ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ (Manual Scavenging) ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಂಗಳೂರಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ (Toilet Cleaning) ಮಾಡಿಸಲಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಇಂಥದ್ದೊಂದು ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದ್ದು, ಈ ಶಾಲೆಯಲ್ಲಿ ಒಟ್ಟು 600 ಜನ ಮಕ್ಕಳಿದ್ದಾರೆ. ಅಲ್ಲದೆ, ಇಲ್ಲಿ ಮಕ್ಕಳೇ ಶೌಚಾಲಯವನ್ನು ಕ್ಲೀನ್ ಮಾಡಬೇಕು. ಅಲ್ಲದೆ, ಮಕ್ಕಳೇ ಶಿಕ್ಷಕರು ಊಟ ಮಾಡುವ ತಟ್ಟೆ ತೊಳೆಯಬೇಕು ಎಂಬ ಅಲಿಖಿತ ಕಾನೂನನ್ನು ಜಾರಿ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಇದನ್ನೂ ಓದಿ: BY Vijayendra: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ, ಮೋದಿ ಕಲ್ಪನೆಗೆ ದೊರೆತ ಪುರಸ್ಕಾರ: ವಿಜಯೇಂದ್ರ
ಪೋಷಕರಿಗೆ ವಿಷಯ ಗೊತ್ತಾಗಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಪೋಷಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಪೋಷಕರು ಸೇರುತ್ತಿದ್ದಂತೆ ಶಿಕ್ಷಕರು ಶಾಲೆಗೆ ತಡವಾಗಿ ಬಂದಿದ್ದಾರೆ. ಈ ಹಿಂದೆಯೂ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗಿತ್ತು. ಈ ಬಗ್ಗೆ ಪೋಷಕರು ದೂರು ಕೂಡಾ ನೀಡಿದ್ದರು. ಆದರೆ, ಅದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿ ಪ್ರಕರಣವನ್ನು ಕೈಗಬಿಡಲಾಗಿತ್ತು. ಈಗ ವಿಡಿಯೊ ಸಮೇತ ಸಾಕ್ಷಿ ಸಿಕ್ಕಿದ್ದು, ಶಾಲಾ ಶಿಕ್ಷಕರ ವಿರುದ್ಧ ಪೋಷಕರು ಕೆಂಡ ಕಾರಿದ್ದಾರೆ. ಮುಖ್ಯ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.
ನಾವು ಯಾರನ್ನೂ ರಕ್ಷಣೆ ಮಾಡಲ್ಲ: ಸಚಿವ ಡಾ.ಎಚ್.ಸಿ.ಮಹದೇವಪ್ಪ
ಯಶವಂತಪುರದಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿಕೊಂಡಿರುವ ನನ್ನ ಗಮನಕ್ಕೆ ಬಂದಿಲ್ಲ. ಶಾಲೆ, ಹಾಸ್ಟೆಲ್ ಹಂತದಲ್ಲಿ ಏನಾಗಿದೆ ಅಂತ ಗೊತ್ತಾಗಲ್ಲ. ಎಲ್ಲವನ್ನೂ ಗಮನಿಸಲು ವಿಚಕ್ಷಣ ದಳ ರಚಿಸಲು ಸೂಚಿಸಿದ್ದೇನೆ. ಅಲ್ಲೊಂದು, ಇಲ್ಲೊಂದು ಘಟನೆಗಳು ನಡೆಯುತ್ತವೆ. ಅದನ್ನೇ ಜನರಲೈಸ್ ಮಾಡೋದು ಬೇಡ. ನಾವು ಯಾರನ್ನೂ ರಕ್ಷಣೆ ಮಾಡಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರದಲ್ಲೂ ನಡೆದಿತ್ತು ಪ್ರಕರಣ
ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಪೋಷಕರು ಬೇಸರ ವ್ಯಕ್ತಪಡಿಸಿ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಈ ಕುರಿತ ವಿಡಿಯೊ ಹಾಗೂ ಫೊಟೊಗಳು ಎಲ್ಲೆಡೆ ಹರಿದಾಡಿದ್ದರಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ, ಶಿಕ್ಷಕರ ವಿರುದ್ಧ ಪೋಷಕರು ದೂರು ದಾಖಲಿಸಿದ್ದರು.
ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಯು ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದರು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಇದೇ ರೀತಿಯಲ್ಲಿ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರಿಂದ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವೂ ಈ ವೇಳೆ ಕೇಳಿಬಂದಿದೆ.
ಇದಲ್ಲದೆ, ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಕೊಡಲಾಗುತ್ತಿದೆ ಎಂದು ದೂರಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಅವರಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದರು.
ಪ್ರಾಂಶುಪಾಲೆ, ಶಿಕ್ಷಕನ ಬಂಧನ
ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ (Manual Scavenging) ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲೆ ಮತ್ತು ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: BY Vijayendra: ಬರದ ನಡುವೆ ಸಿದ್ದರಾಮಯ್ಯ ಐಷಾರಾಮಿ ವಿಮಾನ ಪ್ರಯಾಣ: ವಿಜಯೇಂದ್ರ ಕಿಡಿ
ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಭಾರತಮ್ಮ ಹಾಗೂ ಚಿತ್ರಕಲೆ ಶಿಕ್ಷಕ ಮುನಿಯಪ್ಪ ಅವರನ್ನು ಬಂಧಿತರು. ಪ್ರಕರಣದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರನ್ನು ಮಾಸ್ತಿ ಠಾಣೆ ಬಂಧಿಸಲಾಗಿದೆ. ಹಾಸ್ಟೆಲ್ ವಾರ್ಡನ್ ಮಂಜುನಾಥ್ ಹಾಗೂ ಸಹ ಶಿಕ್ಷಕ ಅಭಿಷೇಕ್ ಮೇಲೆ ಕೂಡ ಎಫ್‌ಐಆರ್ ದಾಖಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.