ಕೋಲಾರ: ಟೊಮ್ಯಾಟೊ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಈ ನಡುವೆ ಜಿಲ್ಲೆಯ ರೈತ ಸಹೋದರರು 2000 ಬಾಕ್ಸ್‌ಗಳನ್ನು ಮಾರಿ ಬರೋಬ್ಬರಿ 38 ಲಕ್ಷ ರೂ.ಗಳನ್ನು ಗಳಿಸಿರುವುದು ಕಂಡುಬಂದಿದೆ. ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ಬೇತಮಂಗಲದ ರೈತ ಸಹೋದರರು, ಟೊಮ್ಯಾಟೊ (Tomato Crop) ಬೆಲೆಯಿಂದ ಭರ್ಜರಿ ಆದಾಯ ಗಳಿಸಿದ್ದಾರೆ.
ಬೇತಮಂಗಲದ ಪ್ರಭಾಕರ ಗುಪ್ತಾ ಮತ್ತು ಸಹೋದರರು, 40 ವರ್ಷದಿಂದ ಕೃಷಿಯಲ್ಲಿ ತೊಡಗಿದ್ದಾರೆ. ಇವರು ಸುಮಾರು 40 ಎಕರೆ ಜಮೀನು ಹೊಂದಿದ್ದಾರೆ. ಈ ಬಾರಿ ಭರ್ಜರಿ ಫಸಲು ಬಂದ ಹಿನ್ನೆಲೆಯಲ್ಲಿ 2000 ಬಾಕ್ಸ್‌ಗಳನ್ನು ಕೋಲಾರ ಟೊಮ್ಯಾಟೊ ಮಾರುಕಟ್ಟೆಯಲ್ಲಿ ಮಂಗಳವಾರ ಮಾರಿದ್ದಾರೆ. 15 ಕೆ.ಜಿ. ತೂಕವಿರುವ ಪ್ರತಿ ಬಾಕ್ಸ್ 1900 ರೂಪಾಯಿಗೆ ಮಾರಾಟವಾಗಿದೆ. ಅಂದರೆ 1 ಕೆ.ಜಿ. 126 ರೂ.ಗೆ ಮಾರಾಟವಾದಂತಾಗಿದೆ. ಇದರಿಂದ ರೈತ ಸಹೋದರರು 38 ಲಕ್ಷ ರೂಪಾಯಿ ಗಳಿಸಿದ್ದಾರೆ.
ಇದನ್ನೂ ಓದಿ | Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!
ಈ ಬಗ್ಗೆ ಪ್ರಭಾಕರ ಗುಪ್ತಾ ಅವರ ಸಹೋದರ ಸುರೇಶ್ ಗುಪ್ತಾ ಪ್ರತಿಕ್ರಿಯಿಸಿ, ನಾವು ಉತ್ತಮ ಗುಣಮಟ್ಟದ ಟೊಮ್ಯಾಟೊ ಬೆಳೆದಿದ್ದೆವು. ಅಗತ್ಯ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸಿದ್ದರಿಂದ ಹೆಚ್ಚಿನ ಇಳುವರಿ ಬಂದಿದೆ. ಹೀಗಾಗಿ ಉತ್ತಮ ಆದಾಯ ಪಡೆದಿರುವುದಾಗಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಒಂದು ಬಾಕ್ಸ್‌ಗೆ 800 ರೂಪಾಯಿ ಮಾರಾಟ ಮಾಡಿದ್ದೇ ಗುಪ್ತಾ ಸಹೋದರರು ನೋಡಿದ್ದ ಗರಿಷ್ಠ ಬೆಲೆಯಾಗಿತ್ತು. ಆದರೆ, ಮಂಗಳವಾರ ಪ್ರತಿ ಬಾಕ್ಸ್ 1900 ರೂಪಾಯಿ ಮಾರಾಟವಾಗಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಅವಿಭಜಿತ ಕೋಲಾರ ಜಿಲ್ಲೆಯ ವಿವಿಧೆಡೆ ರೈತರು, ಟೊಮ್ಯಾಟೊ ಬೆಳೆದು ಭಾರಿ ಲಾಭ ಗಳಿಸಿರುವುದು ಕಂಡುಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಮಣರೆಡ್ಡಿ ಎಂಬುವವರು ಸುಮಾರು 3.3 ಲಕ್ಷ ರೂಪಾಯಿ ಗಳಿಸಿದ್ದಾರೆ. ಇವರು ಬೆಳೆದಿದ್ದ 54 ಬಾಕ್ಸ್ ಟೊಮ್ಯಾಟೊಗಳ ಪೈಕಿ, 36 ಬಾಕ್ಸ್ ತಲಾ 2,200 ಮಾರಾಟವಾಗಿದೆ. ಉಳಿದ ಪ್ರತಿ ಬಾಕ್ಸ್ 1800 ರೂ.ಗಳಿಗೆ ಮಾರಾಟವಾಗಿದೆ. ಇದರಿಂದ ಉತ್ತಮ ಆದಾಯ ಗಳಿಸಿದ್ದಾರೆ.
ಇದನ್ನೂ ಓದಿ | Cheaper Tomatoes soon : ಕೇಂದ್ರ ಸರ್ಕಾರ ಮಧ್ಯಪ್ರವೇಶ, ಟೊಮ್ಯಾಟೊ ದರ ಶೀಘ್ರ ಇಳಿಕೆ ನಿರೀಕ್ಷೆ
ಬಾಕ್ಸ್ ಗರಿಷ್ಠ 2,220 ರೂ.ಗೆ ಮಾರಾಟ
ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೋಲಾರದ ಎಪಿಎಂಪಿ ಮಾರುಕಟ್ಟೆಯಲ್ಲಿ ಬಾಕ್ಸ್ ಟೊಮ್ಯಾಟೊ ಗರಿಷ್ಠ 2200 ರೂ.ಗಳಿಗೆ ಮಾರಾಟವಾಗುತ್ತಿದೆ. ಈ ಬಗ್ಗೆ ಕೆಆರ್‌ಎಸ್ ಟೊಮ್ಯಾಟೊ ಮಂಡಿಯ ಸುಧಾಕರ್ ರೆಡ್ಡಿ ಮಾತನಾಡಿ, ಮಾರುಕಟ್ಟೆಗೆ ಟೊಮ್ಯಾಟೊ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ. ಪ್ರತಿ ಬಾಕ್ಸ್ 1900 ರಿಂದ 2,200 ರೂ.ಗಳವರೆಗೆ ಮಾರಾಟವಾಗುತ್ತಿದೆ. 2021ರ ನವೆಂಬರ್‌ನಲ್ಲಿ ಕೂಡ ಬಾಕ್ಸ್ ಟೊಮ್ಯಾಟೊ ಬೆಲೆ 2,000 ರೂ. ತಲುಪಿತ್ತು ಎಂದು ಅವರು ಸ್ಮರಿಸಿದರು.