Site icon Vistara News

ತೋಂಟದಾರ್ಯ ಶ್ರೀ vs ದಿಂಗಾಲೇಶ್ವರ ಶ್ರೀ: ಇಂದು ಗದಗದಲ್ಲಿ ಭಾವೈಕ್ಯತೆ ದಿನ vs ಕರಾಳ ದಿನ

tontada siddarama sri dingaleshwara sri siddalinga sri

ಗದಗ: ಇಂದು ಗದಗ ಇಬ್ಬರು ಸ್ವಾಮೀಜಿಗಳ ಜಂಗೀಕುಸ್ತಿಗೆ ಅಖಾಡವಾಗಲಿದೆ. ಗದಗ ತೋಂಟದಾರ್ಯ ಮಠದಲ್ಲಿ ತೋಂಟದ ಶ್ರೀ ಸಿದ್ದರಾಮ ಸ್ವಾಮೀಜಿಗಳ (Tontadarya Siddarama Swamiji) ನೇತೃತ್ವದಲ್ಲಿ ಭಾವೈಕ್ಯತೆ ದಿನಾಚರಣೆ ನಡೆಯಲಿದ್ದು, ಅದನ್ನು ವಿರೋಧಿಸಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳಿಂದ (Shirahtti Dingaleshwara Swami) ಕರಾಳ ದಿನ ಆಚರಣೆ ನಡೆಯಲಿದೆ.

ತೋಂಟದಾರ್ಯ ಮಠದಲ್ಲಿ ಭಾವೈಕ್ಯತೆ ದಿನಾಚರಣೆ ಮಾಡಬಾರದು ಎಂದು ಆಗ್ರಹಿಸಿದ್ದ ಶಿರಹಟ್ಟಿ ದಿಂಗಾಲೇಶ್ವರ ಶ್ರೀಗಳು, ಹಾಗೊಂದು ವೇಳೆ ಭಾವೈಕ್ಯ ದಿನ ಆಚರಿಸಿದರೆ ತಾವು ಕರಾಳ ದಿನ ಆಚರಿಸುವುದಾಗಿ ಹೇಳಿದ್ದರು. ಅದರಂತೆ ಇಂದು ಗಡ್ಡಿ ಪೆಟ್ರೋಲ್ ಬಂಕ್‌ನಿಂದ ತೋಂಟದಾರ್ಯ ಮಠದ ವರೆಗೆ ದಿಂಗಾಲೇಶ್ವರ ಶ್ರೀಗಳಿಂದ ಪಾದಯಾತ್ರೆ ನಡೆಯಲಿದೆ. 9 ಗಂಟೆಯಿಂದ ಕರಾಳ ದಿನ ಹೋರಾಟದ ಪಾದಯಾತ್ರೆ ಆರಂಭವಾಗಲಿದೆ.

ಎರಡೂ ಮಠಗಳ ನಡುವೆ ಭಾವೈಕ್ಯತೆ ದಿನಾಚರಣೆ ವಿಷಯ ಸಂಘರ್ಷಕ್ಕೆ ಕಾರಣವಾಗಿದೆ. ಲಿಂಗೈಕ್ಯ ತೋಂಟದಾರ್ಯ ಸಿದ್ದಲಿಂಗ‌ ಸ್ವಾಮೀಜಿಯವರ (Tontada Sri Siddalinga Swamiji) ಜಯಂತಿಯನ್ನ ತೋಂಟದಾರ್ಯ ಮಠ ಭಾವೈಕ್ಯತೆ ದಿನವನ್ನಾಗಿ ಆಚರಿಸುತ್ತಿದೆ. ಆದರೆ, ಸಿದ್ದಲಿಂಗ ಶ್ರೀಗಳಿಗೆ ಭಾವೈಕ್ಯತೆ ಪದ ಬಳಸುವುದನ್ನು ದಿಂಗಾಲೇಶ್ವರ ಶ್ರೀ ಆಕ್ಷೇಪಿಸಿದ್ದಾರೆ.

ʼಸಿದ್ದಲಿಂಗ ಶ್ರೀಗಳಿಗೂ ಭಾವೈಕ್ಯತೆಗೂ ಸಂಬಂಧ ಇಲ್ಲʼ ಎಂಬುದು ದಿಂಗಾಲೇಶ್ವರ ಶ್ರೀಗಳ ಆಕ್ಷೇಪದ ಒಟ್ಟಾರೆ ತಾತ್ಪರ್ಯವಾಗಿದೆ. “ಶಿರಹಟ್ಟಿ ಫಕೀರೇಶ್ವರ ಮಠವೇ ಭಾವೈಕ್ಯತೆಯ ಪೀಠ. ತೋಂಟದಾರ್ಯ ಮಠವು ವಿರಕ್ತ ಪರಂಪರೆಯ ಮಠವಾಗಿದೆ. ಅದಕ್ಕೂ ಭಾವೈಕ್ಯತೆಗೂ ಸಂಬಂಧವಿಲ್ಲ” ಎಂದಿದ್ದ ಅವರು, ಭಾವೈಕ್ಯತೆ ದಿನ ಆಚರಿಸಿದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಉತ್ತರವಾಗಿ ತೋಂಟದಾರ್ಯ ಶ್ರೀ ಸಿದ್ದರಾಮ ಸ್ವಾಮೀಜಿ ಅವರು, “ಭಾವೈಕ್ಯತೆ ಯಾರೊಬ್ಬರ ಸೊತ್ತೂ ಅಲ್ಲ. ಕರಾಳ ದಿನಾಚರಣೆ ಮಾಡುವವರನ್ನು ಸರ್ಕಾರ ಪ್ರತಿಬಂಧಿಸಬೇಕು” ಎಂದು ಹೇಳಿದ್ದು, ಭಾವೈಕ್ಯತೆ ದಿನ ಕೈಬಿಡುವುದಿಲ್ಲ ಎಂದು ಸಾರಿದ್ದರು. ಇಂದು ಭಾವೈಕ್ಯತೆ ಯಾತ್ರೆ ವರ್ಸಸ್‌ ಕರಾಳ ದಿನದ ತಾಕಲಾಟ ತುರೀಯಾವಸ್ಥೆ ತಲುಪಲಿದೆ.

ಇದನ್ನೂ ಓದಿ: ಭಾವೈಕ್ಯತಾ ದಿನವಾಗಿ ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿ; ಫಕೀರ ದಿಂಗಾಲೇಶ್ವರ ಶ್ರೀ ತೀವ್ರ ವಿರೋಧ

Exit mobile version