ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಅತಿಯಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ (Weather Report) ತಿಳಿಸಿದೆ. ಅಲ್ಲದೆ, ಶರವೇಗದಲ್ಲಿ ಗಾಳಿ ಬೀಸಲಿದ್ದು, 65 ಕಿ.ಮೀ. ನಷ್ಟು ವೇಗವಾಗಿರಲಿದೆ ಎಂದು ಹೇಳಲಾಗಿದೆ. ಇದರ ಜತೆಗೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಭರ್ಜರಿ ಮಳೆಯಾಗಲಿದೆ.
ಮುಂದಿನ 24 ಗಂಟೆಯಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ
ಕರಾವಳಿ ಭಾಗವಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಅತಿಯಾದ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಗದಗ, ಧಾರವಾಡ, ರಾಯಚೂರು, ಕಲಬುರಗಿ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆಯಲ್ಲಿ ಎಲ್ಲೆಲ್ಲಿ ಮಳೆ?
ಕರಾವಳಿಯ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ. ಇನ್ನು ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ.
65 ಕಿ.ಮೀ. ಗಾಳಿ ಬೀಸುವ ಸಾಧ್ಯತೆ
ರಾಜ್ಯದ ಒಳನಾಡು ಪ್ರದೇಶದಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ. ಅದೇ ಕರಾವಳಿ ಭಾಗದಲ್ಲಿ ಬಿರುಗಾಳಿಯು ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ. ವೇಗದಲ್ಲಿ ಬೀಸುವ ವಾತಾವರಣ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಬುಧವಾರ ದಕ್ಷಿಣ ಕನ್ನಡದ ಸುಳ್ಯದಲ್ಲಿ 80 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ.
ಇದನ್ನೂ ಓದಿ: Rain News : ವರ್ಷಧಾರೆಗೆ ಕರಾವಳಿ ತತ್ತರ; ಬುಧವಾರ ಒಂದೇ ದಿನ ಉ.ಕ.ದಲ್ಲಿ 18, ದ.ಕ.ದಲ್ಲಿ 17 ಸೆಂ.ಮೀ. ಮಳೆ!
ಬೆಂಗಳೂರಲ್ಲಿ ಥಂಡಿ ವಾತಾವರಣ
ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 2೦ ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಕಡಿಮೆ ಆಗುವ ಸಾಧ್ಯತೆ ಇದ್ದು, ಥಂಡಿ ವಾತಾವರಣ ಇರಲಿದೆ. ಹೀಗಾಗಿ ಜನರಿಗೆ ಸ್ವಲ್ಪ ಚಳಿ ಚಳಿ ಅನುಭವವೂ ಆಗಲಿದೆ. ಈ ನಡುವೆ ಬಲವಾದ ಗಾಳಿಯೊಂದಿಗೆ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದ್ದರೂ ಮಳೆ ಮೇಲೆ ಅವಲಂಬಿತವಾಗಿದೆ.