ಬೆಂಗಳೂರು: ಹಣಕಾಸು ವರ್ಷದ ಆರಂಭದಲ್ಲೇ ರಾಜ್ಯದ ವಾಹನ ಸವಾರರಿಗೆ ಮತ್ತೆ ಟೋಲ್ ಬರೆ ಬಿದ್ದಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸೇರಿ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ (Toll Hike) ಏರಿಸಲಾಗಿದ್ದು, ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಯಾವ ಮಾರ್ಗದಲ್ಲಿ ಎಷ್ಟು ಸುಂಕ ಹೆಚ್ಚಳ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಟೋಲ್ ದರ ಹೆಚ್ಚಳ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣಕ್ಕೆ ದರ ಹೆಚ್ಚಳವನ್ನು ಕೈ ಬಿಟ್ಟಿತ್ತು. ಆ ಬಳಿಕ ಜೂನ್‌ನಲ್ಲಿ ಏಕಾಏಕಿ ಶೇ.22ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಇದೀಗ 9 ತಿಂಗಳ ನಂತರ ಮತ್ತೆ ಟೋಲ್ ದರ ಏರಿಕೆ ಆಗಿದೆ.
ಯಾವ ವಾಹನಕ್ಕೆ ಎಷ್ಟು ಶುಲ್ಕ?
ವಾಹನ | ಒನ್ ಸೈಡ್ | ರಿಟರ್ನ್ ಜರ್ನಿ | ತಿಂಗಳ ಪಾಸ್(ಒನ್‌ಸೈಡ್) |
ಕಾರು, ಜೀಪು, ವ್ಯಾನ್ | ₹ 170 | ₹ 255 | ₹ 5,715 |
ಲಘು ವಾಹನ, ಮಿನಿ ಬಸ್ | 275 | 415 | 9,230 |
2 ಆಕ್ಸೆಲ್ ಟ್ರಕ್/ಬಸ್ | 580 | 570 | 19,345 |
3 ಆಕ್ಸೆಲ್ ವಾಣಿಜ್ಯ ವಾಹನ | 635 | 950 | 21,100 |
ಭಾರಿ ವಾಹನ (4-6 ಆಕ್ಸೆಲ್) | 910 | 1,365 | 30,335 |
ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸೆಲ್) | 1,110 | 1,660 | 36,930 |
ವಾಹನ | ಹಳೆ ದರ | ಹೊಸ ದರ | ಹೆಚ್ಚಳ |
ಕಾರು, ಜೀಪು, ವ್ಯಾನ್ | 135 | 170 | 35 |
ಲಘು ವಾಹನ, ಮಿನಿ ಬಸ್ | 220 | 275 | 55 |
2 ಆಕ್ಸೆಲ್ ಟ್ರಕ್/ಬಸ್ | 460 | 580 | 120 |
3 ಆಕ್ಸೆಲ್ ವಾಣಿಜ್ಯ ವಾಹನ | 500 | 635 | 135 |
ಭಾರಿ ವಾಹನ (4-6 ಆಕ್ಸೆಲ್) | 720 | 910 | 190 |
ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸೆಲ್) | 880 | 1,110 | 880 |
ನಿಡಘಟ್ಟ, ಕಣಮಿಣಿಕ ಹಾಗೂ ಶೇಷಗಿರಿಹಳ್ಳಿ ಟೋಲ್ ಪ್ಲಾಜಾವರೆಗಿನ 56 ಕಿ.ಮೀ ಉದ್ದದ ಹೆದ್ದಾರಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕರವು ಮಾಹಿತಿ ನೀಡಿದೆ. ಎಲ್ಲಾ ತರಹದ ವಾಹನಗಳು 24 ಗಂಟೆಯೊಳಗೆ ಹಿಂದಿರುಗಿ ಬಂದಲ್ಲಿ ಪಾವತಿಸಬೇಕಾದ ಟೋಲ್‌ನಲ್ಲಿ ಶೇ. 25ರಷ್ಟು ರಿಯಾಯಿತಿ ಸಿಗಲಿದೆ. ಅದೇ ರೀತಿ, ಎಲ್ಲಾ ವಾಹನಗಳು ಟೋಲ್ ಪಾವತಿ ದಿನದಿಂದ ಒಂದು ತಿಂಗಳೊಳಗೆ 50 ಬಾರಿ ಹೈವೇಯಲ್ಲಿ ಸಂಚರಿಸಿದ್ದರೆ ಶೇ. 35ರಷ್ಟು ರಿಯಾಯಿತಿ ಸಿಗಲಿದೆ. ಯಾವುದೇ ವಾಹನಗಳು ಅನುಮತಿಗಿಂತ ಹೆಚ್ಚಿನ ಸರಕು ಹೊಂದಿದ್ದರೆ ನಿಗದಿತ ಶುಲ್ಕಕ್ಕಿಂತ ಹತ್ತು ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಬಂಟ್ವಾಳ
ಕರಾವಳಿಯಲ್ಲಿರುವ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಟು ಕೇರಳ-ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್ ಗೇಟ್‌ಗಳಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ. ಬ್ರಹ್ಮರಕೂಟ್ಟು ಟೋಲ್ ನಲ್ಲಿ ಕಾರು, ಜೀಪು, ವ್ಯಾನ್ ದ್ವಿಮುಖ ಸಂಚಾರದ ಶುಲ್ಕದಲ್ಲಿ 5 ರೂ. ಏರಿಕೆ ಕಂಡಿದ್ದು, ಪರಿಷ್ಕೃತ ದರ 50 ರೂ. ಆಗಿರಲಿದೆ. ತಲಪಾಡಿಯಲ್ಲಿ 80 ರೂ, ಹೆಜಮಾಡಿಯಲ್ಲಿ 75, ಸಾಸ್ತಾನ ಗುಂಡ್ಮಿ 90 ರೂ. ಪರಿಷ್ಕೃತ ದರವಾಗಿದೆ.
ಇದನ್ನೂ ಓದಿ | Money Guide: ಎನ್‌ಪಿಎಸ್‌ನಿಂದ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ವರೆಗೆ; ನಾಳೆಯಿಂದಲೇ ಬದಲಾಗುತ್ತವೆ ಈ ಎಲ್ಲ ನಿಯಮಗಳು
ಚೆನ್ನೈ-ಬೆಂಗಳೂರು ಹೆದ್ದಾರಿ
ಚೆನ್ನೈ ಹೊರವಲಯದಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ ಎಐ) ಸಿದ್ಧತೆ ನಡೆಸುತ್ತಿರುವುದರಿಂದ ಚೆನ್ನೈ ಮತ್ತು ಬೆಂಗಳೂರು ನಡುವಿನ ರಸ್ತೆ ಪ್ರಯಾಣವು ಹೆಚ್ಚು ದುಬಾರಿಯಾಗಲಿದೆ. ಪ್ರತಿ ಟ್ರಿಪ್‌ಗೆ 5 ರಿಂದ 20 ರವರೆಗೆ ಟೋಲ್ ಶುಲ್ಕ ಹೆಚ್ಚಳವು ಏಪ್ರಿಲ್ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಬೆಂಗಳೂರು ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಏಪ್ರಿಲ್ 1 ರಿಂದ ವೆಚ್ಚಗಳಲ್ಲಿ ಗಣನೀಯ ಏರಿಕೆಯನ್ನು ಎದುರಿಸಬೇಕಾಗುತ್ತದೆ. ತಮಿಳುನಾಡಿನಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲಿರುವ ಹಲವಾರು ಟೋಲ್ ಪ್ರಾಜಾಗಳಲ್ಲಿ ದರ ಹೆಚ್ಚಳವು 150 ರೂ.ಗೆ ತಲುಪಲಿದೆ.
ಲಕ್ಕಸಂದ್ರ ಮೆಟ್ರೋ ಕಾಮಗಾರಿ; ನಾಳೆಯಿಂದ ಇನ್ನೊಂದು ವರ್ಷ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ !
ಬೆಂಗಳೂರು: ನಾಳೆ (ಏಪ್ರಿಲ್ 1) ಯಿಂದಲೇ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಮುಂದಿನ ಒಂದು ವರ್ಷದವರೆಗೆ ವಾಹನಗಳ ಓಡಾಟ ಬಂದ್ ಆಗಲಿದೆ. ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ಕಾಮಗಾರಿಯನ್ನು ನಮ್ಮ ಮೆಟ್ರೋ (Namma Metro) ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಉತ್ತರ ದಿಕ್ಕಿನ ಪಥವನ್ನು ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧ (Traffic restrictions) ಮಾಡಲಾಗುತ್ತಿದೆ. ಏಪ್ರಿಲ್ 1 ರಿಂದ ಒಂದು ವರ್ಷದ ಅವಧಿಗೆ ಮುಚ್ಚಲಾಗುತ್ತದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಪ್ರಕಟಣೆ (BMRTC) ಹೊರಡಿಸಿದೆ.
ಕಾಮಗಾರಿ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸಂಚಾರ ನಿರ್ಬಂಧವಾಗಿರುವ ಕಾರಣಕ್ಕೆ ಪರ್ಯಾಯ ಮಾರ್ಗ ಬಳಸುವಂತೆ ಬಿಎಂಆರ್‌ಸಿಎಲ್ ವಿನಂತಿ ಮಾಡಿದೆ. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಆನೆಪಾಳ್ಯ ಜಂಕ್ಷನ್ ಕಡೆಗೆ ಹೋಗಬೇಕಾದರೆ ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಭೋಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿಕೊಳ್ಳಬೇಕು.
ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೆ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್‌ನ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳಬೇಕು.
ಇದನ್ನೂ ಓದಿ: Acid Attack : ಆಸ್ತಿ ವಿಚಾರಕ್ಕೆ ಯುವಕನಿಗೆ ಆ್ಯಸಿಡ್ ಎರಚಿದ ಸಂಬಂಧಿಕರು; ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಫೈಟಿಂಗ್