Site icon Vistara News

Traffic Rules : ಟ್ರಾಫಿಕ್‌ ನಿಯಮ ಉಲ್ಲಂಘನೆಯ ದಂಡ 50% ಕಡಿತ ಆಫರ್‌ ಫೆಬ್ರವರಿ 28ರವರೆಗೆ ವಿಸ್ತರಣೆ, ನಾಳೆ ಆದೇಶ

Traffic

#image_title

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. ೫೦ರ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಿದ ಆಫರನ್ನು ಫೆಬ್ರವರಿ ೨೮ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಬಗ್ಗೆ ಮಂಗಳವಾರ ಆದೇಶ ಹೊರಡಿಸುವ ನಿರೀಕ್ಷೆ ಇದೆ.

ರಿಯಾಯಿತಿ ಘೋಷಿಸಿದ ಬಳಿಕ ಕಳೆದ ಒಂಬತ್ತು ದಿನಗಳಲ್ಲಿ ೧೨೦ ಕೋಟಿ ರೂಪಾಯಿಗೂ ಅಧಿಕ ದಂಡ ಸಂಗ್ರಹವಾಗಿತ್ತು. ಕೊನೆಯ ದಿನವಾದ ಶನಿವಾರ ಒಂದೇ ದಿನ ೩೧.೨೬ ಕೋಟಿ ರೂ. ದಂಡ ವಸೂಲಾಗಿತ್ತು. ಇದರ ಜತೆಗೆ ಭಾರಿ ಜನಪ್ರಿಯಗೊಂಡ ಈ ಆಫರನ್ನು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಸಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಈ ಬೇಡಿಕೆಗಳನ್ನು ಆಧರಿಸಿ ಟ್ರಾಫಿಕ್‌ ವಿಶೇಷ ಕಮೀಷನರ್‌ ಅವರು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಿಗಳ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಈ ಬೇಡಿಕೆಯನ್ನು ಈಡೇರಿಸಲಾಗುವುದು. ಇದರ ಕುರಿತು ಅಧಿಕೃತವಾಗಿ ಮಂಗಳವಾರ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹೇಳಿದ್ದಾರೆ. ೫೦% ಕೊಡುಗೆಯಡಿ ದಂಡ ಪಾವತಿಸಲು ಫೆಬ್ರವರಿ ೧೪ರಿಂದ ೨೮ರವರೆಗೆ ಹೊಸ ಕಾಲಾವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

೨೦೨೨ರ ಜೂನ್‌ ೨೫ರಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ರಾಷ್ಟ್ರೀಯ ಲೋಕ ಅದಾಲತ್‌ ನಡೆದಾಗ ಅಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗಿತ್ತು. ಅದೇ ಆಧಾರದಲ್ಲಿ ಬಾಕಿ ಉಳಿದ ಪ್ರಕರಣಗಳನ್ನು ನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸರಕಾರಕ್ಕೆ ಸಲಹೆ ನೀಡಿದ್ದರು.

ʻʻರಿಯಾಯಿತಿಯ ಕುರಿತು ಸರ್ಕಾರವನ್ನು ಒಪ್ಪಿಸಲು ನಮಗೆ ಮೂರು ತಿಂಗಳು ಕಾಲಾವಕಾಶ ಹಿಡಿದಿತ್ತು. ಇದೀಗ ಅದರಿಂದ ಸಾಕಷ್ಟು ಅನುಕೂಲವಾಗಿದೆ. ಸಾರ್ವಜನಿಕರು ಮತ್ತು ಸರ್ಕಾರ, ಸಾರಿಗೆ ಇಲಾಖೆಗೂ ಇದು ಉಪಯುಕ್ತವಾಗಿದೆ. ಇದನ್ನು ಮನಗಂಡು ದಂಡ ಪಾವತಿ ಮಾಡುವ ಅವಧಿ ವಿಸ್ತರಣೆಗೆ ಕಾಲಾವಕಾಶ ಕೇಳಿದರು. ಈ ಕುರಿತು ಸ್ಪೆಷಲ್ ಕಮಿಷನರ್ ಪತ್ರ ಬರೆದಿದ್ದಾರೆ. ಹೀಗಾಗಿ ದಂಡ ಕಟ್ಟಲು ಮತ್ತೆ ಕಾಲಾವಕಾಶ ನೀಡಲಾಗಿದೆ ಎಂದು ನ್ಯಾಯಮೂರ್ತಿ ವೀರಪ್ಪ ಹೇಳಿದ್ದಾರೆ.

ಭಾರಿ ಜನಪ್ರಿಯತೆ ಪಡೆದ ಯೋಜನೆ

ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ಫೈನ್‌ ಪಾವತಿಸುವುದಕ್ಕೆ ಸವಾರರು ಮುಗಿಬಿದ್ದಿದ್ದರು. ಟ್ರಾಫಿಕ್‌ ಪೊಲೀಸರು ಕಂಡರೆ ಭಯಗೊಂಡು ಎಸ್ಕೇಪ್ ಆಗುತ್ತಿದ್ದ ಸವಾರರೆಲ್ಲಾ ಕಳೆದ 10 ದಿನದಿಂದ ಪೊಲೀಸರನ್ನೇ ಹುಡುಕಿಕೊಂಡು ಹೋಗಿ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದಾರೆ. ಆನ್‌ಲೈನ್‌ನಲ್ಲಿ ಹಣ ಕಟ್ಟಿದ್ದಾರೆ. ಕೊನೆಯ ಹಂತದಲ್ಲಿ ಕೆಲವರು ಜನ ಮತ್ತು ನೆಟ್‌ವರ್ಕ್‌ ಒತ್ತಡದಿಂದ ಹಣ ಪಾವತಿ ಮಾಡಲಾಗದೆ ನಿರಾಸೆ ಅನುಭವಿಸಿದರು. ಅವರಿಗೆಲ್ಲ ಈ ವಿಸ್ತರಣೆ ನಿರಾಳತೆ ತರಲಿದೆ.

ಇದನ್ನೂ ಓದಿ : Traffic Fine: 50% ರಿಯಾಯಿತಿ ಹಿನ್ನೆಲೆ: ಕೋಟಿ ಮೊತ್ತದಲ್ಲಿ ಹರಿದು ಬರುತ್ತಲೇ ಇದೆ ದಂಡದ ಹಣ!

Exit mobile version