ಚಾಮರಾಜನಗರ: ಸರ್ಕಾರದ “ಶಕ್ತಿ” ಯೋಜನೆಗೆ (Shakti Scheme) ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಉಚಿತ ಪ್ರಯಾಣದ (Free Bus Service) ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಈಗ ವೀಕೆಂಡ್ ಸಂದರ್ಭದಲ್ಲಿ ಮಹಿಳೆಯರು ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಬಸ್‌ಗಳು ತುಂಬಿದ ಪ್ರದರ್ಶನವನ್ನು ನೀಡುತ್ತಾ ಬರುತ್ತಿವೆ. ಈಗ ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ (Himavad Gopalaswamy Hill) ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇಲ್ಲೀಗ ಜನವೋ ಜನ!
ಬಂಡಿಪುರ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಐತಿಹಾಸಿಕ ದೇವಸ್ಥಾನ ಇದಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿದೆ. ಈ ಬೆಟ್ಟವು ಅತಿ ಎತ್ತರದಲ್ಲಿ ಇರುವ ಕಾರಣ, ಧಾರ್ಮಿಕ ಕ್ಷೇತ್ರವಾಗಿ ಮಾತ್ರವಲ್ಲದೆ, ಪ್ರವಾಸಿ ತಾಣವಾಗಿಯೂ ಇದು ಹೆಸರುವಾಸಿ.
ಇದನ್ನೂ ಓದಿ: Blackmail Case: ಗುರುವಿಗೇ ಶಿಷ್ಯನ ತಿರುಮಂತ್ರ; ಪ್ರೊಫೆಸರ್ ಬೆತ್ತಲೆ ವಿಡಿಯೊ ಕಳುಹಿಸಿ 4 ಲಕ್ಷ ರೂ.ಗೆ ಡಿಮ್ಯಾಂಡ್
ಚಲಿಸುವ ಮೋಡಗಳು, ಜೋರಾಗಿ ಬೀಸುವ ತಂಪು ಗಾಳಿ, ಸುತ್ತಲೂ ಹಿಮ ಆವರಿಸಿರುವ ವಾತಾವರಣ ಇಲ್ಲಿ ಸಿಗಲಿದೆ. ಹೀಗಾಗಿ ಗೋಪಾಲಸ್ವಾಮಿ ಬೆಟ್ಟದ ಚೆಕ್ ಪೋಸ್ಟ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಇರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ತುಸು ಹೆಚ್ಚಳವಾಗಿದೆ.
ಅತಿ ಎತ್ತರದ ಶಿಖರ
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಲ್ಲಿನ ವೇಣುಗೋಪಾಲಸ್ವಾಮಿ ದೇವಸ್ಥಾನವು 14ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಅಗಸ್ತ್ಯ ಋಷಿಯು ಈ ದೇವಸ್ಥಾನವನ್ನು ನಿರ್ಮಿಸಿರುವುದು ಎಂಬ ಪ್ರತೀತಿ ಇದೆ. ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶ್ರೀಕೃಷ್ಣ ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುವ ವಿಗ್ರಹವಿದೆ.
“ಹಿಮವದ್” ಹೆಸರು ಬಂದಿದ್ದು ಏಕೆ?
ವೇಣುಗೋಪಾಲಸ್ವಾಮಿ ದೇವಾಲಯದ ಸುತ್ತಮುತ್ತಲ ಪ್ರದೇಶವು ಹಸಿರಿನಿಂದ ಕೂಡಿದೆ. ಇಲ್ಲಿನ ವರ್ಷದ ಹೆಚ್ಚಿನ ದಿನಗಳಲ್ಲಿ ಬೆಟ್ಟವನ್ನು ನೋಡಿದಾಗ ಮಂಜು ಮುಸುಕಿದ ಅನುಭವವನ್ನು ನೀಡುತ್ತದೆ. ಹೀಗಾಗಿ ಇದಕ್ಕೆ “ಹಿಮವದ್” ಎಂಬ ಹೆಸರು ಬಂದಿದೆ.
ಭೇಟಿ ಸಮಯ ಏನು?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಯಾವ ದಿನ ಬೇಕಾದರೂ ಭೇಟಿ ನೀಡಬಹುದು. ಆದರೆ, ಬೆಳಗ್ಗೆ 8.30ರಿಂದ ಸಂಜೆ 4 ಗಂಟೆ ವರೆಗೆ ಮಾತ್ರ ಪ್ರವೇಶದ ಅವಕಾಶ ಇದೆ.
ಇದನ್ನೂ ಓದಿ: Weather report: ವೀಕೆಂಡ್ ಅಂತ ಹೊರಗೆ ಹೋಗುವ ಮುನ್ನ ಎಚ್ಚರ; ಇಂದು ಇರಲಿದೆ ಮಳೆ ಅಬ್ಬರ
ಮಹಿಳೆಯರ ಸಂಡೇ ಟ್ರಿಪ್ ಹೀಗಿದೆ ನೋಡಿ!
ಸಮೀಪ ಇನ್ನೇನು ನೋಡಬಹುದು?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವವರು ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ಪ್ಲ್ಯಾನ್ ಮಾಡಿಕೊಳ್ಳಬಹುದು. ಬಂಡೀಪುರ ರಾಷ್ಟ್ರೀಯ ಉದ್ಯಾನವು ಇಲ್ಲಿಂದ 20 ಕಿ.ಮೀ ದೂರವಿದ್ದರೆ, ನಂಜನಗೂಡು 55 ಕಿ.ಮೀ. ದೂರದಲ್ಲಿದೆ. ಇನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಸೂರ್ಯಕಾಂತಿ ತೋಟಗಳು ಆಕರ್ಷಿಸುತ್ತಿವೆ.