ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಳಿ ಕಾಂಗ್ರೆಸ್ ವತಿಯಿಂದ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಚಿತ್ರವಿದ್ದ ಬ್ಯಾನರ್ ಹರಿದು ಹಾಕಿರುವ ಘಟನೆ ನಡೆದಿದೆ. ಕಿಡಿಗೇಡಿಗಳ ಕೃತ್ಯವನ್ನು ಆಕ್ಷೇಪಿಸಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಧರಣಿ ನಡೆಸಿದರು.
ಕಾಂಗ್ರೆಸ್ ಆಯೋಜಿಸಿರುವ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ. ಆರ್ ಸರ್ಕಲ್ ಹಾಗೂ ಹಡ್ಸನ್ ಸರ್ಕಲ್ ಬಳಿ ಟಿಪ್ಪು ಸುಲ್ತಾನ್ ಹಾಗೂ ಹಲವಾರು ಮುಖಂಡರ ಚಿತ್ರಗಳಿದ್ದ ಬ್ಯಾನರ್ ಅನ್ನು ಕಾಂಗ್ರೆಸ್ ಅಳವಡಿಸಿತ್ತು. ಅದರಲ್ಲಿ ಟಿಪ್ಪು ಚಿತ್ರವಿದ್ದ ಎರಡು ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.
ರಾತ್ರಿ ವೇಳೆ ಸ್ಥಳಕ್ಕೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಸೇರಿದಂತೆ ನಾನಾ ಮುಖಂಡರು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾತ್ರಿ ೧೦.೩೦ರ ಬಳಿಕ ಘಟನೆ ನಡೆದಿದೆ. ಎರಡು ಕಡೆ ಕಿಡಿಗೇಡಿಗಳು ಬ್ಯಾನರ್ ಹರಿದಿದ್ದಾರೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿಲ್ಲ,” ಎಂದು ಹೇಳಿದ್ದಾರೆ.
ಕಾನೂನು ಹೋರಾಟ ಮಾಡೋಣ ಎಂದ ಡಿ.ಕೆ ಶಿವಕುಮಾರ್
ಸ್ಥಳಕ್ಕೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾತನಾಡಿ “ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಚರಿತ್ರೆ ಓದಿದವರು. ಹೀಗಾಗಿ ಟಿಪ್ಪು ಬ್ಯಾನರ್ ಅಳವಡಿಸಿದ್ದೇವೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪುರಾತತ್ವ ಇಲಾಖೆ ಟಿಪ್ಪು ಪ್ಯಾಲೆಸ್‌ಗೆ ದೀಪಾಲಂಕಾರ ಮಾಡಿದೆ. ಕೇಂದ್ರ ಸರ್ಕಾರವೂ ಗೌರವದಿಂದ ಕಾಣುತ್ತಿದೆ. ಅಂತೆಯೇ ಪೊಲೀಸರ ಕಾವಲಿನ ನಡುವೆಯೂ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ಎರಡೆರಡು ಕಡೆ ಬ್ಯಾನರ್ ಹರಿದು ಹಾಕಲಾಗಿದೆ. ಪೊಲೀಸರು ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಂತೆಯೇ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬೇರೆಯದ್ದಾಗುತ್ತದೆ. ಈಗ ನಾವು ಶಾಂತಿಯುತ ಹೋರಾಟ ಮಾಡುತ್ತೇವೆ ಹಾಗೂ ಕಾನೂನು ಹೋರಾಟ ಮಾಡುತ್ತೇವೆ,’ ಎಂದು ಹೇಳಿದರು.