ಕೋಲಾರ: ಕಳೆದ ಕೆಲವು ವಾರದಿಂದ ಮುಟ್ಟಲು ಸಾಧ್ಯವಾಗದಂತೆ ಮೇಲೇರಿದ್ದ ಕೆಂಪು ಸುಂದರಿ ಟೊಮ್ಯಾಟೊ ಧಾರಣೆ (Tomato Price) ಏಕಾಏಕಿಯಾಗಿ ಅರ್ಧಕ್ಕರ್ಧ ಕುಸಿದಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ (Wholesale Market) ಎರಡು ದಿನದ ಹಿಂದೆ ಇದ್ದ ಬೆಲೆ ಈಗ ಅರ್ಧಕ್ಕಿಳಿದಿದೆ. ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೋ ಮಾರ್ಕೆಟ್ (Tomato Market) ಎಂದು ಗುರುತಿಸಲಾದ ಕೋಲಾರದ ಹೋಲ್‌ಸೇಲ್ ಮಾರ್ಕೆಟ್‌ನಲ್ಲಿ (Kolara Market) ಎರಡು ದಿನಗಳ ಹಿಂದೆ 15 ಕೆಜಿಯ ಬಾಕ್ಸ್ 2700 ರೂ.ಗೆ ಮಾರಾಟವಾಗಿತ್ತು. ಶುಕ್ರವಾರ ಅದೇ ಟೊಮ್ಯಾಟೋ 1480 ರೂ.ಗೆ ಹರಾಜಾಗಿದೆ.
ಕೋಲಾರ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ 2700 ರೂ.ಗೆ ಮಾರಾಟವಾಗಿದ್ದು, ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಎಂದು ಗುರುತಿಸಲಾಗಿತ್ತು. ಅಂದರೆ ಒಂದು ಕೆಜಿಗೆ 180 ರೂ.ಗೆ ಮಾರಾಟವಾಗಿತ್ತು. ಇದಕ್ಕೆ ಪ್ರಮುಖ ಗ್ರಾಹಕರೇ ಉತ್ತರ ಭಾರತದವರು. ಉತ್ತರ ಪ್ರದೇಶ, ರಾಜಸ್ಥಾನ, ದಿಲ್ಲಿಯ ಬೇಡಿಕೆಗೆ ಅನುಗುಣವಾಗಿ ಈ ದರ ಒಂದೇ ಸಮನೆ ಏರಿಕೆಯಾಗಿತ್ತು.
ಚಿಕ್ಕಮಗಳೂರು ಮಾರುಕಟ್ಟೆಯಲ್ಲಂತೂ ಹೋಲ್‌ಸೇಲ್ ಧಾರಣೆ ಕೆಜಿಗೆ 200 ರೂ.ಗಳ ಗಡಿಯನ್ನೂ ದಾಟಿ ಮುಂದೆ ಸಾಗಿತ್ತು. ಅಂದರೆ 25 ಕೆಜಿ ಟೊಮ್ಯಾಟೋದ ಹೋಲ್‌ಸೇಲ್ ದರ 5000 ರೂ.ಗಳಿಗೆ ಏರಿತ್ತು.
ಈಗ ಹೋಲ್‌ಸೇಲ್‌ನಲ್ಲಿ 20 ರೂ.ಗೂ ಟೊಮ್ಯಾಟೋ ಮಾರಾಟ
ಇದು ಟಾಪ್ 1 ಗುಣಮಟ್ಟದ ಟೊಮ್ಯಾಟೊ ದರವಾದರೆ ಇತರ ವರ್ಗದ ಟೊಮ್ಯಾಟೋ ಬೆಲೆ ಬೆಲೆಯೂ ಭಾರಿ ಮೇಲಕ್ಕೇರಿತ್ತು. ಆದರೆ, ಈಗ ಅದರ ದರವೂ ಇಳಿಕೆಯಾಗಿದೆ. ಕೋಲಾರ ಮಾರುಕಟ್ಟೆಯಲ್ಲಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 1480 ರೂ.ಗೆ ಮಾರಾಟವಾಗಿದ್ದರೆ, ಮಧ್ಯಮ ಮಟ್ಟದ ಟೊಮ್ಯಾಟೊ 800ರಿಂದ 1050ಕ್ಕೆ ಮಾರಾಟವಾಗಿದೆ. 3ನೇ ದರ್ಜೆಯ ಟೊಮ್ಯಾಟೊ 300ರಿಂದ 680ಕ್ಕೆ ಮಾರಾಟವಾಗಿದೆ. ಅಂದರೆ ಕೆಜಿಗೆ 20 ರೂ.ಗೆ ಕೂಡಾ ಟೊಮ್ಯಾಟೊ ಹರಾಜಾಗಿದೆ.
ದಿಢೀರ್ ಬೆಲೆ ಕುಸಿತಕ್ಕೆ ಕಾರಣವೇನು?
ಎರಡು ದಿನದಲ್ಲೇ ಧಾರಣೆ ಅರ್ಧಕ್ಕರ್ಧ ಕಡಿಮೆಯಾಗಲು ಕಾರಣವಾದ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಟೊಮ್ಯಾಟೊ ಧಾರಣೆ ಕಳೆದ ಒಂದು ತಿಂಗಳಿಂದ ಹೆಚ್ಚಾಗಿದೆ. ಆಗ ಮಾರುಕಟ್ಟೆಗೆ ಬರುತ್ತಿದ್ದ ಟೊಮ್ಯಾಟೋ ಪ್ರಮಾಣ ತುಂಬ ಕಡಿಮೆ ಇತ್ತು, ಬೇಡಿಕೆ ತುಂಬ ಜಾಸ್ತಿ ಇತ್ತು.
ಈಗ ಮತ್ತೊಂದು ಬೆಳೆ ಬೆಳೆದು ಮಾರುಕಟ್ಟೆಗೆ ಬರುವ ಹಂತವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಟೊಮ್ಯಾಟೊ ಮಾರುಕಟ್ಟೆಗೆ ಬರಲು ಸಿದ್ಧರವಾಗಿದೆ. ಅದರಲ್ಲೂ ಮುಖ್ಯವಾಗಿ ಕೋಲಾರದ ಟೊಮ್ಯಾಟೋಗೆ ಭಾರಿ ಬೇಡಿಕೆ ಇದ್ದ ಉತ್ತರ ಭಾರತದಲ್ಲಿ ಕೂಡಾ ಈಗ ಸ್ಥಳೀಯವಾಗಿ ಟೊಮ್ಯಾಟೊ ಲಭ್ಯವಾಗುತ್ತಿದೆ. ಈ ಕಾರಣಕ್ಕಾಗಿ ಟೊಮ್ಯಾಟೊ ಬೆಲೆ ಇಳಿದಿದೆ ಎಂದು ವಿಶ್ಲೇಷಿಸಲಾಗಿದೆ.
ಇದು ನಿಜವೇ ಆಗಿದ್ದರೆ ಇನ್ನು ಒಂದು ವಾರದಲ್ಲಿ ಟೊಮ್ಯಾಟೊ ಧಾರಣೆ ಸಾಮಾನ್ಯ ಹಂತಕ್ಕೆ ಬರಲಿದೆ. ಈಗಾಗಲೇ ಸಾಮಾನ್ಯ ಟೊಮ್ಯಾಟೊಗಳ ಬೆಲೆ ಮಾರುಕಟ್ಟೆಯಲ್ಲಿ 80ರಿಂದ 100 ರೂ. ಇದ್ದು, ಇದು ಒಂದು ವಾರದಲ್ಲಿ 50 ರೂ. ಮಟ್ಟಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಇದೆ. ಇದು ಗ್ರಾಹಕರ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆದರೆ, ರೈತರಿಗೆ ಸಣ್ಣ ಬೇಸರ ಉಂಟು ಮಾಡಲಿದೆ.
ಇದನ್ನೂ ಓದಿ: Tomato Price Hike : ಕಾಫಿ ನಾಡಿನಲ್ಲಿ ಟೊಮ್ಯಾಟೊ ಹೋಲ್‌ಸೇಲ್ ರೇಟೇ ಕೆಜಿಗೆ 200 ರೂ., ಅಂಗಡಿಯಲ್ಲಿ ಎಷ್ಟಿರಬಹುದು!