Site icon Vistara News

Tractor accident : ಉಳುಮೆ ವೇಳೆ ಟ್ರ್ಯಾಕ್ಟರ್‌ ಪಲ್ಟಿ; ನಿವೃತ್ತ ಶಿಕ್ಷಕ ಸಾವು

Tractor overturns while ploughing field

ಬೆಳಗಾವಿ: ಇಲ್ಲಿನ ಖಾನಾಪುರ ತಾಲೂಕಿನ ಹೆಮ್ಮಡಗಾ ರಸ್ತೆಯಲ್ಲಿರುವ ತಿವೋಳಿವಾಡಾದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ (Tractor accident ) ಆಗಿ ನಿವೃತ್ತ ಶಿಕ್ಷಕ ಸಾವನ್ನಪ್ಪಿದ್ದಾರೆ. ಪಾಂಡುರಂಗ ಲಾಟಗಾಂವಕರ (61) ಮೃತ ದುರ್ದೈವಿ.

ಪಾಂಡುರಂಗ ನಿವೃತ್ತಿಯ ನಂತರ ಕೃಷಿ ಮಾಡಲು ಟ್ರ್ಯಾಕ್ಟರ್ ಖರೀದಿಸಿದ್ದರು. ಇಂದು ಮಂಗಳವಾರ (ಜು.26) ಪಾಂಡುರಂಗ ಅವರೇ ಟ್ರ್ಯಾಕ್ಟರ್ ಉಪಯೋಗಿಸಿ ಉಳುಮೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಏಕಾಏಕಿ ಟ್ರ್ಯಾಕ್ಟರ್‌ ಪಲ್ಟಿಯಾಗಿ ಮಧ್ಯಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಖಾನಾಪುರ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಮಾವು ತುಂಬಿದ್ದ ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿ

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿರುವ ಮಾವು ಮಾರುಕಟ್ಟೆ ಸಮೀಪ ಮಾವು ತುಂಬಿದ್ದ ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿಯಾಗಿ (Tractor Accident) ಕಾರ್ಮಿಕನೊಬ್ಬ ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕ ಇಂದಿರಾನಗರ ನಿವಾಸಿ ಶಫಿ (35) ಮೃತ ದುರ್ದೈವಿ.

ಮಾವು ತುಂಬಿದ್ದ ಟ್ರ್ಯಾಕ್ಟರ್‌ ಟ್ರಾಲಿ ಮೇಲೆ ಮಹಿಳೆ ಸೇರಿ ನಾಲ್ವರು ಕಾರ್ಮಿಕರು ಕುಳಿತಿದ್ದರು. ಮಾರುಕಟ್ಟೆಗೆ ಆಗಮಿಸಿದ ವೇಳೆ ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿದ್ದು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮಹಿಳೆಗೂ ಗಾಯವಾಗಿದ್ದು ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಳಗುಪ್ಪ ರೈಲಿಗೆ ತಲೆವೊಡ್ಡಿ ನಿವೃತ್ತ ಉಪನ್ಯಾಸಕ ಆತ್ಮಹತ್ಯೆ

ಶಿವಮೊಗ್ಗದ ವಿನೋಬ ನಗರದ  2ನೇ ಹಂತದ ಡೆಡ್ ಎಂಡ್‌ನಲ್ಲಿರುವ ರೈಲ್ವೆ ಟ್ರ್ಯಾಕ್ (Railway Track) ಬಳಿ ನಿವೃತ್ತ ಉಪನ್ಯಾಸಕ ಆತ್ಮಹತ್ಯೆ (Retired Lecturer) ಮಾಡಿಕೊಂಡಿದ್ದಾರೆ. ಡಿವಿಎಸ್ ಕಾಲೇಜಿನ (Dvs college) ನಿವೃತ್ತ ಉಪನ್ಯಾಸಕ ವಿಶ್ವನಾಥ್‌ (70) (Self Harming) ಮೃತ ದುರ್ದೈವಿ.

ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ಫಿಸಿಕಲ್ ಡೈರೆಕ್ಟರ್ ಆಗಿದ್ದ ವಿಶ್ವನಾಥ್ ಅವರು 2013 ರಲ್ಲಿ ಉಪನ್ಯಾಸಕ ಹುದ್ದೆಯಿಂದ ನಿವೃತ್ತರಾಗಿದ್ದರು. ಸಾಲದಿಂದ ಬೇಸತ್ತು ರೈಲಿಗೆ ತಲೆವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶ್ವನಾಥ್ ಅವರು ಬೆಂಗಳೂರಿನ ಮಗನ ಮನೆಯಿಂದ ಮೊನ್ನೆ ವಾಪಸ್ಸಾಗಿದ್ದರು. ನಂತರ ಸಹೋದರಿಯೊಂದಿಗೆ ಬೇಸರದಿಂದ ಮಾತನಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ವಾಕಿಂಗ್‌ಗೆಂದು ಹೊರ ಹೋಗಿದ್ದ ವಿಶ್ವನಾಥ್‌, ತಾಳಗುಪ್ಪ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಭಾಗವಾಗಿ ದೇಹ ಬಿದ್ದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ರೈಲ್ವೆ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.

ಇದನ್ನೂ ಓದಿ:Rain News: ಮಳೆ ಅಬ್ಬರಕ್ಕೆ ಮತ್ತೆರಡು ಬಲಿ, ಮನೆ ಚಾವಣಿ ಕುಸಿದು 15 ತಿಂಗಳ ಮಗು, ವೃದ್ಧೆ ಬಲಿ

ವಿದ್ಯುತ್‌ ತಂತಿ ತಗುಲಿ ರೈತ- ಜಾನುವಾರು ಸಾವು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ರೈತ ಹಾಗೂ ಎತ್ತು ಮೃತಪಟ್ಟಿವೆ. ಬಸವರಾಜ್ ಹೆಗಲೇರಿ (24) ಮೃತ ದುರ್ದೈವಿ. ಜಮೀನಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿಗೆ ಬಾರುಕೋಲು ತಗುಲಿ ಬಸವರಾಜ್‌ ಹಾಗೂ ಜತೆಗೆ ಇದ್ದ ಎತ್ತು ಜೀವ ಬಿಟ್ಟಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಚ್ಚಿ ಯುವಕ ಸಾವು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜಮೀನು ಕೆಲಸಕ್ಕೆ ಹೋಗಿದ್ದ ಯುವಕನಿಗೆ ಹಾವು ಕಚ್ಚಿದೆ. ಬೆಳಗ್ಗೆ ಜಮೀನು ಕೆಲಸಕ್ಕೆ ಹೋಗಿದ್ದ ದೇವರಾಜ್ (25) ಎಂಬುವವರಿಗೆ ಹಾವು ಕಚ್ಚಿದೆ. ಕೂಡಲೇ ದೇವರಾಜ್‌ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version