Site icon Vistara News

Tomato Price : ಕೋಲಾರದ ಹೋಲ್‌ಸೇಲ್‌ ಮಾರ್ಕೆಟ್‌ನಲ್ಲೇ 1 ಕ್ರೇಟ್‌ ಟೊಮ್ಯಾಟೊ ಬೆಲೆ 2400 ರೂ! ಅಂದ್ರೆ ಕೆಜಿಗೆ 160 ರೂ!

Kolara Tomato

ಡಿ.ಎನ್‌. ಲಕ್ಷ್ಮೀಪತಿ, ವಿಸ್ತಾರ ನ್ಯೂಸ್ ಕೋಲಾರ

ಕೆಂಪು ಬಂಗಾರವೆಂಬ (Red Gold) ಖ್ಯಾತಿಯೊಂದಿಗೆ ದಿನದಿಂದ ದಿನಕ್ಕೆ ರೇಟು ಹೆಚ್ಚಿಸಿಕೊಳ್ಳುತ್ತಿರುವ ಟೊಮ್ಯಾಟೊಗೆ (Tomato Price) ಕೋಲಾರದ ಹೋಲ್‌ಸೇಲ್‌ ಮಾರ್ಕೆಟ್‌ನಲ್ಲೇ (Kolara Wholesale Market) ಒಂದು ಕ್ರೇಟ್‌ಗೆ 2400 ರೂ. ಎಂದರೆ ನಂಬುತ್ತೀರಾ? ಅಂದರೆ ಸಗಟು ಮಾರ್ಕೆಟ್‌ನಲ್ಲೇ ಒಂದು ಕೆಜಿಗೆ 160 ರೂ.! ಹಾಗಿದ್ದರೆ ಅದನ್ನು ತಂದು ಚಿಲ್ಲರೆ ಮಾರುಕಟ್ಟೆಯಲ್ಲಿ (Retail Market) ಮಾರಾಟ ಮಾಡಿದಾಗ ರೇಟು ಎಷ್ಟಾಗಬಹುದು ಅಂತ ನೀವೇ ಲೆಕ್ಕ ಹಾಕಿ!

ಟೊಮ್ಯಾಟೊ ಬೆಲೆ ಕೆಲವು ದಿನದ ಹಿಂದೆ ಆಕಾಶಕ್ಕೇರಿ ಬಳಿಕ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಕಳೆದ ಎರಡು ಮೂರು ದಿನಗಳಿಂದ ಅದು ಮತ್ತೆ ಗಗನಮುಖಿಯಾಗಿದೆ. ಏಷ್ಯಾದ 2ನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೊಟೊ ಬಾಕ್ಸ್ ಗೆ ಎರಡು ಸಾವಿರ ಗಡಿ ದಾಟಿದೆ.

ಸದ್ಯ ಹೋಲ್‌ಸೇಲ್‌ ಮಾರ್ಕೆಟ್‌ನಲ್ಲಿ 15 ಕೆಜಿ ಬಾಕ್ಸ್ ಟೊಮ್ಯಾಟೊ ಬೆಲೆ 1300 ರಿಂದ 2400 ರೂಪಾಯಿ ವರೆಗೂ ಮಾರಾಟವಾಗುತ್ತಿದೆ. ಈ ಬೆಲೆ ಅನ್ನದಾತರಿಗೆ ಭಾರಿ ಖುಷಿ ತಂದಿದೆಯಾದರೂ ಚಿಲ್ಲರೆ ಮಾರಾಟಗಾರರು ಇಷ್ಟೊಂದು ರೇಟು ಕೊಟ್ಟು ಟೊಮ್ಯಾಟೊ ಕೊಳ್ಳಲು ಮುಂದಾಗುತ್ತಿಲ್ಲ ಎಂಬ ಮಾತೂ ಇದೆ.

ಹೊರ ರಾಜ್ಯಗಳಿಂದ ಭಾರಿ ಡಿಮ್ಯಾಂಡ್‌

ಒಮ್ಮೆ ಸ್ವಲ್ಪ ಕಡಿಮೆಯಾಗಿದ್ದ ಧಾರಣೆ ಮತ್ತೆ ಎರಡು ಮೂರು ದಿನಗಳಿಂದ ಏರಿಕೆ ಕಡೆ ಮುಖ ಮಾಡಲು ಮುಖ್ಯ ಕಾರಣ ಹೊರರಾಜ್ಯಗಳಿಂದ ಬಂದಿರುವ ಬೇಡಿಕೆ. ಹೊರರಾಜ್ಯಗಳಿಂದ ಬೇಡಿಕೆ ತುಂಬಾ ಹೆಚ್ಚಾಗಿದೆ. ಆದರೆ ಬೇಡಿಕೆ ತಕ್ಕಷ್ಟು ಟೊಮೊಟೊ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದೆ ಧಾರಣೆ ಗಗನಕ್ಕೇರಿದೆ.

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಹಣ್ಣಿನ ಬೇಡಿಕೆ ಎಷ್ಟು ಹೆಚ್ಚಾಗಿದೆ ಎಂದರೆ ಪ್ರತಿ ದಿನ 15 ಸಾವಿರ ಟನ್ ಟೊಮ್ಯಾಟೊ ಹೊರ ರಾಜ್ಯಕ್ಕೆ ಸಾಗಾಣಿಕೆ ಆಗುತ್ತಿದೆ. ಮುಖ್ಯವಾಗಿ ಕೇರಳ, ತಮಿಳುನಾಡು, ಒರಿಸ್ಸಾ, ಕೊಲ್ಕೊತಾ, ಛತ್ತೀಸ್‌ಗಢ ರಾಜ್ಯಗಳಿಂದ ಬಾರಿ ಬೇಡಿಕೆ ಇದೆ. ಬೇಡಿಕೆ ತಕ್ಕಷ್ಟು ಟೊಮ್ಯಾಟೊವೇ ಇಲ್ಲ.

ಒಂದು ಕ್ರೇಟ್‌ 2650 ರೂಪಾಯಿಗೂ ಮಾರಾಟವಾಗಿತ್ತು!

ನಿಜವೆಂದರೆ, ಟೊಮ್ಯಾಟೊ ಬೆಲೆ ಏರಿಕೆಯ ಒಂದು ಹಂತದಲ್ಲಿ ಒಳ್ಳೆಯ ಗುಣಮಟ್ಟದ ಟೊಮ್ಯಾಟೋ ಒಂದು ಕ್ರೇಟ್‌ (15 ಕೆಜಿ) 2650 ರೂ.ಗಳಿಗೂ ಮಾರಾಟವಾಗಿದ್ದು ಇದೆ. ಈಗ ದೊಡ್ಡ ಟೊಮ್ಯಾಟೋ ಬೆಲೆ 1800ರಿಂದ 2400 ರೂ.ವರೆಗೂ ಇದೆ. ಸಣ್ಣ ಗೋಲಿಯಾಕಾರದ ಸಾಮಾನ್ಯ ಟೊಮ್ಯಾಟೋ ಬೆಲೆ ಕೂಡಾ ಒಂದು ಕ್ರೇಟ್‌ಗೆ 800ರಿಂದ 1100 ರೂ.ವರೆಗೆ ಇದೆ. ಮುಂದಿನ ಎರಡು ಮೂರು ವಾರಗಳ ಕಾಲ ಈ ದರ ಇದೇ ರೀತಿ ಇರಲಿದೆ ಎನ್ನುತ್ತಾರೆ ಟೊಮೊಟೊ ಮಂಡಿ ವ್ಯಾಪಾರಿ ಶ್ರೀನಾಥ್‌.

ಸಾಮಾನ್ಯ ಪ್ರಮಾಣದ 20% ಮಾತ್ರ ಮಾರ್ಕೆಟ್‌ಗೆ ಬರುತ್ತಿದೆ

ಮಾರುಕಟ್ಟೆಯಲ್ಲಿ ಸರಾಸರಿ ಟೊಮ್ಯಾಟೊ ಧಾರಣೆ 1300ರಿಂದ 1800ವರೆಗೆ ಇದೆ. ಕೆಲವು ಹೊಸ ತೋಟಗಳ ಮೊದಲ ಕೊಯ್ಲು ಕೇವಲ 20ರಿಂದ 40 ಬಾಕ್ಸ್ ಗಳು ಮಾತ್ರ 2200ರಿಂದ 2400 ರೂ.ಗೆ ಮಾರಾಟವಾಗಿದೆ ಎನ್ನುತ್ತಾರೆ ಕೃಷಿ ಮಾರುಕಟ್ಟೆಯ ಅಧಿಕಾರಿ ವಿಜಯಲಕ್ಷ್ಮೀ. ಸಾಮಾನ್ಯವಾಗಿ ಈ ಅವಧಿಯಲ್ಲಿ ಮಾರುಕಟ್ಟೆಗೆ ಮೂರು ಲಕ್ಷ ಬಾಕ್ಸ್ ಗಳು ಬರಬೇಕಿತ್ತು. ಆದರೆ ಈಗ ಬಂದಿರುವುದು ಕೇವಲ 50ರಿಂದ 60 ಸಾವಿರ ಬಾಕ್ಸ್ ಬರುತ್ತಿದೆ. ಅಂದರೆ ಸಾಮಾನ್ಯ ಪ್ರಮಾಣದ ಶೇಕಡಾ 20ರಷ್ಟು ಮಾತ್ರ ಬಂದಿದೆ. ಬೆಲೆ ಏರಿಕೆಗೆ ಕಾರಣವಾಯಿತು ಎಂದು ವಿಜಯಲಕ್ಷ್ಮೀ ಹೇಳುತ್ತಾರೆ.

ಇದನ್ನೂ ಓದಿ : Tomato market : ಟೊಮ್ಯಾಟೊ ಮಾರಿ ಒಂದೇ ತಿಂಗಳಿಗೆ 3 ಕೋಟಿ ಸಂಪಾದಿಸಿದ ಆಂಧ್ರಪ್ರದೇಶದ ರೈತ

ಒಮ್ಮೊಮ್ಮೆ ಕೋಲಾರದ ಟೊಮ್ಯಾಟೋ ಯಾರಿಗೂ ಬೇಡ ಎನ್ನುವ ಹಾಗೆ ಇರುತ್ತದೆ. ರೇಟು ಕಡಿಮೆಯಾಗಿ ಜನರು ಹಣ್ಣನ್ನು ರಸ್ತೆಗೆ ಎಸೆಯುವುದು, ಟೊಮ್ಯಾಟೊವನ್ನು ಕೊಯ್ಲು ಮಾಡದೆ ಬಿಡುವ ಪರಿಸ್ಥಿತಿ ಇರುತ್ತಿತ್ತು. ಒಂದು ಕ್ರೇಟ್‌ಗೆ 10 ರೂ. ಕೂಡಾ ಇಲ್ಲದ ಪರಿಸ್ಥಿತಿಯನ್ನು ಇಲ್ಲಿನ ರೈತರು ನೋಡಿದ್ದಾರೆ. ಆದರೆ, ಈಗ ಎಲ್ಲ ಕಡೆಯಿಂದ ಬೇಡಿಕೆಯ ಮಹಾಪೂರ. ಎಷ್ಟು ರೇಟು ಹೇಳಿದರೂ ಡಿಮ್ಯಾಂಡ್‌ ಇದ್ದೇ ಇದೆ.

ಬೇರೆ ರಾಜ್ಯಗಳ ವ್ಯಾಪಾರಿಗಳು ಕೂಡಾ ಕೋಲಾರ ಮಾರುಕಟ್ಟೆಗೆ ಆಗಮಿಸುತ್ತಿರುವುದರಿಂದ ಸ್ಥಳೀಯರು ಮತ್ತು ಹೊರಗಿನವರರು ಸೇರಿ ಧಾರಣೆ ಏರಿಸುತ್ತಿದ್ದಾರೆ. ಟೊಮ್ಯಾಟೋ ರೇಟು ಇಷ್ಟೊಂದು ಏರಿದರೂ ರೈತರಿಗೆ ಭಾರಿ ಸಂತೋಷವೇನೂ ಇಲ್ಲ. ಯಾಕೆಂದರೆ, ಈ ಬಾರಿ ಬೆಳೆಯೇ ಕಡಿಮೆ ಎಂದು ರೈತರು ಮೂಗು ಮುರಿಯುತ್ತಿದ್ದಾರೆ.

ಇದನ್ನೂ ಓದಿ: Tomato Price: ಅಖಿಲೇಶ್ ಯಾದವ್ ಬರ್ತ್​ ಡೇಗೆ ಟೊಮ್ಯಾಟೊ ಕೇಕ್​ ಕತ್ತರಿಸಿದ ಕಾರ್ಯಕರ್ತರು

Exit mobile version