ ಪೋಸ್ಟರ್ ಕುರಿತು ಪರ-ವಿರೋಧ ಚರ್ಚೆಯಾಗುತ್ತಿದೆ. ಇದಕ್ಕೂ ಮೊದಲು ಕರ್ನಾಟಕದಲ್ಲಿ ಟಿಪ್ಪು ನಿಜಕನಸುಗಳು ಎಂಬ ನಾಟಕವೂ ವಿವಾದಕ್ಕೆ ಕಾರಣವಾಗಿತ್ತು.