ಬೆಂಗಳೂರು: ಪತ್ರಿಕೋದ್ಯಮ ಒಳ್ಳೆಯದಕ್ಕೂ ಇದೆ, ಕೆಟ್ಟದ್ದಕ್ಕೂ ಬಳಕೆಯಾಗುತ್ತದೆ. ಆದರೆ ಪತ್ರಕರ್ತರ ಮನಸ್ಸು ಒಳ್ಳೆಯದರ ಕಡೆಗೆ ಸಾಗಿದರೆ ಸಮಾಜದಲ್ಲಿ ಸುಧಾರಣೆಗೆ ಬೆಳಕಾಗುತ್ತದೆ. ಇದರಿಂದ ಪತ್ರಕರ್ತರ ಘನತೆಯೂ ಹೆಚ್ಚುತ್ತದೆ. ಅಲ್ಪಾವಧಿ ಯೋಚನೆಗಳಿಂದ ಅಡ್ಡ ದಾರಿ ಹಿಡಿದರೆ ವೃತ್ತಿ ಜೀವನದಲ್ಲಿ ನಿಮಗೆ ದೀರ್ಘಾವಧಿ ನೆಮ್ಮದಿ ಸಿಗಲು ಖಂಡಿತವಾಗಿ ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಹೇಳಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ)ತಮ್ಮ ನಿವಾಸದಲ್ಲಿ ಮಂಗಳವಾರ ಮಾಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪತ್ರಕರ್ತ ಆಗಬೇಕು ಎನ್ನುವ ತುಡಿತ ಮನಸ್ಸಿನಲ್ಲಿ ಬೆಳೆಯಬೇಕೇ ಹೊರತು, ಅದು ಎಂದೂ ಬಲವಂತದ ಕ್ರಿಯೆ ಆಗಬಾರದು ಎಂದರು. ನನ್ನ ಮನೆಗೆ ಕೆಯುಡಬ್ಲ್ಯುಜೆ ಆಗಮಿಸಿ ಸನ್ಮಾನ ಮಾಡಿರುವುದು ಅಭಿಮಾನದ ಸಂಗತಿ ಎಂದರು.
ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸುದ್ದಿ ಮನೆಯ ಹಿರಿಯರನ್ನು ಗೌರವಿಸುವ ಕಾರ್ಯ ಮಾಡಲಾಗುತ್ತಿದೆ. ಪತ್ರಿಕೋದ್ಯಮದ ಇತಿಹಾಸದಲ್ಲಿ ಮೇರು ಶಿಖರವಾಗಿರುವ ಜಾರ್ಜ್ ಅವರು, ವಿದೇಶದಲ್ಲಿ ಪತ್ರಿಕೆ ನಡೆಸಿ, ಭಾರತಕ್ಕೆ ಬಂದು ಮತ್ತೆ ರಾಜ್ಯ ರಾಜಧಾನಿಯಲ್ಲಿ ನೆಲೆಸಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ, ಕನ್ನಡ ಪ್ರಭ ಪತ್ರಿಕೆ ಮೂಲಕ ತಮ್ಮ ಬರಹ, ಅಂಕಣಗಳಲ್ಲಿ ಛಾಪು ಮೂಡಿಸಿದ್ದಾರೆ. ತಮ್ಮದೇ ಗರಡಿಯಲ್ಲಿ ಮಾಗಿಸಿದ ಅನೇಕ ಶಿಷ್ಯರನ್ನು ಸುದ್ದಿ ಮನೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಇದನ್ನೂ ಓದಿ | ಪ್ರಧಾನಿ ಮೋದಿ ಮಂಗಳೂರಿಗೆ ಬಂದು ಏನು ಸಾಧಿಸುತ್ತಾರೆ: ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ
ಕನ್ನಡ ಪ್ರಭ, ಸುವರ್ಣ ಟಿವಿ ಚಾನಲ್‌ನ ಪ್ರಧಾನ ಸಂಪಾದಕ ರವಿಹೆಗಡೆ ಮಾತನಾಡಿ, ಹಿರಿಯರಾದ ಜಾರ್ಜ್ ಅವರು ನಮಗೆ ಗುರುಗಳು ಇವರ ಆಶೀರ್ವಾದದಿಂದ ನಾವು ಈ ಹಂತಕ್ಕೆ ತಲುಪಲು ಸಾಧ್ಯವಾಯಿತು. ಇವರಿಂದ ಪಳಗಿದವರು, ಸರಿಯಾದ ಮೂರ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.
ಐಎಫ್‌ಡಬ್ಲ್ಯುಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಇಂತಹ ಹಿರಿಯರಿಂದಾಗಿ ನಮ್ಮ ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ಸಾಧ್ಯವಾಯಿತು. ಪತ್ರಕರ್ತ ಹೇಗಿರಬೇಕು ಎನ್ನುವುದಕ್ಕೆ ಜಾರ್ಜ್ ಅವರು ಮಾದರಿ. ಇವರ ಆದರ್ಶಗಳನ್ನು ಇಂದಿನ ಯುವ ಪತ್ರಕರ್ತರು ರೂಢಿಸಿಕೊಂಡರೇ ವೃತ್ತಿ ಘನತೆ ಹೆಚ್ಚಿಸಲು ಸಾಧ್ಯ ಎಂದರು.
ಕನ್ನಡ ಪ್ರಭದ ಜೋಗಿ, ಎಕನಾಮಿಕ್ಸ್ ಟೈಮ್ಸ್ ನ ಬಾಲಸುಬ್ರಹ್ಮಣ್ಯಂ (ಬಾಲು) ಅವರು ಮಾತನಾಡಿ, ಜಾರ್ಜ್ ಅವರನ್ನು ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಈ ಸುಂದರ ಕ್ಷಣಗಳು ಅವಿಸ್ಮರಣೀಯವಾಗಿವೆ ಎಂದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯ ಸೋಮಶೇಖರ್ ಗಾಂಧಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಧಾರವಾಡ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ ಹಾಜರಿದ್ದರು.
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಜಾಜ್
1950ರಲ್ಲಿ ಮುಂಬಯಿಯ ಫ್ರೀ ಪ್ರೆಸ್ ಜರ್ನಲ್ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಟಿಜೆಎಸ್ ಜಾರ್ಜ್ ಅವರು, ಹಾಂಗ್‌ಕಾಂಗ್ ನಲ್ಲಿ ಏಷ್ಯಾ ವೀಕ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ, ಕನ್ನಡ ಪ್ರಭ ಪತ್ರಿಕೆಯಲ್ಲಿ 25 ವರ್ಷ ಸುದೀರ್ಘವಾಗಿ ಪಾಯಿಂಟ್ ಆಫ್ ವೀವ್ ಅಂಕಣ ಬರೆದಿರುವುದು ಭಾರತೀಯ ಪತ್ರಿಕೋದ್ಯಮದಲ್ಲಿ ದಾಖಲೆಯಾಗಿದೆ. ಸತತವಾಗಿ 7 ದಶಕಗಳಿಗೂ ಹೆಚ್ಚು ಸುದೀರ್ಘ ಅವಧಿಗೆ ನಾನಾ ಹಂತದಲ್ಲಿ ಸುದ್ದಿಮನೆಯಲ್ಲಿ ಘನತೆಯಿಂದ ದುಡಿದು ಪತ್ರಿಕೋದ್ಯಮ ಕಟ್ಟಿ ಬೆಳೆಸಿದ ಪ್ರಮುಖರಾಗಿದ್ದಾರೆ.
ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ ಹಿರಿಯ ಚೇತನ, ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡಿದ್ದಾರೆ. ಜಾರ್ಜ್ ಅವರು 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಇದನ್ನೂ ಓದಿ | ಪಂಚಮಸಾಲಿ 2ಎ ಮೀಸಲಾತಿ: ಮತ್ತೆ ಎರಡು ತಿಂಗಳು ಗಡವು ವಿಸ್ತರಣೆ; ಸರ್ಕಾರ ಸದ್ಯ ನಿರಾಳ