Site icon Vistara News

Dasara 2022 | ಹೊಂಬುಜ ದಸರಾ ನವರಾತ್ರಿಗೆ ಪಾರಂಪರಿಕ ಚಾಲನೆ; ಸಿಗಂಧೂರಿನಲ್ಲಿ ಶರನ್ನವರಾತ್ರಿ ಸಂಭ್ರಮ

smg hombuja

ರಿಪ್ಪನ್‌ಪೇಟೆ: ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅತಿಶಯ ಶ್ರೀ ಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಸೋಮವಾರ ಪರಂಪರಾನುಗತವಾಗಿ ಆಚರಿಸುತ್ತಾ ಬರಲಾಗಿರುವ (Dasara 2022) ಶರನ್ನವರಾತ್ರಿ ಮಹೋತ್ಸವಕ್ಕೆ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಘಟಸ್ಥಾಪನೆಯ ಮೂಲಕ ಚಾಲನೆ ನೀಡಿದರು.

ದೇಶದ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತವೃಂದದವರು ಪೂಜಾ ಮಹೋತ್ಸವಗಳಲ್ಲಿ ಪಾಲ್ಗೊಂಡಿದ್ದರು. ಶ್ರೀಗಳವರು ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸಿ ಎಲ್ಲರ ಸನ್ಮಂಗಲಕ್ಕಾಗಿ ಅರಿಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಶ್ರೀಕ್ಷೇತ್ರದಲ್ಲಿ ಶ್ರೀಗಳ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಪ್ರತಿದಿನ ಧಾರ್ಮಿಕ ವಿಧಿ-ವಿಧಾನ ಪೂಜಾ ಮಹೋತ್ಸವಗಳು ನೆರವೇರಲಿವೆ. ಅ.2ರಂದು ಸರಸ್ವತಿ ಪೂಜೆ, ಅ.3ರಂದು ಜೀವದಯಾಷ್ಟಮಿ, ಅ.4ರಂದು ಆಯುಧಪೂಜೆ, ಅ.5ರಂದು ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ.

ಸಿಗಂಧೂರಿನಲ್ಲಿ ನವರಾತ್ರಿ ಉತ್ಸವಕ್ಕೆ ಪೂಜೆ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.

ಅಲಂಕಾರದಿಂದ ಸಿಂಗಾರಗೊಂಡ ಸಿಗಂಧೂರು ಚೌಡೇಶ್ವರಿ
ತುಮರಿ(ಸಾಗರ): ಶ್ರೀಕ್ಷೇತ್ರ ಸಿಗಂಧೂರು ಚೌಡೇಶ್ವರಿ ಸನ್ನಿಧಾನದಲ್ಲಿ ಶರನ್ನಾವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸಿಗಂದೂರು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದು ಸಂಪೂರ್ಣ ದೇವಾಲಯ ಬಗೆ ಬಗೆಯ ಹೂವುಗಳಿಂದ ಸಿಂಗರಿಸಲಾಗಿದೆ.

ಧರ್ಮದರ್ಶಿ ಎಸ್.ರಾಮಪ್ಪನವರು ಸಕುಟುಂಬ ಸಮೇತರಾಗಿ ಮಂಗಳ ವಾಧ್ಯಗಳ ಘೋಷಗಳೊಂದಿಗೆ ದೇವಾಲಯಕ್ಕೆ ತೆರಳಿ ನಿರ್ವಿಘ್ನವಾಗಿ ನವರಾತ್ರಿ ಉತ್ಸವ ನಡೆಯವಂತೆ ಅನುಗ್ರಹ ನೀಡಬೇಕೆಂದು ದೇವಿಯಲ್ಲಿ ಹಾಗೂ ನಾರಾಯಣ ಗುರುಗಳಲ್ಲಿ ಪ್ರಾರ್ಥಿಸಿದರು. ದೇವಸ್ಥಾನದ ವ್ಯವಸ್ಥಾಪಕ ಪ್ರಕಾಶ್ ಭಂಡಾರಿ ಹಾಗೂ ಅರ್ಚಕ ವೃಂದದವರು ಮಂಗಳ ವಾದ್ಯದೊಂದಿಗೆ ಧರ್ಮದರ್ಶಿಗಳ ಮನೆಗೆ ತೆರಳಿ ಸಂಪ್ರದಾಯದಂತೆ ಫಲತಾಂಬೂಲ ನೀಡಿ ನವರಾತ್ರಿ ಉತ್ವವಕ್ಕೆ ಅನುಮತಿ ಕೋರಿದರು.

ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಲು ಸೋಮವಾರ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ಅವರನ್ನು ಪೂರ್ಣ ಕುಂಭ ಕಳಸ, ಚಂಡೆ ಮಂಗಳ ವಾಧ್ಯದೊಂದಿಗೆ ಬರಮಾಡಿಕೊಳ್ಳಲಾಯಿತು.

ಇದನ್ನೂ ಓದಿ | Mysore dasara | ಅದ್ಧೂರಿ ಅಲ್ಲ, ಅಧ್ವಾನದ ದಸರಾ; ಗಣ್ಯರ ಗೈರಿನಿಂದ ಯುವ ದಸರಾ ಮುಂದೂಡಿಕೆ

Exit mobile version