ಹಳೇಬೀಡು ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ (BEST Places to Visit in Halebid) ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಹಿಂದೆ ದ್ವಾರಸಮುದ್ರ ಎಂದು ಕರೆಯಲ್ಪುಡುತ್ತಿದ್ದ ಈ ಸುಂದರ ನಗರ ಹಲವಾರು ದೇವಾಲಯಗಳಿಂದ ತುಂಬಿದೆ. ಹೊಯ್ಸಳರ ಕಾಲದಲ್ಲಿ ವಾಸ್ತುಶಿಲ್ಪವನ್ನು ಕಣ್ತುಂಬಿಸಿಕೊಳ್ಳಬೇಕೆಂದರೆ ಈ ನಗರಕ್ಕೆ ನೀವು ಭೇಟಿ ನೀಡಲೇಬೇಕು. ಈ ಪ್ರಸಿದ್ಧ ತಾಣದ ಹತ್ತಿರದಲ್ಲೇ ಇರುವ ಅನೇಕ ತಾಣಗಳ ಕುರಿತಾಗಿ ಇಲ್ಲಿದೆ ವಿವರ.
ಬೇಲೂರು
ಹಳೇಬೀಡಿನಿಂದ 16 ಕಿ.ಮೀ ದೂರದಲ್ಲಿ ನೀವು ಬೇಲೂರು ದೇಗುಲವನ್ನು ಕಾಣಬಹುದು. ಇದನ್ನು ದಕ್ಷಿಣ ವಾರಾಣಸಿ ಎಂದೂ ಕರೆಯಲಾಗುತ್ತದೆ. ಭಗವಾನ್ ವಿಷ್ಣುವಿನ ಅವತಾರವಾದ ಚೆನ್ನಕೇಶವನ ದೇಗುಲ ಇದಾಗಿದೆ. ಯಗಚಿ ನದಿ ದಡದಲ್ಲಿರುವ ಈ ದೇಗುಲ ಹೊಯ್ಸಳ ವಾಸ್ತು ಶೈಲಿಯಲ್ಲಿದೆ. ಚೆನ್ನಕೇಶವ ದೇವಾಲಯವನ್ನು 1117ರ ಸಮಯದಲ್ಲಿ ನಿರ್ಮಿಸಲಾಯಿತು. ನಕ್ಷತ್ರಾಕಾರದ ವೇದಿಕೆಯ ಮೇಲೆ ದ್ರಾವಿಡ, ರಾಜಗೋಪುರ ಸೇರಿಸಂತೆ ಒಟ್ಟು ಮೂರು ಪ್ರವೇಶದ್ವಾರಗಳಿವೆ. ಇಲ್ಲಿ ಪುಷ್ಕರಣಿ, ಚೆನ್ನಕೇಶವನ ಪತ್ನಿ ರಾಗನಾಯಕಿ ಮತ್ತು ಸೌಮ್ಯನಾಯಕಿಯ ಎರಡು ದೇವಾಲಯಗಳನ್ನು ಕಾಣಬಹುದು. ಪುರಾಣದ ಪ್ರಕಾರ ಈ ಭವ್ಯವಾದ ದೇಗುಲದ ನಿರ್ಮಾಣವನ್ನು ಪೂರ್ಣಗೊಳಿಸಲು 103 ವರ್ಷಗಳು ಬೇಕಾಯಿತು
ಹೊಯ್ಸಳೇಶ್ವರ ದೇವಸ್ಥಾನ
ಹಳೇಬೀಡು ನಗರದಲ್ಲಿಯೇ ನಿಮಗೆ ಕಾಣ ಸಿಗುವುದು ಹೊಯ್ಸಳೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು 1121ರ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಸರೋವರದಿಂದ ಸುತ್ತುವರಿದಿರುವ ದೇವಾಲಯದ ಸಂಕೀರ್ಣವು ಪುರಾತತ್ತ್ವ ಶಾಸ್ತ್ರದ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಹೊಯ್ಸಳೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿಯೇ ಶಾಂತಲೇಶ್ವರ, ಹೊಯ್ಸಳೇಶ್ವರ ಮತ್ತು ವಿಷ್ಣುವರ್ಧನನ ಮಂತ್ರಿ ಕೇತುಮಲ್ಲನಿಗೆ ಸಮರ್ಪಿತವಾದ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಯನ್ನು ನೋಡುವುದರಲ್ಲಿ ನೀವು ಮೈ ಮರೆತುಬಿಡುತ್ತೀರಿ. ಈ ಭವ್ಯವಾದ ದೇವಾಲಯವು ಹೊಯ್ಸಳ ಸಾಮ್ರಾಜ್ಯದ ಮೂರು ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಭಾರತದಲ್ಲಿ ಭಗವಾನ್ ಶಿವನಿಗೆ ಸಮರ್ಪಿತವಾದ ಅತ್ಯಂತ ಮಹತ್ವದ ಸ್ಮಾರಕವಾಗಿದೆ. ಈ ದೇವಸ್ಥಾನವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಅಡಿಯಲ್ಲಿ ಪಟ್ಟಿ ಮಾಡುವುದಕ್ಕೂ ಪ್ರಸ್ತಾಪಿಸಲಾಗಿದೆ.
ಯಗಚಿ ಆಣೆಕಟ್ಟು
ಬೇಲೂರಿನಿಂದ ಸುಮಾರು ಅರ್ಧ ಗಂಟೆ ಸಾಗಿದರೆ ನಿಮಗೆ ಯಗಚಿ ಅಣೆಕಟ್ಟು ಸಿಗುತ್ತದೆ. ಅಲ್ಲಿ ನೀವು ಜಲಕ್ರೀಡೆಗಳನ್ನು ಆಡಬಹುದು. ಸ್ಪೀಡ್ ಬೋಚ್, ಬಂಪರ್ ರೈಡ್, ಕ್ರೂಸ್ ಬೋಟ್, ಬನಾನಾ ಬೋಟ್ ರೈಡ್, ಕಯಾಕಿಂಗ್ ಸೇರಿ ಅನೇಕ ರೀತಿಯ ಜಲ ಕ್ರೀಡೆಗಳನ್ನು ಇಲ್ಲಿ ಆಡುವುದಕ್ಕೆ ಅವಕಾಶವಿದೆ. ಇಲ್ಲಿ ಸ್ಪೀಡ್ ಬೋಟ್‌ಗೆ 600 ರೂ., ಬನಾನಾ ರೈಡ್‌ಗೆ 500 ರೂ., ಜೆಟ್ ಸ್ಕೈಗೆ 300 ರೂ., ಕಯಾಕಿಂಗ್‌ಗೆ 200 ರೂ. ಶುಲ್ಕ ವಿಧಿಸಲಾಗುತ್ತದೆ.
ಬಸದಿ ಹಳ್ಳಿ
ಹಳೇಬೀಡಿಗೆ ಹತ್ತಿರದಲ್ಲಿಯೇ ಬಸದಿ ಹಳ್ಳಿಯಿದೆ. ಇಲ್ಲಿ ಜೈನ ದೇವಾಲಯವಿದ್ದು, ಅಲ್ಲಿ ಕನ್ನಡಿಗಳನ್ನು ಹೋಲುವ ಅತ್ಯಂತ ಹೊಳಪುಳ್ಳ ಕಂಬಗಳನ್ನು ಕಾಣಬಹುದಾಗಿದೆ. ಇಲ್ಲಿ ಪಾರ್ಶ್ವನಾಥಸ್ವಾಮಿ ದೇವಾಲಯ, ಆದಿನಾಥಸ್ವಾಮಿ ದೇವಾಲಯ ಮತ್ತು ಶಾಂತಿನಾಥಸ್ವಾಮಿ ದೇವಾಲಯಗಳಿವೆ. ಈ ಪ್ರದೇಶದಲ್ಲಿ ಹಲವಾರು ಮಠಳನ್ನೂ ನೀವು ನೋಡಬಹುದು.
ಪುರಾತತ್ವ ವಸ್ತು ಸಂಗ್ರಹಾಲಯ
ಹಳೆಬೀಡಿನ ದೇವಸ್ಥಾನದ ಆವರಣದಲ್ಲಿಯೇ ಪುರಾತತ್ವ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಲೆಕ್ಕವಿಲ್ಲದಷ್ಟು ಶಿಲ್ಪಗಳು, ಶಾಸನಗಳನ್ನು ನೀವು ಕಾಣಬಹುದು. ಹಾಗೆಯೇ ಹಲವಾರು ರೀತಿಯ ಕಲ್ಲಿನ ಕೆತ್ತನೆಗಳ ಬಗ್ಗೆ ವಿವರಣೆಯನ್ನೂ ಇಲ್ಲಿ ಕೊಡಲಾಗಿದೆ. ನರ್ತಿಸುವ ಶಿವ, ನಟರಾಜ ಮತ್ತು ವೀಣಾ ಸರಸ್ವತಿ, ನರ್ತಿಸುವ ಗಣೇಶ, ತೀರ್ಥಂಕರನ ಕಂಚಿನ ಪ್ರತಿಮೆ ಸೇರಿ ಹಲವು ಮಹತ್ವದ ಶಿಲ್ಪಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.
ಕೇದಾರೇಶ್ವರ ದೇವಸ್ಥಾನ
ಈ ದೇವಸ್ಥಾನವೂ ಕೂಡ ಶಿವನಿಗೆ ಸಮರ್ಪಿತವಾದ ದೇಗುಲವಾಗಿದೆ. ಕ್ರಿ.ಶ 1319ರಲ್ಲಿ ಚಾಲುಕ್ಯರ ವಾಸ್ತುಶೈಲಿಯೊಂದಿಗೆ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು. ಈ ದೇವಾಲಯದ ನೆಲಮಾಳಿಗೆಯಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು ಚಿತ್ರಿಸುವ ಕೆತ್ತನೆಗಳನ್ನು ಕಾಣಬಹುದು. ಈ ದೇಗುಲವನ್ನು ಹೊಯ್ಸಳರ ರಾಜ ವೀರ ಬಲ್ಲಾಳ II ಮತ್ತು ಅವರ ಪತ್ನಿ ರಾಣಿ ಕೇತಲಾದೇವಿ ಅವರು ನಿರ್ಮಿಸಿದರು ಎಂದು ದಾಖಲೆಯಿದೆ. ಇಲ್ಲಿ ಹಲವಾರು ಕಥೆಗಳನ್ನು ಹೇಳುವಂತಹ ಅದ್ಭುತವಾದ ಶಿಲ್ಪಗಳನ್ನು ನೀವು ಕಾಣಬಹುದು.
ಶಾಂತಲೇಶ್ವರ ದೇಗುಲ
ಹೊಯ್ಸಳೇಶ್ವರ ದೇಗುಲದ ಸಮೀಪದಲ್ಲಿಯೇ ಶಾಂತಲೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಶಾಂತಲೇಶ್ವರನನ್ನು ಪೂಜಿಸಲಾಗುತ್ತದೆ. ಈ ದೇಗುಲ ಕೂಡ ಹೊಯ್ಸಳರ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆಯಾಗಿದೆ.
ಹೊಯ್ಸಳ ಮಹೋತ್ಸವ
ಕರ್ನಾಟಕದಲ್ಲಿ ದಸರಾ ಮಹೋತ್ಸವದಂತೆಯೇ ಹೊಯ್ಸಳ ಮಹೋತ್ಸವ ಕೂಡ ನಡೆಸಲಾಗುತ್ತದೆ. ಬೇಲೂರು ಮತ್ತು ಹಳೇಬೀಡು ನಗರದಾದ್ಯಂತ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ದೇವಾಲಯಗಳ ಸುತ್ತಲಿನ ಗ್ರಾಮಗಳನ್ನು ಲೈಟಿಂಗ್‌ಗಳಿಂದ ಅಲಂಕರಿಸಲಾಗುತ್ತದೆ. ಕರ್ನಾಟಕದ ಎಲ್ಲ ರೀತಿಯ ಕಲಾವಿದರು ಬಂದು ಇಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿ ಹೋಗುತ್ತಾರೆ. ಹಲವು ದಿನಗಳ ಮಟ್ಟಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಆಹಾರ ಮೇಳ ಸೇರಿ ಅನೇಕ ರೀತಿಯ ಮೇಳಗಳನ್ನು ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಮಕ್ಕಳಿಗೆ, ವಯಸ್ಕರಿಗೆಂದು ಹಲವಾರು ಆಟೋಟಗಳನ್ನೂ ನಡೆಸಲಾಗುತ್ತದೆ.