Site icon Vistara News

Toilet Cleaning: ಬೆಂಗಳೂರು ಶಾಲೇಲಿ ಮಕ್ಕಳಿಂದ ಟಾಯ್ಲೆಟ್‌ ಕ್ಲೀನ್;‌ ಮುಖ್ಯ ಶಿಕ್ಷಕಿ ಅಮಾನತು

stdents toilet cleaning in andravalli school

ಬೆಂಗಳೂರು: ರಾಜಧಾನಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ (Toilet Cleaning) ಮಾಡಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ನನ್ನ ತಪ್ಪಿಲ್ಲ, ಅಮಾನತು ಮಾಡಬೇಡಿ ಎಂದ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ

ಈ ಬಗ್ಗೆ ಅಮಾನತಾದ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ನಾನು ಈ ಶಾಲೆಯಲ್ಲಿ ಇರಬಾರದೆಂದು ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ವಿದ್ಯಾರ್ಥಿಗಳಿಂದ ನಾನು ಟಾಯ್ಲೆಟ್ ಕ್ಲೀನ್ ಮಾಡಿಸಿಲ್ಲ. ನಾನು ರಜೆಯ ಮೇಲೆ ಹೋದಾಗ ಕ್ಲೀನ್ ಮಾಡಿಸಿದ್ದಾರೆ. ನನ್ನನ್ನು ಅಮಾನತು ಮಾಡದಂತೆ ಈ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಇಂಥದ್ದೊಂದು ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದ್ದು, ಈ ಶಾಲೆಯಲ್ಲಿ ಒಟ್ಟು 600 ಜನ ಮಕ್ಕಳಿದ್ದಾರೆ. ಅಲ್ಲದೆ, ಇಲ್ಲಿ ಮಕ್ಕಳೇ ಶೌಚಾಲಯವನ್ನು ಕ್ಲೀನ್ ಮಾಡಬೇಕು. ಅಲ್ಲದೆ, ಮಕ್ಕಳೇ ಶಿಕ್ಷಕರು ಊಟ ಮಾಡುವ ತಟ್ಟೆ ತೊಳೆಯಬೇಕು ಎಂಬ ಅಲಿಖಿತ ಕಾನೂನನ್ನು ಜಾರಿ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಇದನ್ನೂ ಓದಿ: BY Vijayendra: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ, ಮೋದಿ ಕಲ್ಪನೆಗೆ ದೊರೆತ ಪುರಸ್ಕಾರ: ವಿಜಯೇಂದ್ರ

ಪೋಷಕರಿಗೆ ವಿಷಯ ಗೊತ್ತಾಗಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಪೋಷಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಪೋಷಕರು ಸೇರುತ್ತಿದ್ದಂತೆ ಶಿಕ್ಷಕರು ಶಾಲೆಗೆ ತಡವಾಗಿ ಬಂದಿದ್ದಾರೆ. ಈ ಹಿಂದೆಯೂ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗಿತ್ತು. ಈ ಬಗ್ಗೆ ಪೋಷಕರು ದೂರು ಕೂಡಾ ನೀಡಿದ್ದರು. ಆದರೆ, ಅದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿ ಪ್ರಕರಣವನ್ನು ಕೈಗಬಿಡಲಾಗಿತ್ತು. ಈಗ ವಿಡಿಯೊ ಸಮೇತ ಸಾಕ್ಷಿ‌ ಸಿಕ್ಕಿದ್ದು, ಶಾಲಾ ಶಿಕ್ಷಕರ ವಿರುದ್ಧ ಪೋಷಕರು ಕೆಂಡ ಕಾರಿದ್ದಾರೆ. ಮುಖ್ಯ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ನಾವು ಯಾರನ್ನೂ ರಕ್ಷಣೆ ಮಾಡಲ್ಲ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಯಶವಂತಪುರದಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿಕೊಂಡಿರುವ ನನ್ನ ಗಮನಕ್ಕೆ ಬಂದಿಲ್ಲ. ಶಾಲೆ, ಹಾಸ್ಟೆಲ್ ಹಂತದಲ್ಲಿ ಏನಾಗಿದೆ ಅಂತ ಗೊತ್ತಾಗಲ್ಲ. ಎಲ್ಲವನ್ನೂ ಗಮನಿಸಲು ವಿಚಕ್ಷಣ ದಳ ರಚಿಸಲು ಸೂಚಿಸಿದ್ದೇನೆ.‌ ಅಲ್ಲೊಂದು, ಇಲ್ಲೊಂದು ಘಟನೆಗಳು ನಡೆಯುತ್ತವೆ. ಅದನ್ನೇ ಜನರಲೈಸ್ ಮಾಡೋದು ಬೇಡ. ನಾವು ಯಾರನ್ನೂ ರಕ್ಷಣೆ ಮಾಡಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸೋದಕ್ಕೆ ಬಿಡೋದಿಲ್ಲ, ಕಠಿಣ ಕ್ರಮ: ಡಿಕೆಶಿ ಗುಡುಗು

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar), ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸೋದಕ್ಕೆ ಬಿಡೋದಿಲ್ಲ, ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಮಕ್ಕಳಿಂದ ಶೌಚಾಲಯ ಶುಚಿ ವಿಚಾರ ಸರಿಯಲ್ಲ. ಯಾವ ಕಾರಣಕ್ಕೂ ಆ ರೀತಿ ಮಾಡಿಸಬಾರದು. ಈಗ ನಾನು ವಿಧಾನಸೌಧದಲ್ಲಿ ಸಭೆ ಕರೆದಿದ್ದೇನೆ. ನನಗೆ ವಿಚಾರ ಗೊತ್ತಾಗಿದೆ. ಮೂರು ಗಂಟೆಗೆ ಸಭೆ ಕರೆದಿದ್ದೇನೆ. ವರದಿ ತರಿಸಿಕೊಳ್ಳುತ್ತಿದ್ದೇನೆ. ನಿನ್ನೆಯೂ ಇದೇ ರೀತಿ ಘಟನೆ ಆದಾಗ ಕಾನೂನು ಕ್ರಮ ಕೈಗೊಂಡಿದ್ದೆವು ಎಂದು ಹೇಳಿದರು.

ಇದನ್ನೂ ಓದಿ: Toilet Cleaning: ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸೋದಕ್ಕೆ ಬಿಡೋದಿಲ್ಲ, ಕಠಿಣ ಕ್ರಮ: ಡಿಕೆಶಿ ಗುಡುಗು

ಮಕ್ಕಳಿಗೆ ಶಕ್ತಿಕೊಡುವ ಕೆಲಸ ಮಾಡಬೇಕು. ಶಾಲೆಯಲ್ಲಿ ಕಮಿಟಿ ಇದೆ. ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಅವರು ಕ್ರಮ ವಹಿಸಬೇಕು. ಮಕ್ಕಳನ್ನು ದುರುಪಯೋಗ ಮಾಡುವುದನ್ನು ತಡೆಯಬೇಕಿದೆ. ಎನ್‌ಎಸ್‌ಎಸ್ ಆ ಜಾಗವನ್ನು ಸ್ವಚ್ಛತೆ ಮಾಡುವುದು, ಗಿಡ ನೆಡುವುದನ್ನು ಮಾಡುತ್ತಿದ್ದರು. ಈಗ ಶೌಚಾಲಯ ಸ್ವಚ್ಛತೆ ಮಾಡುವುದಕ್ಕೆ ಬಿಡೋದಿಲ್ಲ. ಮುಂದಕ್ಕೂ ಬಿಡುವುದಿಲ್ಲ. ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version