Site icon Vistara News

Tomato Price Hike : ಕಾಫಿ ನಾಡಿನಲ್ಲಿ ಟೊಮ್ಯಾಟೊ ಹೋಲ್‌ಸೇಲ್‌ ರೇಟೇ ಕೆಜಿಗೆ 200 ರೂ., ಅಂಗಡಿಯಲ್ಲಿ ಎಷ್ಟಿರಬಹುದು!

Chikkamagaluru tomato

ಚಿಕ್ಕಮಗಳೂರು: ಟೊಮ್ಯಾಟೋ ರೇಟನ್ನು (Tomato Price) ಈ ಬಾರಿ ಗಗನಕ್ಕೇರಿದೆ ಎಂದು ಹೇಳಿದರೆ ಸಾಲದು ಅನಿಸುತ್ತದೆ. ಯಾಕೆಂದರೆ ಅದು ಅದಕ್ಕಿಂತಲೂ ಆಚೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಏಷ್ಯಾದ ಎರಡನೇ ಅತಿ ದೊಡ್ಡ ಟೊಮ್ಯಾಟೋ ಮಾರ್ಕೆಟ್‌ (Tomato Market) ಎಂದು ಗುರುತಿಸಲಾದ ಕೋಲಾರದ ಹೋಲ್‌ಸೇಲ್‌ (Kolara Tomato Market) ಮಾರ್ಕೆಟ್‌ನಲ್ಲಿ ಒಂದು ಕೆಜಿ ಟೊಮ್ಯಾಟೋ 160 ರೂ. (15 ಕೆಜಿಯ ಕ್ರೇಟ್‌ಗೆ 2400) ಎಂದು ವಿಸ್ತಾರ ನ್ಯೂಸ್‌ನಲ್ಲೇ ನೀವು ಓದಿದ್ದೀರಿ. ಈಗ ಹಾಗೆ ಚಿಕ್ಕಮಗಳೂರಿಗೆ (Chikkamagaluru tomato Market) ಬನ್ನಿ. ಅಲ್ಲಿನ ರೇಟು ಕೇಳಿ ನೀವು ಹೌಹಾರದೆ ಇರಲು ಸಾಧ್ಯವೇ ಇಲ್ಲ.

ಚಿಕ್ಕಮಗಳೂರು ಭಾಗದಲ್ಲೂ ದೊಡ್ಡ ಪ್ರಮಾಣದಲ್ಲಿ ಟೊಮ್ಯಾಟೋ ಬೆಳೆಯುತ್ತಾರೆ. ಇಲ್ಲಿನ ಟೊಮ್ಯಾಟೋಗೆ ಸ್ಥಳೀಯವಾಗಿ ಮಾತ್ರವಲ್ಲ, ಹೊರರಾಜ್ಯಗಳಿಂದಲೂ ಬೇಡಿಕೆ ಇದೆ. ಈ ಬಾರಿಯಂತೂ ಉತ್ತರ ಭಾರತದ ಹಲವು ರಾಜ್ಯಗಳು ನಮಗೆ ಬೇಕು ನಮಗೆ ಬೇಕು ಎಂದು ಹೇಳಿವೆ.

Chikkamagaluru tomato

ಇಲ್ಲಿ ಪ್ರತಿ ದಿನ ರೈತರು ಎಪಿಎಂಸಿಗೆ ಟೊಮ್ಯಾಟೋ ತಂದು ಅದನ್ನು ಬಿಡ್‌ಗೆ ಇಡುತ್ತಾರೆ. ನೀವು ನಂಬಲೇಬೇಕು. ಚಿಕ್ಕಮಗಳೂರು ಎಪಿಎಂಸಿ ಮಾರ್ಕೆಟ್‌ನಲ್ಲಿ ಟೊಮ್ಯಾಟೋ ಅದೆಂಥ ಬೇಡಿಕೆ ಇದೆ ಎಂದರೆ ಮಂಗಳವಾರ ಇಲ್ಲಿ ಟೊಮ್ಯಾಟೊ ಹೋಲ್‌ಸೇಲ್‌ ಮಾರ್ಕೆಟ್‌ನಲ್ಲಿ ಕೆಜಿಗೆ 200 ರೂ.ಗೆ ಮಾರಾಟವಾಗಿದೆ. ಅಂದರೆ ಇಲ್ಲಿನ 25 ಕೆಜಿ ಟೊಮ್ಯಾಟೋ ಹಣ್ಣುಗಳ ಕ್ರೇಟ್‌ಗೆ 5000 ರೂ. ಬಿಡ್‌ನಲ್ಲಿ ಹೋಗಿದೆ! ಅದೂ ಕೂಡಾ ಭಾರಿ ಡಿಮ್ಯಾಂಡ್‌ನೊಂದಿಗೆ. ಇಲ್ಲಿ ಒಂದು ಕ್ರೇಟ್‌ ಟೊಮ್ಯಾಟೋ ಬೆಲೆ 4000 ರೂ.ನಿಂದ 5000 ರೂ. ಇದ್ದೇ ಇರುತ್ತದೆ.

ಇಲ್ಲಿ ಪ್ರಮುಖವಾಗಿ ಡಿಮ್ಯಾಂಡ್‌ ಇರುವುದು ದಿಲ್ಲಿ, ಆಂಧ್ರ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಿಂದ. ಅಲ್ಲಿಗೆ ಕಳುಹಿಸಲು ಟೊಮ್ಯಾಟೋವನ್ನು ಖರೀದಿ ಮಾಡಲಾಗುತ್ತಿದೆ. ಅಂದರೆ, ಅಲ್ಲಿ ಯಾವ ರೇಟಿಗೆ ಮಾರಾಟ ಮಾಡಬಹುದು ಮತ್ತು ಅಲ್ಲಿನ ಜನರು ಚಿಲ್ಲರೆ ಖರೀದಿಗೆ ಎಷ್ಟು ಹಣ ಕೊಡಬೇಕಾದೀತು ಎಂದು ಯೋಚಿಸಿದರೇ ಅಚ್ಚರಿಯಾಗುತ್ತದೆ.

ಚಿಕ್ಕಮಗಳೂರಿನಲ್ಲಿ ಟೊಮ್ಯಾಟೋ ಹರಾಜು

ಕಾಫಿ ನಾಡಿನ ಇತಿಹಾಸದಲ್ಲೇ ಮೊದಲ ಬಾರಿ ಟೊಮೊಟೊ ರೇಟ್‌ ಈ ಮಟ್ಟಕ್ಕೆ ಏರಿದೆ ಎನ್ನುತ್ತಾರೆ ಇಲ್ಲಿನ ಟೊಮ್ಯಾಟೋ ಮಂಡಿಯ ಮಾಲೀಕರು. ಇಷ್ಟೊಂದು ದೊಡ್ಡ ಮೊತ್ತಕ್ಕೆ ಟೊಮ್ಯಾಟೋ ಮಾರಾಟ ಆಗುತ್ತಿರುವುದು ನೋಡಿ ಸ್ವತಃ ಎಪಿಎಂಸಿ ವ್ಯಾಪಾರಿಗಳಿಗೇ ಅಚ್ಚರಿಯಾಗಿದೆ. ವಿಶೇಷವೆಂದರೆ ಸಣ್ಣ ಪ್ರಮಾಣದ ಕಮಿಷನ್‌ ಕಟ್‌ ಮಾಡುವುದು ಬಿಟ್ಟರೆ ಉಳಿದ ಎಲ್ಲ ಮೊತ್ತವೂ ರೈತರಿಗೇ ಸಿಗುತ್ತದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.

ಚಿಕ್ಕಮಗಳೂರು ನಗರದ ಎಪಿಎಂಸಿಯಲ್ಲಿ ಟೊಮ್ಯಾಟೊ ರೈತರದ್ದೇ ಹವಾ. ಯಾವಾಗ ಹರಾಜು ಶುರುವಾಗುತ್ತದೆ ಎಂದು ವ್ಯಾಪಾರಿಗಳು ಕಾದು ಕುಳಿತುಕೊಳ್ಳುವ ಸನ್ನಿವೇಶ ಕಂಡುಬರುತ್ತಿದೆ. ʻʻಈ ಬಾರಿ ಒಳ್ಳೆಯ ಲಾಭವಾಗಿದೆ ನಿಜ. ಆದರೆ, ಒಂದು ಬೆಳೆಯನ್ನು ಕಳೆದುಕೊಂಡಿದ್ದೇವೆ. ಈ ಹಿಂದೆ ಭಾರಿ ನಷ್ಟ ಅನುಭವಿಸಿ ಟೊಮ್ಯಾಟೋವನ್ನು ರಸ್ತೆಗೆ ಚೆಲ್ಲಿದಾಗ ನಮ್ಮನ್ನು ಯಾರೂ ಕೇಳುತ್ತಿರಲಿಲ್ಲ. ಈಗ ಬೆಲೆ ಏರಿದಾಗ ಡಿಮ್ಯಾಂಡ್‌ ಬಂದಿದೆʼʼ ಎಂದು ರೈತರು ಖುಷಿಯಿಂದ ಹೇಳುತ್ತಾರೆ. ಅದರೆ, ಅವರಿಗೆ ಬೇರೆ ರಾಜ್ಯಕ್ಕೆ ಟೊಮ್ಯಾಟೋ ಕಳುಹಿಸಲು ಕಳ್ಳರ ಭಯವೂ ಕಾಡುತ್ತಿದೆ.

ಇದನ್ನೂ ಓದಿ: Tomato Price : ಕೋಲಾರದ ಹೋಲ್‌ಸೇಲ್‌ ಮಾರ್ಕೆಟ್‌ನಲ್ಲೇ 1 ಕ್ರೇಟ್‌ ಟೊಮ್ಯಾಟೊ ಬೆಲೆ 2400 ರೂ! ಅಂದ್ರೆ ಕೆಜಿಗೆ 160 ರೂ!

Exit mobile version